ತೆಲುಗು ನಟ ಅಲ್ಲು ಅರ್ಜುನ್ ಅರೆಸ್ಟ್; ಪತ್ನಿ ಸ್ನೇಹಾ ಕಣ್ಣೀರು
ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. 'ಪುಷ್ಪ'-2 ಸಿನಿಮಾ ಪ್ರೀಮಿಯರ್ ಶೋ ವೀಕ್ಷಣೆಗೆ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಭಿಮಾನಿಗಳು ಮುಗಿಬಿದ್ದು ಕಾಲ್ತುಳಿದ ಉಂಟಾಗಿತ್ತು. ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.
ಹೈದರಾಬಾದ್‌ನಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣ ನಡೆದಿತ್ತು. ಘಟನೆಯಲ್ಲಿ ರೇವತಿ ಎಂಬ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಆಕೆಯ ಮಗ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿತ್ತು. ನಟ ಅಲ್ಲು ಅರ್ಜುನ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆಕೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಸಹ ಘೋಷಿಸಿದ್ದರು.

ಈ ಹಿಂದೆ ಕೂಡ ನಟ ಅಲ್ಲು ಅರ್ಜುನ್ ವಿರುದ್ಧ ಕೆಲ ದೂರುಗಳು ದಾಖಲಾಗಿದ್ದವು. ಇದೀಗ ಸಂಧ್ಯಾ ಚಿತ್ರಮಂದಿರ ಘಟನೆ ಸಂಬಂಧ ಚಿಕ್ಕಡಪಲ್ಲಿ ಪೊಲೀಸರು ಬಂದು ನಟನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರಕರಣದಲ್ಲಿ ಸಂಧ್ಯಾ ಚಿತ್ರಮಂದಿರದ ಮಾಲೀಕ, ಬೌನ್ಸರ್ಸ್ ಹಾಗೂ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು.
ಅಲ್ಲು ಅರ್ಜುನ್ ತಂದೆ ಅಲ್ಲು ಅರ್ಜುನ್ ಇದೀಗ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಡಿಸೆಂಬರ್ 5ರಂದು 'ಪುಷ್ಪ'-2 ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಒಂದು ದಿನ ಮೊದಲೇ ಪ್ರೀಮಿಯರ್ ಶೋಗಳು ನಡೆದು ಭರ್ಜರಿ ಯಶಸ್ಸು ಗಳಿಸಿತ್ತು. ಆದರೆ ಸರಿಯಾದ ಭದ್ರತೆ ಇಲ್ಲದೇ ಅಲ್ಲು ಅರ್ಜುನ್ ಚಿತ್ರತಂಡದ ಜೊತೆ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿತ್ತು.
ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಮೃತ ರೇವತಿ ಕುಟುಂಬದವರ ದೂರಿನ ಆಧಾರದ ಮೇಲೆ ನಟ ಅಲ್ಲು ಅರ್ಜುನ್, ಅವರ ಭದ್ರತಾ ಸಿಬ್ಬಂದಿ ಹಾಗೂ ಚಿತ್ರಮಂದಿರದ ಆಡಳಿತ ಮಂಡಳಿ ವಿರುದ್ಧ (ಬಿಎನ್‌ಎಸ್) ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಇತ್ತೀಚೆಗೆ ತಿಳಿಸಿದ್ದರು. ಆದರೆ ತಮ್ಮ ಮೇಲಿನ ಪ್ರಕರಣ ರದ್ದು ಕೋರಿ ಅಲ್ಲು ಅರ್ಜುನ್ ಕೋರ್ಟ್ ಮೆಟ್ಟಿಲೇರಿದ್ದರು.
ಇವತ್ತು(ಡಿಸೆಂಬರ್ 13) ಡಿಢಿರನೆ ಅಲ್ಲು ಅರ್ಜುನ್ ನಿವಾಸಕ್ಕೆ ಪೊಲೀಸರು ಧಾವಿಸಿದ್ದರು. ಪ್ರಕರಣ ಸಂಬಂಧ ವಿಚಾರನೆಗೆ ಹಾಜರಾಗಬೇಕು ಎಂದು ಹೇಳಿ ಕರೆದೊಯ್ದಿದ್ದಾರೆ. ಪೊಲೀಸರು ಮನೆಗೆ ಬರುತ್ತಿದ್ದಮತೆ ಅಲ್ಲು ಅರ್ಜುನ್ ಪತ್ನಿ ಗಲಿಬಿಲಿಯಾಗಿದ್ದಾರೆ. ಬಳಿಕ ಅಲ್ಲು ಅರ್ಜುನ್ ಆಕೆಯ ಬೆನ್ನು ತಟ್ಟಿ ಧೈರ್ಯ ಹೇಳಿದ್ದಾರೆ. ಇನ್ನು ಪತಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಸ್ನೇಹಾ ರೆಡ್ಡಿ ಭಾವೋದ್ವೇಗಗೊಂಡು ಕಣ್ಣೀರಾಗಿದ್ದಾರೆ.
ಇನ್ನು ಚಕ್ಕಡಪಲ್ಲಿ ಪೊಲೀಸ್ ಠಾಣೆ ಬಳಿ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ನೆಚ್ಚಿನ ನಟನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











