Project K: 'ಪ್ರಾಜೆಕ್ಟ್ - K' ಪೋಸ್ಟರ್‌ನಲ್ಲಿ ಟೀಮ್ ಮಾಡಿದ ಬದಲಾವಣೆ ಕಂಡು ನಕ್ಕ ಸಿನಿ ರಸಿಕರು!
ನಿನ್ನೆಯಷ್ಟೇ ( ಜುಲೈ 19 ) ಟಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾ ಪ್ರಾಜೆಕ್ಟ್ Kನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಬಾಹುಬಲಿ ಚಿತ್ರ ಸರಣಿಯ ಅದ್ಭುತ ಯಶಸ್ಸಿನ ಬಳಿಕ ಬಿಡುಗಡೆಗೊಂಡ ಯಾವುದೇ ಚಿತ್ರ ಸಹ ಪ್ರಭಾಸ್ ಸ್ಟಾರ್‌ಡಂಗೆ ತಕ್ಕ ಯಶಸ್ಸನ್ನು ತಂದುಕೊಡುವಲ್ಲಿ ಯಶಸ್ವಿಯಾಗದೇ ಮಕಾಡೆ ಮಲಗಿದ್ದು, ಸದ್ಯ ಎಲ್ಲರ ಚಿತ್ತ ಪ್ರಭಾಸ್ ನಟನೆಯ ಈ ಪ್ರಾಜೆಕ್ಟ್ - K ಹಾಗೂ ಸಲಾರ್ ಚಿತ್ರಗಳ ಮೇಲಿತ್ತು.
ಇದೇ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಂಡ ಪ್ರಶಾಂತ್ ನೀಲ್ ನಿರ್ದೇಶನಸ ಸಲಾರ್ ಚಿತ್ರದ ಟೀಸರ್ ಪ್ರಭಾಸ್ ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ನಟ ಈ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡುವುದು ಖಚಿತ ಎಂಬ ಭರವಸೆಯನ್ನು ಹುಟ್ಟುಹಾಕಿದ್ದು, ನಿನ್ನೆ ಬಿಡುಗಡೆಗೊಂಡ ಪ್ರಾಜೆಕ್ಟ್ - K ಚಿತ್ರದ ಫಸ್ಟ್ ಲುಕ್ ಸಲಾರ್ ಹುಟ್ಟುಹಾಕಿದ್ದ ರೀತಿಯ ಭರವಸೆ ಸೃಷ್ಟಿಸುವಲ್ಲಿ ವಿಫಲಗೊಂಡಿದೆ.

ಹೌದು, ಪ್ರಾಜೆಕ್ಟ್ - K ಚಿತ್ರದ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ಪಾಸಿಟಿವ್‌ಗಿಂತ ನೆಗೆಟಿವ್ ಪ್ರತಿಕ್ರಿಯೆಗಳನ್ನೇ ಹೆಚ್ಚು ಪಡೆದುಕೊಂಡಿದೆ. ಈ ಪೋಸ್ಟರ್ ನೋಡಿದ ಹಲವರು ಈ ಪೋಸ್ಟರ್‌ಗಿಂತ ಆದಿಪುರುಷ್ ಚಿತ್ರದ ಪೋಸ್ಟರ್‌ಗಳ ಡಿಸೈನ್ ಎಷ್ಟೋ ಚೆನ್ನಾಗಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.
ಮಹಾನಟಿ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ನಾಗ್ ಅಶ್ವಿನ್ ಈ ಪ್ರಾಜೆಕ್ಟ್ - K ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣವಾಗಿತ್ತು. ಅಲ್ಲದೇ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಇದೊಂದು ದೊಡ್ಡ ಚಿತ್ರವಾಗಲಿದೆ, 600 ಕೋಟಿ ಬಜೆಟ್ ಹಾಕಿರುವ ಕಾರಣ ಅದ್ಭುತವಾದ ವಿಎಫ್ಎಕ್ಸ್ ಚಿತ್ರದಲ್ಲಿರಲಿದೆ ಎಂಬ ವಿಶ್ವಾಸವನ್ನು ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ವ್ಯಕ್ತಪಡಿಸಿದ್ದರು.
ಆದರೆ ಈ ನಿರೀಕ್ಷೆಯನ್ನು ಇದೀಗ ಚಿತ್ರದ ಫಸ್ಟ್ ಲುಕ್ ಪೋಸ್ಟ್ ಹುಸಿಗೊಳಿಸಿದ್ದು, ಚಿತ್ರಕ್ಕೆ ಬಂಡವಾಳ ಹೂಡಿರುವ ವೈಜಯಂತಿ ಮೂವಿಸ್ ಸಿನಿ ರಸಿಕರಿಂದ ತೀವ್ರ ಟ್ರೋಲ್ ಆದ ಕಾರಣ ಪೋಸ್ಟರ್‌ನಲ್ಲಿ ತುಸು ಬದಲಾವಣೆಗಳನ್ನು ತಂದಿದೆ. ಹೌದು, ನಿನ್ನೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್ ಪೋಸ್ಟರ್ ಅನ್ನು ಡಿಲೀಟ್ ಮಾಡಿರುವ ವೈಜಯಂತಿ ಮೂವೀಸ್ ಇಂದು ಬದಲಾವಣೆ ಮಾಡಿರುವ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
ಹಳೇ ಪೋಸ್ಟರ್‌ನಲ್ಲಿ ಪ್ರಭಾಸ್ ಎತ್ತರ ಕಡಿಮೆ ಇದ್ದಂತೆ ಕಂಡು ಬಂದಿತ್ತು. ಆದರೆ ಇದೀಗ ಹೊಸ ಪೋಸ್ಟರ್‌ನಲ್ಲಿ ಆ ತಪ್ಪನ್ನು ತಿದ್ದಲಾಗಿದ್ದು, ಪ್ರಭಾಸ್ ಮುಖಭಾಗವನ್ನೂ ಸಹ ತುಸು ಬದಲಿಸಲಾಗಿದೆ. ಆದರೆ ಇದೇನು ದೊಡ್ಡ ಬದಲಾವಣೆಯಲ್ಲ, ಅಷ್ಟು ಕೋಟಿ ಖರ್ಚು ಮಾಡಿ ಚಿತ್ರ ನಿರ್ಮಿಸುವ ನಿರ್ಮಾಪಕರು ಒಳ್ಳೆಯ ಡಿಸೈನ್ ಮಾಡಿಸಲಾಗುವುದಿಲ್ಲ, ಅಲ್ಲದೇ ಇಷ್ಟು ಟ್ರೋಲ್ ಮಾಡಿದ ನಂತರವೂ ಹೊಸ ಪೋಸ್ಟರ್ ಬಿಡುಗಡೆ ಮಾಡದೇ ಈ ಥರ ಸಣ್ಣ ಬದಲಾವಣೆಗಳನ್ನು ಮಾಡಿ ಮತ್ತದೇ ಪೋಸ್ಟರ್ ಬಿಡುಗಡೆ ಮಾಡಿದೆ ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಆದಿಪುರುಷ್ ಚಿತ್ರದ ರೀತಿಯೇ ಪ್ರಾಜೆಕ್ಟ್ - K ಚಿತ್ರ ಸಹ ಆರಂಭದಿಂದಲೇ ಟ್ರೋಲ್ ಮಟೀರಿಯಲ್ ಆಗಿದ್ದು, ಈ ಪೋಸ್ಟರ್‌ಗೂ ಮುನ್ನ ಚಿತ್ರದ ಮೇಲಿದ್ದ ಜನರ ಅಭಿಪ್ರಾಯವೇ ಬದಲಾಗಿ ಹೋಗಿದೆ.


Click it and Unblock the Notifications











