ಸಂಬಂಧಿಕರಿಂದಲೇ ನಯನತಾರಾ- ವಿಘ್ನೇಶ್ ಶಿವನ್ ದಂಪತಿ ವಿರುದ್ಧ ದೂರು
ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ತಾರಾ ಜೋಡಿ ಇತ್ತೀಚೆಗೆ ಸರೊಗಸಿ ಪದ್ದತಿಯಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದರು. ನಯನ್ ಲೇಡಿ ಸೂಪರ್ ಸ್ಟಾರ್ ಮೆರೆದರೂ ವೈಯಕ್ತಿಕ ಕಾರಣಗಳಿಂದ ಪದೇ ಪದೇ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಮತ್ತೊಮ್ಮೆ ಆಸ್ತಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಳ್ಳುವಂತಾಗಿದೆ.
ವಿಘ್ನೇಶ್ ಶಿವನ್ ತಂದೆ ಪೂರ್ವಜರ ಆಸ್ತಿಯನ್ನು ನಮಗೆ ತಿಳಿಯದೇ ಮಾರಿಕೊಂಡಿದ್ದಾರೆ. ಅದರಲ್ಲಿ ನಮಗೂ ಪಾಲು ಕೊಡಬೇಕು ಎಂದು ವಿಘ್ನೇಶ್ ಶಿವನ್ ತಂದೆಯ ಸಹೋದರರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮಿಳುನಾಡು ತಿರುಚ್ಚಿ ಜಿಲ್ಲೆ, ಲಾಕ್‌ಕುಡಿ ಹಳ್ಳಿಗೆ ಸೇರಿದ ವಿಗ್ನೇಶ್ ಶಿವನ್ ತಂದೆಯ ಹೆಸರು ಶಿವಕೋಲುಂದು. ಅವರು ಒಂಬತ್ತು ಮಂದಿ ಅಣ್ಣ ತಮ್ಮಂದಿರು. ಶಿವಕೋಲುಂದು ಪೊಲೀಸ್ ಇನ್‌ಫಾರ್ಮರ್‌ಗೆ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ನಿಧನರಾದರು. ಆದರೆ ಅವರು ಬದುಕಿದ್ದಾಗಲೇ ಜಂಟಿ ಆಸ್ತಿಯನ್ನು ಮಾರಿಕೊಂಡಿದ್ದಾರೆ ಎಂದು ವಿಘ್ನೇಶ್ ಚಿಕ್ಕಪ್ಪಂದಿರು ಆರೋಪಿಸಿದ್ದಾರೆ.

ಜಂಟಿ ಆಸ್ತಿಯನ್ನು ಉದ್ದೇಶ ಪೂರ್ವಕವಾಗಿ ಅಣ್ಣ ತಮ್ಮಂದಿರಿಗೆ ಗೊತ್ತಿಲ್ಲದಂತೆ ಮಾರಿಕೊಂಡಿದ್ದಾರೆ ಎಂದು ಶಿವಕೋಲುಂದು ಸಹೋದರ ಮಾಣಿಕ್ಯಂ ಹಾಗೂ ಕೋಯಂಬತ್ತೂರಿನ ನಿವಾಸಿಯಾಗಿರುವ ಮತ್ತೊಬ್ಬ ಸಹೋದರ ಕುಂಚಿತ ಪಾದಂ ದೂರಿದ್ದಾರೆ. ಜಂಟಿ ಆಸ್ತಿಯನ್ನು ನಮಗೆ ತಿಳಿಯದೆ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಖರೀದಿಸಿದ ವ್ಯಕ್ತಿಗೆ ಹಣ ಪಾವತಿಸಿ, ಮರಳಿ ಆಸ್ತಿಯನ್ನು ಒಪ್ಪಿಸಲು ಅವರು ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ತಿರುಚ್ಚಿ ಡಿಎಸ್‌ಪಿ ಕಛೇರಿಯಲ್ಲಿ ದೂರು ನೀಡಿದ್ದಾರೆ.
ತಮ್ಮ ದೂರಿನಲ್ಲಿ ವಿಗ್ನೇಶ್ ಶಿವನ್, ನಯನತಾರ ಸೇರಿದಂತೆ ವಿಗ್ನೇಶ್ ಶಿವನ್ ತಾಯಿ ಮೀನಾ ಕುಮಾರಿ, ಮಗಳು ಐಶ್ವರ್ಯಳ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ದೂರಿನ ಅನ್ವಯ ವಿಚಾರಣೆ ನಡೆಸುವಂತೆ ಡಿಜಿಪಿ ಪೊಲೀಸರಿಗೆ ಆದೇಶ ನೀಡಿದ್ದಾರೆ. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತದೆ. ಒಟ್ನಲ್ಲಿ ಈ ವಿಚಾರ ಈಗ ನಯನ್- ವಿಘ್ನೇಶ್ ದಂಪತಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ನಯನತಾರ, ವಿಗ್ನೇಶ್ ಶಿವನ್ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿ ನಂತರ ಹಸೆಮಣೆ ಏರಿದ್ದರು. ಮದುವೆಯಾದ ದಿನದಿಂದಲೂ ಒಂದಿಲ್ಲೊಂದು ವಿವಾದದಲ್ಲಿ ದಂಪತಿ ಸಿಲುಕಿಕೊಳ್ಳುತ್ತಿದ್ದಾರೆ. ಮದುವೆ ನಂತರ ದಂಪತಿ ತಿರುಪತಿಗೆ ಭೇಟಿ ನೀಡಿದ್ದರು. ದೇವಸ್ಥಾನದ ಆವರಣದಲ್ಲಿ ನಯನ್ ಚಪ್ಪಲಿ ಧರಿಸಿ ಓಡಾಡಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಟಿಟಿಪಿ ಕಠಿಣ ಕ್ರಮಕ್ಕೆ ಮುಂದಾದ ಹಿನ್ನಲೆಯಲ್ಲಿ ದಂಪತಿ ಕ್ಷಮೆ ಕೋರಿ ಸಂಕಷ್ಟದಿಂದ ಪಾರಾಗಿದ್ದರು.
ಇನ್ನು ಮದುವೆಯಾದ ಕೇಲವ ಆರೇಳು ತಿಂಗಳಿಗೆ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದರು. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಎಲ್ಲರೂ ಅಚ್ಚರಿಗೊಂಡಿದ್ದರು. ನಂತರ ದಂಪತಿ ಸಾರೊಗಸಿ ವಿಧಾನದಲ್ಲಿ ಮಕ್ಕಳು ಪಡೆದಿದ್ದು ಗೊತ್ತಾಗಿತ್ತು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಸಾರೋಗಸಿ ನಿಯಮ ಉಲ್ಲಂಘಿಸಿ ದಂಪತಿ ಮಕ್ಕಳನ್ನು ಪಡೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ತಮಿಳುನಾಡು ಸರ್ಕಾರ ವಿಚಾರಣೆಗೆ ಆದೇಶ ನೀಡಿತ್ತು. ಆದರೆ ಸರೋಗಸಿ ನಿಯಮಗಳನ್ನೆಲ್ಲಾ ಅನುಸರಿಸಿರುವುದಾಗಿ ದಂಪತಿ ದಾಖಲೆ ಒದಗಿಸಿದ್ದರು.
ಮದುವೆ ನಂತರ ಕೂಡ ನಯನತಾರಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವಳಿ ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಇರೈವಾನ್, ಟೆಸ್ಟ್ ಸೇರಿದಂತೆ ಮತ್ತೊಂದು ಸಿನಿಮಾದಲ್ಲಿ ನಯನ್ ಬಣ್ಣ ಹಚ್ಚಿದ್ದಾರೆ. ಜವಾನ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಅಟ್ಲಿ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶಾರುಖ್ ಖಾನ್ ಜೋಡಿಯಾಗಿ ಲೇಡಿ ಸೂಪರ್ ಸ್ಟಾರ್ ಮಿಂಚಿದ್ದಾರೆ.


Click it and Unblock the Notifications











