'ಗೇಮ್‌ಚೇಂಜರ್' ಹೀನಾಯ ಸೋಲು; ಚಿರು- ಚರಣ್ ವಿರುದ್ಧ ನಿರ್ಮಾಪಕ ಗರಂ
ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಿನಿಮಾಗಳು ಸೋಲುವುದು ಇತ್ತೀಚೆಗೆ ಸರ್ವೇ ಸಾಧಾರಣ ಎನ್ನುವಂತಾಗಿದೆ. ಭಾರೀ ನಿರೀಕ್ಷೆ ಮೂಡಿಸುವ ಸಿನಿಮಾಗಳು ಹೀನಾಯವಾಗಿ ಸೋತು ನಿರ್ಮಾಪಕರಿಗೆ ಭಾರೀ ನಷ್ಟ ತಂದೊಡ್ಡುತ್ತವೆ. ನಿರ್ಮಾಪಕರು ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಹೊರಗಡೆ ಮಾತನಾಡದೇ ಸುಮ್ಮನಾಗುತ್ತಾರೆ.
ವಿಜಯ್ ದೇವರಕೊಂಡ ನಟನೆಯ 'ಲೈಗರ್', ಕಮಲ್ ಹಾಸನ್ ನಟಿಸಿದ 'ಇಂಡಿಯನ್- 2', 'ಥಗ್ ಲೈಫ್', ರಾಮ್‌ಚರಣ್ ನಟಿಸಿದ 'ಗೇಮ್ ಚೇಂಜರ್', ಸೂರ್ಯ ನಟಿಸಿದ 'ಕಂಗುವ', 'ರೆಟ್ರೋ' ಹೀಗೆ ಸಾಕಷ್ಟು ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತು ನೂರಾರು ಕೋಟಿ ನಷ್ಟ ತಂದಿದ್ದವು. ಆದರೆ ನಿರ್ಮಾಪಕರು ಮಾತ್ರ ಈ ಬಗ್ಗೆ ಮಾತನಾಡಲೇ ಇಲ್ಲ.

ಇದೇ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ 'ಗೇಮ್ ಚೇಂಜರ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಮೊದಲ ಶೋನಿಂದಲೇ ಚಿತ್ರಕ್ಕೆ ನೆಗೆಟಿವ್ ಟಾಕ್ ಬಂದಿತ್ತು. ಖ್ಯಾತ ನಿರ್ದೇಶಕ ಶಂಕರ್ ಜೊತೆ ರಾಮ್‌ಚರಣ್ ಕೈ ಜೋಡಿಸಿದ್ದರಿಂದ ನಿರೀಕ್ಷೆ ಡಬಲ್ ಆಗಿತ್ತು. ಆದರೆ ಔಟ್‌ಡೇಟೆಡ್ ಸ್ಟೋರಿ, ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಎನ್ನುವ ಕಾರಣಕ್ಕೆ ಪ್ರೇಕ್ಷಕರು ಅಸಮಾಧಾನಗೊಂಡಿದ್ದರು. ಎರಡೇ ದಿನಕ್ಕೆ ಫೇಕ್ ಕಲೆಕ್ಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡ ಮತ್ತೊಂದು ಎಡವಟ್ಟು ಮಾಡಿತ್ತು.
ಮೊದಲೇ ಸಿನಿಮಾ ನೋಡಿ ಬೇಸರಗೊಂಡಿದ್ದ ಪ್ರೇಕ್ಷಕರು ಕಲೆಕ್ಷನ್ ಪೋಸ್ಟರ್ ನೋಡಿ ಮತ್ತಷ್ಟು ಟ್ರೋಲ್ ಮಾಡಿಬಿಟ್ಟರು. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್‌ರಾಜು ಹಾಗೂ ಶಿರಿಷ್ ರೆಡ್ಡಿ 'ಗೇಮ್ ಚೇಂಜರ್' ಚಿತ್ರ ನಿರ್ಮಿಸಿದ್ದರು. ಬಹಳ ದಿನಗಳ ಬಳಿಕ ಸಿನಿಮಾದಿಂದ ಉಂಟಾದ ನಷ್ಟದ ಬಗ್ಗೆ ನಿರ್ಮಾಪಕ ಶಿರಿಷ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. 'ಗೇಮ್ ಚೇಂಜರ್' ಸಿನಿಮಾ ಬಂದ 3 ದಿನಗಳ ಅಂತರದಲ್ಲಿ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬಂದು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
ಎರಡೂ ಚಿತ್ರಗಳನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು. ಹಾಗಾಗಿ ಚರಣ್ ಸಿನಿಮಾದಿಂದ ಆಗಿದ್ದ ನಷ್ಟವನ್ನು ವೆಂಕಟೇಶ್ ಚಿತ್ರದಿಂದ ಸರಿದೂಗಿಸಿಕೊಂಡಿದ್ದರು. ಹೇಗೋ ಭಾರೀ ಸಂಕಷ್ಟದಿಂದ ಪಾರಾಗಿದ್ದರು. ಇದೇ ವಿಚಾರದ ಬಗ್ಗೆ ಶಿರಿಷ್ ರೆಡ್ಡಿ ಇದೀಗ ಮಾತನಾಡಿದ್ದಾರೆ. 'ಗೇಮ್ ಚೇಂಜರ್' ಸಿನಿಮಾ ನಾವೇ ಒಪ್ಪಿ ಮಾಡಿದ್ದು. ನಷ್ಟವಾಯಿತು. ಆದರೆ ಯಾರನ್ನು ದೂರುವುದಿಲ್ಲ. ಬೇಸರದ ವಿಚಾರ ಏನು ಅಂದರೆ ಈವರೆಗೆ ರಾಮ್‌ಚರಣ್ ಆಗಲಿ, ಶಂಕರ್ ಆಗಲಿ ಒಂದು ಕರೆ ಮಾಡಿ ನಮ್ಮ ಜೊತೆ ಮಾತನಾಡಿಲ್ಲ ಅದೇ ಬೇಸರ ಎಂದು ಹೇಳಿದ್ದಾರೆ.
"ಗೇಮ್ ಚೇಂಜರ್ ಚಿತ್ರದಿಂದ ನಮ್ಮ ಜೀವನ ಮುಗಿದೇ ಹೋಯಿತು ಎಂದುಕೊಂಡಿದ್ದೆವು. 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದಿಂದ ಮತ್ತೆ ಜೀವ ಬಂತು. 4 ದಿನಗಳಲ್ಲೇ ಜೀವನ ಬದಲಾಯಿತು. ಅದು ನಡೆಯದೇ ಹೋಗಿದ್ದರೆ ಶಿರಿಷ್, ದಿಲ್ ರಾಜು ಕಥೆ ಮುಗೀತು ಎನ್ನುತ್ತಿದ್ದರು. 'ಗೇಮ್ ಚೇಂಜರ್' ಸೋಲ್ತು ಯಾರಾದರೂ ತ್ಯಾಗ ಮಾಡಿದ್ರಾ? ಹೀರೊ ಸಹಾಯ ಮಾಡಿದ್ರಾ? ಕೊನೆ ಪಕ್ಷ ಏನಾಯ್ತು, ಹೇಗಿದ್ದೀರಾ ಎಂದು ಒಂದು ಫೋನ್ ಮಾಡಲಿಲ್ಲ. ರಾಮ್‌ಚರಣ್ ಸಹ ಮಾತನಾಡಿಲ್ಲ. ನಾವು ಯಾರನ್ನೂ ದೂಷಿಸುತ್ತಿಲ್ಲ. ಸಿನಿಮಾ ನಾವೇ ಒಪ್ಪಿ ಮಾಡಿದ್ದು. ಹಾಗಾಗಿ ಕಳೆದುಕೊಂಡಿದ್ದೀವಿ ಪರವಾಗಿಲ್ಲ. ನಾನು ಹೇಳುವುದು ಏನಂದ್ರೆ, ಈ ಇಂಡಸ್ಟ್ರಿ ಇರುವುದೇ ಹೀಗೆ" ಎಂದು ಶಿರಿಷ್ ಬೇಸರ ಹೊರಹಾಕಿದ್ದಾರೆ.
ಮಾತು ಮುಂದುವರೆಸಿರುವ ಶಿರಿಷ್ "ನಾವು ಯಾರ ಸಹಾಯ ಕೇಳಲಿಲ್ಲ, ನಷ್ಟ ಭರಿಸುವಂತೆಯೂ ಮನವಿ ಮಾಡಲಿಲ್ಲ. ಹೋದರೆ ನಮ್ಮದೇ ಹೋಗ್ಲಿ. ಯಾರನ್ನು ಬೇಡುವ ಸ್ಥಿತಿ ನಮಗೆ ಬಂದಿಲ್ಲ. ಸಿನಿಮಾ ಸೋಲ್ತು ಅಂತ ಚರಣ್ ಜೊತೆ ಸಂಬಂಧ ಕಡಿದುಕೊಂಡಿಲ್ಲ. ಮತ್ತೊಂದು ಸಿನಿಮಾ ಮಾಡುವ ಮಾತುಕತೆ ನಡೀತಿದೆ. 'ಗೇಮ್ ಚೇಂಜರ್' ಚಿತ್ರದಿಂದ ಬಹಳ ನಷ್ಟವಾಯಿತು. ಆ ಮೊತ್ತ ಹೇಳಿದರೆ ಚೆನ್ನಾಗಿರಲ್ಲ. ಸ್ವತಃ ಚಿರಂಜೀವಿ ಮಾತುಕತೆ ನಡೆಸಿ ಈ ಸಿನಿಮಾ ಖುದುರಿಸಿದ್ದರು" ಎಂದು ವಿವರಿಸಿದ್ದಾರೆ.


Click it and Unblock the Notifications










