ಅಬ್ಬಬ್ಬಾ.. 'KGF-2' ಹಿಂದಿಕ್ಕಿ ಹೊಸ ದಾಖಲೆ ಬರೆದ 'ಪುಷ್ಪ'-2
ಮೊದಲಿನಿಂದಲೂ 'KGF' vs 'ಪುಷ್ಪ' ಎಂಬ ಚರ್ಚೆ ನಡೆಯುತ್ತಿದೆ. ಅದಕ್ಕಾ ನಾನಾ ಕಾರಣಗಳಿವೆ. ಎರಡು ಸಿನಿಮಾಗಳ ನಡುವೆ ಸಾಮ್ಯತೆ ಇದೆ ಎಂದು ಕೆಲವರು ಹೇಳುತ್ತಾ ಬರ್ತಿದ್ದಾರೆ. ಇನ್ನು ಸುಕುಮಾರ್ ಶಿಷ್ಯ ಚುಚ್ಚಿಬಾಬು ನೀಡಿದ್ದ ಹೇಳಿಕೆ ಕೂಡ ಇದಕ್ಕೆ ಇಂಬು ಕೊಟ್ಟಿತ್ತು. ಸದ್ಯ 'ಪುಷ್ಪ'-2 ಆರ್ಭಟ ಜೋರಾಗಿದೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ'-2 ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರ ತೆರೆಗಪ್ಪಳಿಸಲು ಇನ್ನೊಂದು ದಿನ ಮಾತ್ರ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಲಕ್ಷ ಲಕ್ಷ ಟಿಕೆಟ್ ಹಾಟ್ ಕೇಕ್ ರೀತಿ ಸೇಲ್ ಆಗ್ತಿದೆ.

5 ಪಟ್ಟು 10 ಪಟ್ಟು ಟಿಕೆಟ್ ದರ ಹೆಚ್ಚಿಸಿದ್ದರೂ ಜನ ಸಿನಿಮಾ ನೋಡಲು ಹಿಂದೇಟು ಹಾಕುತ್ತಿಲ್ಲ. ಅದು ಟಿಕೆಟ್ ಬುಕ್ಕಿಂಗ್ ನೋಡಿದ್ರೆ ಅರ್ಥವಾಗುತ್ತಿದೆ. ಕರ್ನಾಟಕದಲ್ಲಿ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಿರುವುದರಿಂದ ಕೆಲವರು ಟಿಕೆಟ್ ಬುಕ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಇನ್ನುಳಿದಂತೆ ದೇಶ, ವಿದೇಶಗಳಲ್ಲಿ 'ಪುಷ್ಪ'-2 ಫೀವರ್ ಶುರುವಾಗಿದೆ.
ಸದ್ಯ ಬುಕ್ ಮೈ ಶೋನಲ್ಲಿ 'ಪುಷ್ಪ'-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಈಗಾಗಲೇ 12 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿದ್ದು 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿರುವ ಅಂದಾಜಿದೆ. ಭಾರತದಲ್ಲೇ ಸಿನಿಮಾ ಈಗಾಗಲೇ 36 ಕೋಟಿ ರೂ. ಕೊಳ್ಳೆ ಹೊಡೆದಿರುವ ಲೆಕ್ಕಾಚಾರ ನಡೀತಿದೆ. ಒಂದು ಮಿಲಿಯನ್ ಟಿಕೆಟ್ ಬುಕ್ ಆಗಿರುವ ಬಗ್ಗೆ ಸ್ವತಃ ಬುಕ್ ಮೈ ಶೋ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಸಿಗುತ್ತಿದೆ.
"ಕಲ್ಕಿ 2898 AD, ಬಾಹುಬಲಿ-2 ಹಾಗೂ KGF- 2 ಸಿನಿಮಾಗಳನ್ನು ಮೀರಿಸಿ ಬುಕ್‌ಮೈಶೋನಲ್ಲಿ ಬಹಳ ಬೇಗ 1 ಮಿಲಿಯನ್ ಟಿಕೆಟ್ ಬುಕ್ ಆಗಿರುವ ಸಿನಿಮಾ 'ಪುಷ್ಪ'-2 ಆಗಿದೆ. ಹೈದರಾಬಾದ್, ಬೆಂಗಳೂರು, ಮುಂಬೈ, ದೆಹಲಿ ಮತ್ತು ಪುಣೆ ಸೇರಿದಂತೆ ದೇಶಾದ್ಯಂತ ಟಿಕೆಟ್ ಬುಕ್ಕಿಂಗ್ ಜೋರಾಗಿದೆ ಎಂದು ಬುಕ್‌ಮೈ ಶೋ ಮುಖ್ಯಸ್ಥ ಆಶಿಶ್ ಸಕ್ಸೇನಾ ಮಾಹಿತಿ ನೀಡಿದ್ದಾರೆ.

ಅತಿ ವೇಗವಾಗಿ 1 ಮಿಲಿಯನ್ ಟಿಕೆಟ್ ಬುಕ್ ಆಗಿರುವ ಸಿನಿಮಾ ಎನ್ನುವ ದಾಖಲೆ ಈಗ 'ಪುಷ್ಪ'-2 ಪಾಲಾಗಿದೆ. ಸಿನಿಮಾ ಬಿಡುಗಡೆಗೆ ಇನ್ನು ಒಂದು ದಿನ ಬಾಕಿಯಿದೆ. ಹಾಗಾಗಿ ಇದು ಮತ್ತಷ್ಟು ಹೆಚ್ಚಲಿದೆ. ಮುಂದೆ 'ಪುಷ್ಪ'ರಾಜ್ ಯಾವೆಲ್ಲಾ ದಾಖಲೆಗಳನ್ನು ಅಳಿಸಿ ಹಾಕುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ. ಮೊದಲ ದಿನವೇ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಬಹುದು ಎಂದು ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.
ವಿಶ್ವದಾದ್ಯಂತ ಅಂದಾಜು 11,500 ಸ್ಕ್ರೀನ್‌ಗಳಲ್ಲಿ 'ಪುಷ್ಪ-2' ಸಿನಿಮಾ ರಿಲೀಸ್ ಆಗುತ್ತಿದೆ. ವಿದೇಶಗಳಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಸಿನಿಮಾ ಕಲೆಕ್ಷನ್ ಮಾಡುವ ನಿರೀಕ್ಷೆತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ 'ಪುಷ್ಪ'-2 ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.
ಈಗಾಗಲೇ 'ಪುಷ್ಪ'-2 ಚಿತ್ರದ ಟ್ರೈಲರ್, ಸಾಂಗ್ಸ್ ಹೊರಬಂದು ಸದ್ದು ಮಾಡ್ತಿದೆ. ಬೆಂಗಳೂರಿನಲ್ಲಿ ಕೆಲವೆಡೆ ಬೆಳಗ್ಗೆ 3.45ಕ್ಕೆ ಮೊದಲ ಪ್ರದರ್ಶನ ಆರಂಭವಾಗಲಿದೆ. ಆಂಧ್ರ, ತೆಲಂಗಾಣದಲ್ಲಿ ಬೆಳಗ್ಗೆ 5.30ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಟಿಕೆಟ್ ದರ ಹೆಚ್ಚಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಆಂಧ್ರ, ತೆಲಂಗಾಣ ಸರ್ಕಾರಗಳು ಕೂಡ ಟಿಕೆಟ್ ದರ ಹೆಚ್ಚಿಸಲು ಅನುಮತಿ ನೀಡಿವೆ.


Click it and Unblock the Notifications











