Project K: ಪೋಸ್ಟರ್‌ನಲ್ಲಿ ಹೋದ ಮಾನ ಟೀಸರ್‌ನಲ್ಲಿ ಬಂತು; ಪ್ರಾಜೆಕ್ಟ್-K ಗ್ಲಿಂಪ್ಸ್ ಚಿಂದಿ, ಟೈಟಲ್ ರಿವೀಲ್!
ಕಳೆದ ತಿಂಗಳಷ್ಟೇ ಆದಿಪುರುಷ್ ಚಿತ್ರದ ಮೂಲಕ ಹೀನಾಯ ಸೋಲನ್ನು ಕಂಡಿದ್ದ ತೆಲುಗು ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಮುಂದಿನ ಚಿತ್ರಗಳ ಮೇಲೆ ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಚಿತ್ತ ನೆಟ್ಟಿದ್ದರು. ಕೆಟ್ಟ ವಿಎಫ್ಎಕ್ಸ್ ಹಾಗೂ ಕಳಪೆ ಮೇಕಿಂಗ್ ವಿಚಾರಕ್ಕಾಗಿ ಆದಿಪುರುಷ್ ಹೀನಾಯವಾಗಿ ಟ್ರೋಲ್ ಆದ ಬಳಿಕ ಬಂದ ಪ್ರಭಾಸ್ ನಟಿಸಿರುವ ಮುಂದಿನ ಚಿತ್ರ ಸಲಾರ್‌ನ ಟೀಸರ್ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡು ಪ್ರಭಾಸ್ ಕಮ್‌ಬ್ಯಾಕ್ ಮಾಡುವ ಸುಳಿವನ್ನು ನೀಡಿತ್ತು.
ಆದರೆ ಮೊನ್ನೆಯಷ್ಟೇ ಹೊರಬಂದ ಪ್ರಭಾಸ್ ನಟನೆಯ ಮತ್ತೊಂದು ಮುಂದಿನ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಚಿತ್ರ ಮೇಲಿನ ನಿರೀಕ್ಷೆಯನ್ನು ಉಲ್ಟಾ ಮಾಡಿಬಿಟ್ಟಿತು. ಹೌದು, ಸಲಾರ್ ಬಳಿಕ ಬಿಡುಗಡೆಯಾಗಲಿರುವ ಪ್ರಾಜೆಕ್ಟ್-K ಚಿತ್ರದ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು ಹಾಗೂ ಕೆಟ್ಟ ವಿಮರ್ಶೆಗಳನ್ನೂ ಸಹ ಪಡೆದುಕೊಂಡಿತ್ತು.

ಹೌದು, ಪ್ರಾಜೆಕ್ಟ್ - K ಚಿತ್ರದ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್ ಪಾಸಿಟಿವ್‌ಗಿಂತ ನೆಗೆಟಿವ್ ಪ್ರತಿಕ್ರಿಯೆಗಳನ್ನೇ ಹೆಚ್ಚು ಪಡೆದುಕೊಂಡಿತ್ತು. ಈ ಪೋಸ್ಟರ್ ನೋಡಿದ ಹಲವರು ಈ ಪೋಸ್ಟರ್‌ಗಿಂತ ಆದಿಪುರುಷ್ ಚಿತ್ರದ ಪೋಸ್ಟರ್‌ಗಳ ಡಿಸೈನ್ ಎಷ್ಟೋ ಚೆನ್ನಾಗಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಡಿಸಿದ್ದರು.
ಹೀಗೆ ಫಸ್ಟ್ ಲುಕ್ ಮೂಲಕವೇ ತೀವ್ರವಾಗಿ ಟ್ರೋಲ್ ಆಗಿದ್ದ ಪ್ರಾಜೆಕ್ಟ್-K ಚಿತ್ರತಂಡ ಇಂದು ( ಜುಲೈ 21 ) ಮಧ್ಯರಾತ್ರಿ 2 ಗಂಟೆಗೆ ಚಿತ್ರದ ಗ್ಲಿಂಪ್ಸ್ ಒಂದನ್ನು ಬಿಡುಗಡೆ ಮಾಡಿ ಟ್ರೋಲ್ ಮಾಡಿದ್ದ ಸಿನಿ ರಸಿಕರಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳುವ ಮೂಲಕ ಕಮ್‌ಬ್ಯಾಕ್ ಮಾಡಿದೆ.
ಹೌದು, ಪ್ರಾಜೆಕ್ಟ್-K ಎಂದರೇನು? ಎಂಬ ಟೀಸರ್ ಒಂದನ್ನು ನಿನ್ನೆ ವೈಜಯಂತಿ ಮೂವಿಸ್ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದೆ. ಈ ಟೀಸರ್‌ನಲ್ಲಿ ತನ್ನ ಜನರನ್ನು ವೈರಿಗಳ ಗುಂಪೊಂದು ತಮ್ಮ ಅಧೀನಕ್ಕೆ ತೆಗೆದುಕೊಂಡು ಹಿಂಸೆ ನೀಡಲು ಆರಂಭಿಸಿದಾಗ ನಾಯಕ ಪ್ರಭಾಸ್ ಅಲ್ಲಿಗೆ ಧಾವಿಸಿ ಅವರನ್ನು ರಕ್ಷಿಸಲು ಮುಂದಾಗುವ ದೃಶ್ಯಗಳಿವೆ.
ಈ ಎಲ್ಲಾ ದೃಶ್ಯಗಳೂ ಸಹ ಹಾಲಿವುಡ್ ಸಿನಿಮಾ ಫೀಲ್ ಕೊಡುತ್ತಿದ್ದು, ಸೂಪರ್ ಹೀರೊ ಚಿತ್ರಗಳಲ್ಲಿ ಇರುವ ರೀತಿಯ ವೇಷಭೂಷಣಗಳನ್ನು ಪಾತ್ರಧಾರಿಗಳು ತೊಟ್ಟಿದ್ದಾರೆ. ಅಲ್ಲದೇ ಈ ಟೀಸರ್‌ನಲ್ಲಿರುವ ವಿಎಫ್‌ಎಕ್ಸ್ ಸಹ ಅದ್ಭುತವಾಗಿದ್ದು, ಈ ಟೀಸರ್ ವೀಕ್ಷಿಸಿದ ಸಿನಿ ರಸಿಕರು ಕಳಪೆ ಪೋಸ್ಟರ್ ಕಂಡು ತಮ್ಮಲ್ಲಿ ಹುಟ್ಟಿದ್ದ ಬೇಸರವನ್ನು ಟೀಸರ್ ಅಳಿಸಿ ಹಾಕಿದೆ ಎಂದು ಬರೆದುಕೊಳ್ಳುತ್ತಿದ್ದಾರೆ.
ಇನ್ನು ಈ ಗ್ಲಿಂಪ್ಸ್‌ನ ಕೊನೆಯಲ್ಲಿ ಪ್ರಾಜೆಕ್ಟ್-K ಎಂದರೇನು ಎಂಬ ಪ್ರಶ್ನೆ ಕೇಳಿ ಬರಲಿದ್ದು, ಈ ಸಂದರ್ಭಕ್ಕೆ ಸರಿಯಾಗಿ ಚಿತ್ರತಂಡ ಚಿತ್ರದ ಟೈಟಲ್ ಅನ್ನು ಪ್ರದರ್ಶಿಸಿದೆ. ಈ ಮೂಲಕ ಪ್ರಾಜೆಕ್ಟ್-K ನಲ್ಲಿ 'ಕೆ' ಎಂದರೆ ಕಲ್ಕಿ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಹೌದು, ಪ್ರಾಜೆಕ್ಟ್-K ಚಿತ್ರಕ್ಕೆ 'ಕಲ್ಕಿ 2898 AD' ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಹೀಗೆ ಅದ್ಭುತವಾಗಿ ಮೂಡಿ ಬಂದಿರುವ ಟೀಸರ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಇನ್ನೂ ಸ್ವಲ್ಪ ಚೆನ್ನಾಗಿದ್ದಿದ್ದರೆ ಇನ್ನಷ್ಟು ಭರ್ಜರಿಯಾಗಿರುತ್ತಿತ್ತು ಎನ್ನಬಹುದು.
ಮಹಾನಟಿ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ನಾಗ್ ಅಶ್ವಿನ್ ಈ 'ಕಲ್ಕಿ 2898 AD' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ ಅಮಿತಾಬ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಇದೊಂದು ದೊಡ್ಡ ಚಿತ್ರವಾಗಲಿದೆ, 600 ಕೋಟಿ ಬಜೆಟ್ ಹಾಕಿರುವ ಕಾರಣ ಅದ್ಭುತವಾದ ವಿಎಫ್ಎಕ್ಸ್ ಚಿತ್ರದಲ್ಲಿರಲಿದೆ ಎಂಬ ವಿಶ್ವಾಸವನ್ನು ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.


Click it and Unblock the Notifications











