Project- K: ಪ್ರಭಾಸ್ ಅವತಾರಕ್ಕೆ ಫ್ಯಾನ್ಸ್ ಕಂಗಾಲು.. ಅಯ್ಯೋ 'ಪ್ರಾಜೆಕ್ಟ್- K' ಕಥೆನೂ ಮುಗೀತಾ?
ಬಹುನಿರೀಕ್ಷಿತ 'ಪ್ರಾಜೆಕ್ಟ್- K' ಚಿತ್ರದ ಟೀಸರ್ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಅದಕ್ಕು ಮುನ್ನ ಚಿತ್ರತಂಡ ಚಿತ್ರದ ನಾಯಕ ಪ್ರಭಾಸ್ ಫಸ್ಟ್ ಲುಕ್ ರಿವೀಲ್ ಮಾಡಿದೆ. ಆದರೆ ಪೋಸ್ಟರ್ ನೋಡಿದ ಯಂಗ್ ರೆಬಲ್ ಸ್ಟಾರ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. 600 ಕೋಟಿ ರೂ. ಬಜೆಟ್ ಸಿನಿಮಾ ಪೋಸ್ಟರ್ ಇಷ್ಟು ಕೆಟ್ಟದಾಗಿ ಮಾಡಿದ್ದಾರಲ್ಲ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಾಗ್ ಅಶ್ವಿನ್ 'ಪ್ರಾಜೆಕ್ಟ್- K' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅತಿಹೆಚ್ಚು ಬಜೆಟ್ಟಿನ ಸಿನಿಮಾ ಇದಾಗಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸೈನ್ಸ್ ಫಿಕ್ಷನ್ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಇತ್ತೀಚೆಗೆ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಲುಕ್ ರಿವೀಲ್ ಮಾಡಿದ್ದ ತಂಡ ಈ ಪ್ರಭಾಸ್ ಫಸ್ಟ್ ಪೋಸ್ಟರ್ ತೇಲಿಬಿಟ್ಟಿದೆ.

'ಮಹಾನಟಿ' ಬಳಿಕ ಪ್ರಭಾಸ್ ಹೀರೊ ಆಗಿ ನಾಗ್ ಅಶ್ವಿನ್ 'ಪ್ರಾಜೆಕ್ಟ್- K' ಸಿನಿಮಾ ಘೋಷಿಸಿದ್ದರು. ಅಂದಿನಿಂದಲೂ ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುತ್ತಾ ಬಂದಿತ್ತು. ಆಗಿಂದಾಗ್ಗೆ ಥೀಮ್ ಪೋಸ್ಟರ್‌ಗಳು ರಿಲೀಸ್ ಆಗಿ ಪ್ರಭಾಸ್ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಿತ್ತು. ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಲುಕ್ ಹೇಗಿರುತ್ತೋ ಎಂದು ಊಹಿಸಿಕೊಂಡೇ ಥ್ರಿಲ್ಲಾಗಿದ್ದರು. ಫ್ಯಾನ್ ಮೇಡ್ ಪೋಸ್ಟರ್‌ಗಳು ಆ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದವು.
ಪೋಸ್ಟರ್ ನೋಡಿದವರಿಗೆ ನಿರಾಸೆ
ಮೊದಲ ನೋಟದಲ್ಲೇ 'ಪ್ರಾಜೆಕ್ಟ್- K' ಪ್ರಭಾಸ್ ಫಸ್ಟ್ ಲುಕ್ ಅಭಿಮಾನಿಗಳಿಗೆ ಬೇಸರ ತಂದಿದೆ. ಅಷ್ಟೆಲ್ಲಾ ನಿರೀಕ್ಷೆ ಇಟ್ಟುಕೊಂಡಿದ್ದ ಪೋಸ್ಟರ್ ಇಷ್ಟು ಕೆಟ್ಟದಾಗಿದೆ ಅಲ್ವಾ? ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಪ್ರಭಾಸ್ ಲುಕ್ ವಿಭಿನ್ನವಾಗಿದೆ. ರೋಬೋ ರೀತಿಯ ಸೂಟ್ ಧರಿಸಿದ್ದು ಉದ್ದನೆಯ ಜುಟ್ಟು, ಗಡ್ಡಬಿಟ್ಟು ಪ್ರಭಾಸ್ ದರ್ಶನ ಕೊಟ್ಟಿದ್ದಾರೆ. ಆತ ನೆಲವನ್ನು ಗುದ್ದಿದ್ರೆ, ಅದು ಪುಡಿಪುಡಿ ಆದಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ.
ಐರನ್‌ಮ್ಯಾನ್ ಲುಕ್ ಕಾಪಿ!
ಇನ್ನು ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ನೋಡುತ್ತಿದ್ದರೆ ಅವೆಂಜರ್ಸ್ ಸರಣಿಯ ಐರನ್‌ಮ್ಯಾನ್ ಪೋಸ್ಟರ್ ಲುಕ್ ಕಾಪಿ ಮಾಡಿದಂತಿದೆ. ಇಷ್ಟು ದೊಡ್ಡ ಸಿನಿಮಾ ಪೋಸ್ಟರ್ ಡಿಸೈನ್ ಮಾಡುವಾಗ ಹೊಸದಾಗಿ ಏನಾದರೂ ಮಾಡಬಹುದಿತ್ತು. ಎಲ್ಲಾ ಬಿಟ್ಟು ಐರನ್‌ಮ್ಯಾನ್ ಲುಕ್ ಕಾಪಿ ಮಾಡಿದ್ದಾರೆ. ಅಲ್ಲಿಲ್ಲಿ ಕೊಂಚ ಬದಲಿಸಿ ಅದನ್ನೇ ಕಾಪಿ ಪೇಸ್ಟ್ ಮಾಡಿದಂತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಫ್ಯಾನ್ ಮೇಡ್ ಪೋಸ್ಟರ್ ವಾಸಿ!
'ಪ್ರಾಜೆಕ್ಟ್- K' ಸಿನಿಮಾ ಘೋಷಣೆ ಆದ ದಿನದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫ್ಯಾನ್ ಮೇಡ್ ಪೋಸ್ಟರ್‌ಗಳು ಹರಿದಾಡುತ್ತಿದೆ. ಅದರಲ್ಲಿ ಒಂದು ಪೋಸ್ಟರ್ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಸದ್ಯ ಚಿತ್ರತಂಡ ರಿಲೀಸ್ ಮಾಡಿರುವ ಅಫೀಷಿಯಲ್ ಪೋಸ್ಟರ್‌ಗಿಂತ ಈ ಫ್ಯಾನ್ ಮೇಡ್ ಪೋಸ್ಟರ್ ಬಹಳ ಚೆನ್ನಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಎರಡೂ ಪೋಸ್ಟರ್ ಕೊಲಾಜ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಒಟ್ಟಾರೆ 'ಪ್ರಾಜೆಕ್ಟ್- K' ಪ್ರಭಾಸ್ ಫಸ್ಟ್ ಲುಕ್‌ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ.
'ಸಲಾರ್' ಮೇಲೆ ಭಾರ?
'ಬಾಹುಬಲಿ' ಸರಣಿ ಬಳಿಕ ಪ್ರಭಾಸ್ ನಟನೆಯ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇತ್ತೀಚೆಗೆ ಬಂದ 'ಆದಿಪುರುಷ್' ಸಿನಿಮಾ ಪೋಸ್ಟರ್, ಟೀಸರ್ ಬಗ್ಗೆ ಕೂಡ ಇದೇ ರೀತಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಸದ್ಯ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ಇತ್ತೀಚೆಗೆ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. 'ಪ್ರಾಜೆಕ್ಟ್- K' ಪ್ರಭಾಸ್‌ಗೆ ದೊಡ್ಡ ಬ್ರೇಕ್ ಕೊಡುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದರೆ ಪೋಸ್ಟ್ ಲುಕ್ ಪೋಸ್ಟರ್ ನೋಡಿದವರು ಕಂಗಾಲಾಗಿದ್ದಾರೆ. 'ಸಲಾರ್' ಸಿನಿಮಾ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಳ್ಳುವುದು ಉತ್ತಮ ಎನ್ನುತ್ತಿದ್ದಾರೆ.


Click it and Unblock the Notifications











