ಸತತ ಸೋಲುಗಳಿಂದ ಕಂಗೆಟ್ಟ 'ಅಪ್ಪು' ನಿರ್ದೇಶಕ ಪೂರಿ 'ಭಿಕ್ಷುಕ'ನ ಹಿಂದೆ ಬಿದ್ರಾ?
ಚಿತ್ರರಂಗದಲ್ಲಿ ಗೆಲುವು ಅಷ್ಟು ಸುಲಭವಾಗಿ ಸಿಗಲ್ಲ. ಸಕ್ಸಸ್ ಸೂತ್ರ ಎನ್ನುವುದೇ ಇಲ್ಲ. ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಆಗದ ಹೊರತು ಎಷ್ಟೇ ಪ್ರಯತ್ನಪಟ್ಟರು ಉಪಯೋಗವಿಲ್ಲ. ಒಂದ್ಕಾಲದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಪೂರಿ ಜಗನ್ನಾಥ್ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ.
ಪೂರಿ ಜಗನ್ನಾಥ್ ಸಿನಿಮಾ ಮೇಕಿಂಗ್ ಸ್ಟೈಲ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಕನ್ನಡದಲ್ಲಿ ಕೂಡ 3 ಸಿನಿಮಾಗಳನ್ನು ನಿರ್ದೇಶಿಸಿ ಗೆದ್ದಿದ್ದಾರೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಚೊಚ್ಚಲ ಸಿನಿಮಾ 'ಅಪ್ಪು'ಗೆ ಆಕ್ಷನ್ ಕಟ್ ಹೇಳಿದ್ದು ಇದೇ ಪೂರಿ ಜಗನ್ನಾಥ್. ಅದಕ್ಕೂ ಮುನ್ನ ಶಿವಣ್ಣನ ಜೊತೆ 'ಯುವರಾಜ' ಸಿನಿಮಾ ಮಾಡಿದ್ದರು. ತೆಲುಗಿನಲ್ಲಿ ಈಡಿಯಟ್, 'ಅಮ್ಮ ನಾನ್ನ ಓ ತಮಿಳು ಅಮ್ಮಾಯಿ', 'ಪೋಕಿರಿ', 'ಸೂಪರ್', 'ದೇಶಮುದುರು', 'ಚಿರುತ', 'ಬುಜ್ಜಿಗಾಡು', 'ಬ್ಯುಸಿನೆಸ್‌ಮನ್', 'ಇಸ್ಮಾರ್ಟ್ ಶಂಕರ್' ಹೀಗೆ ಹಲವು ಹಿಟ್ ಸಿನಿಮಾಗಳನ್ನು ಪೂರಿ ಕಟ್ಟಿಕೊಟ್ಟಿದ್ದಾರೆ.

ತಮ್ಮ ವಿಭಿನ್ನ ಶೈಲಿಯ ನಿರೂಪಣೆಯಿಂದ ಗೆದ್ದವರು ಪೂರಿ ಜಗನ್ನಾಥ್. ಅವರ ಕೆಲ ಸಿನಿಮಾಗಳು ಕನ್ನಡಕ್ಕೂ ರೀಮೆಕ್ ಆಗಿವೆ. ಆದರೆ ಇತ್ತೀಚೆಗೆ ಪೂರಿ ನಿರ್ಮಾಪಕರಾಗಿಯೂ ಸೋಲುಂಡಿದ್ದಾರೆ. 'ಲೈಗರ್' ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ನಷ್ಟ ಅನುಭವಿಸಿದ್ದರು. ಅದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಕೊನೆಯದಾಗಿ ಬಂದ 'ಡಬಲ್ ಇಸ್ಮಾರ್ಟ್ ಶಂಕರ್' ಚಿತ್ರ ಕೂಡ ನಿರಾಸೆ ಮೂಡಿಸಿತ್ತು.
ಸದ್ಯ ತಮಿಳಿನ ವಿಜಯ್ ದೇವರಕೊಂ ನಟನೆಯ ಚಿತ್ರಕ್ಕೆ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. 'ಬೆಗ್ಗರ್' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಾರಿ ನಿರ್ಮಾಣ ಬಿಟ್ಟು ನಿರ್ದೇಶನದ ಜವಾಬ್ದಾರಿಯನ್ನು ಮಾತ್ರ ವಹಿಸಿಕೊಳ್ಳಲು ಪೂರಿ ಮುಂದಾಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿಲ್ಲ.
ತೆಲುಗಿನ ಸ್ಟಾರ್ ನಟರು ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ನಟಿಸೋಕೆ ಮುಂದೆ ಬರ್ತಿಲ್ಲ, ಅದಕ್ಕೆ ತಮಿಳು ನಟನನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಪೂರಿ ಹೇಳಿದ ಕಥೆ ವಿಜಯ್ ಸೇತುಪತಿ ಅವರಿಗೂ ಇಷ್ಟವಾಗಿದೆಯಂತೆ. ತಮ್ಮ ಅದ್ಭುತ ನಟನೆಯಿಂದ ಅವರು ಸದ್ದು ಮಾಡುತ್ತಿದ್ದಾರೆ. ಕಳೆದ ವರ್ಷ 'ಮಹಾರಾಜ' ಸಿನಿಮಾ ಮಾಡಿ ಗೆದ್ದಿದ್ದರು.

'ಏಸ್', 'ಟ್ರೈನ್' ಹಾಗೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಆ ಸಿನಿಮಾಗಳ ಚಿತ್ರೀಕರಣ ಹೆಚ್ಚು ಕಮ್ಮಿ ಮುಕ್ತಾಯವಾಗಿದೆ. ತೆಲುಗಿನಲ್ಲಿ ಕೂಡ ಸೇತುಪತಿಗೆ ಒಳ್ಳೆ ಕ್ರೇಜ್ ಇದೆ. ಇದನ್ನೆಲ್ಲಾ ಮನಗಂಡು ಪೂರಿ 'ಬೆಗ್ಗರ್' ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಕೆಲ ದಿನಗಳ ಹಿಂದೆ ಕನ್ನಡದ 'KD' ಸಿನಿಮಾ ಸೆಟ್‌ಗೆ ಪೂರಿ ಜಗನ್ನಾಥ್ ಭೇಟಿ ನೀಡಿದ್ದರು. ನಟಿ ರಕ್ಷಿತಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಬಳಿಕ ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ್ದು ಇದೇ ಪೂರಿ ಜಗನ್ನಾಥ್. ಆ ಬಳಿಕ ಕೂಡ ಪೂರಿ ಸಿನಿಮಾಗಳಲ್ಲಿ ಕ್ರೇಜಿ ಕ್ವೀನ್ ನಟಿಸಿದ್ದರು. ಇಬ್ಬರು ನಡುವೆ ಒಳ್ಳೆ ಸ್ನೇಹವಿದೆ. ಅದೇ ಕಾರಣಕ್ಕೆ ಪ್ರೇಮ್ ನಿರ್ದೇಶನದ 'KD' ಶೂಟಿಂಗ್ ನೋಡಲು ಬಂದಿದ್ದರು.
ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿರುವುದು ಗೊತ್ತೇಯಿದೆ. ಚಿತ್ರದಲ್ಲಿ ಕೆಲಸ ಮಾಡಿದವರು ವೀಡಿಯೋ ಮಾಡಿ ಪ್ರಚಾರ ಮಾಡಿದ್ದರು. ನಿರ್ದೇಶಕ ಪೂರಿ ಜಗನ್ನಾಥ್ ಕೂಡ 'ಅಪ್ಪು' ಸಿನಿಮಾ ಮೇಕಿಂಗ್ ನೆನಪಿಸಿಕೊಂಡು ವೀಡಿಯೋ ಕಳುಹಿಸಿಕೊಟ್ಟಿದ್ದರು. ಚಿತ್ರಕ್ಕೆ ಶುಭ ಕೋರಿದ್ದರು. ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.


Click it and Unblock the Notifications











