'ಪುಷ್ಪ- 2' ಹೊಸ ದಾಖಲೆ: 'ಪೊಗರು', 'ಮಾರ್ಟಿನ್' ತಂತ್ರದ ಮೊರೆ ಹೋದ ಸುಕುಮಾರ್- ಅಲ್ಲು ಅರ್ಜುನ್
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ- 2: ದಿ ರೂಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದೆ. ಚಿತ್ರದ ಆಕ್ಷನ್ ಸೀಕ್ವೆನ್‌ನ ಅಲ್ಲಿ ಸೆರೆಹಿಡಿಲಾಗ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಕಾನ್ಸೆಪ್ಟ್ ಟೀಸರ್ ಹಾಗೂ ಫಸ್ಟ್ ಲುಕ್ ಸಖತ್ ವೈರಲ್ ಆಗ್ತಿದೆ. ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಎರಡು ವರ್ಷಗಳ ಹಿಂದೆ ತೆರೆಗಪ್ಪಳಿಸಿದ 'ಪುಷ್ಪ' ಸಿನಿಮಾ ಸಂಚಲನ ಸೃಷ್ಟಿಸಿತ್ತು. 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ಅದರ ಸೀಕ್ವೆಲ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಲ್ಲು ಅರ್ಜುನ್ ಅರ್ಜುನ್ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆದ ಗ್ಲಿಂಪ್ಸ್ ಹಾಗೂ ಪೋಸ್ಟರ್ ಸೋಶಿಯಲ್ ಮೀಡಿಯಾ ಶೇಕ್ ಮಾಡಿತ್ತು. ಕಾನ್ಸೆಪ್ಟ್ ಟೀಸರ್ ಅಂತೂ ಬರೋಬ್ಬರಿ 100 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ.

5 ಭಾಷೆಗಳಲ್ಲಿ ಈ ಸ್ಪೆಷಲ್ ವಿಡಿಯೋ ಝಲಕ್ ರಿಲೀಸ್ ಆಗಿತ್ತು. ಕೇವಲ 11 ದಿನಗಳಲ್ಲಿ ಒಟ್ಟಾರೆ 100 ಮಿಲಿಯನ್ ವೀವ್ಸ್ ಹಾಗೂ 3.3 ಮಿಲಿಯನ್‌ಗೂ ಅಧಿಕ ಲೈಕ್ಸ್ ಗಟ್ಟಿಸಿ ಸದ್ದು ಮಾಡ್ತಿದೆ. ಇನ್ನು ಗಂಗಮ್ಮ ತಲ್ಲಿ ವೇಷದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿರುವ ಪೋಸ್ಟರ್ ಅಂತೂ ಸೂಪರ್ ಹಿಟ್ ಆಗಿದೆ. ಇದೆಲ್ಲದರ ನಡುವೆ ಸಿನಿಮಾ ಶೂಟಿಂಗ್ ಬಗ್ಗೆ ಸದ್ಯ ಮಾಹಿತಿ ಸಿಗುತ್ತಿದೆ. ಸದ್ಯ ಪುಷ್ಪರಾಜ್ ಫಾರಿನ್ ಫೈಟರ್ಸ್ ಜೊತೆ ಕಾದಾಡುವ ಸನ್ನಿವೇಶಗಳನ್ನು ಸೆರೆಹಿಡಿಯಲಾಗ್ತಿದೆಂತೆ. ಅದಕ್ಕಾಗಿ ಸಲ್ಲು ಅರ್ಜುನ್ ಜಿಮ್‌ನಲ್ಲಿ ಸಾಕಷ್ಟು ಕಸರತ್ತು ಮಾಡ್ತಿದ್ದಾರೆ.
ಭಾರತದ ಸಿನಿಮಾಗಳಲ್ಲಿ ಕತೆಗೆ ತಕ್ಕಂತೆ ಆಗೊಮ್ಮೆ ಈಗೊಮ್ಮೆ ಫಾರಿನ್ ಫೈಟರ್ಸ್ ಜೊತೆ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡ್ತಾರೆ. ಕನ್ನಡದಲ್ಲಿ ಪೊಗರು ಹಾಗೂ ಮಾರ್ಟಿನ್ ಸಿನಿಮಾಗಳಲ್ಲಿ ಇಂತಹ ಪ್ರಯತ್ನ ನಡೆದಿತ್ತು. ಅಂತರಾಷ್ಟ್ರೀಯ ಬಾಡಿ ಬಿಲ್ಡರ್ಸ್ ಜೊತೆ ಧ್ರುವ ಸರ್ಜಾ ಗುದ್ದಾಡಿದ್ದು ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿತ್ತು. ಎರಡು ವರ್ಷಗಳ ಹಿಂದೆ 'ಪೊಗರು' ಸಿನಿಮಾ ರಿಲೀಸ್ ಆಗಿತ್ತು. ಸದ್ಯ ರಿಲೀಸ್ ಆಗಿರುವ 'ಮಾರ್ಟಿನ್' ಟೀಸರ್‌ನಲ್ಲೂ ಇಂತಹ ಆಕ್ಷನ್ ಸೀಕ್ವೆನ್ಸ್ ನೋಡಬಹುದು.

ಇದೀಗ 'ಪುಷ್ಪ'- 2 ಚಿತ್ರದಲ್ಲೂ ಫಾರಿನ್ ಫೈಟರ್ಸ್ ಜೊತೆ ಪುಷ್ಪರಾಜ್ ಫೈಟ್ ಮಾಡುವ ಸನ್ನಿವೇಶ ಇದೆಯಂತೆ. ಸೀಕ್ವೆಲ್ ಕಥೆ ತಿರುಪತಿ ಶೇಷಾಚಲಂನಿಂದ ವಿದೇಶದವರೆಗೂ ಸಾಗಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಚಿತ್ರೀಕರಣ ನಡೀತಿದೆ. ಫಾರಿನ್‌ನಲ್ಲಿ ನಡೆಯುವ ಆಕ್ಷನ್ ಸೀಕ್ವೆನ್ಸ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಂಪೋಸ್ ಮಾಡಿರುವ ಸಾಧ್ಯತೆಯಿದೆ. ಶೀಘ್ರದಲ್ಲೇ ಚಿತ್ರತಂಡ ಶ್ರೀಲಂಕಾ, ಥೈಲ್ಯಾಂಡ್ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಚಿತ್ರೀಕರಣಕ್ಕಾಗಿ ತೆರಳಲಿದೆ.
ಪ್ರೀಕ್ವೆಲ್‌ನಲ್ಲಿ ಪುಷ್ಪರಾಜ್ ದೊಡ್ಡ ಸ್ಮಗ್ಲರ್ ಆಗಿ ಬೆಳೆದಿದ್ದನ್ನು ತೋರಿಸಿದ ಸುಕುಮಾರ್ ಸೀಕ್ವೆಲ್‌ನಲ್ಲಿ ಆ ಕಥೆ ಮುಂದುವರೆಸಲಿದ್ದಾರೆ. ದೊಡ್ಡ ಗ್ಯಾಂಗ್‌ಸ್ಟರ್ ಆಗಿ ಪುಷ್ಪ ಹೇಗೆಲ್ಲಾ ಆರ್ಭಟ ಮಾಡುತ್ತಾನೆ ಅನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗ್ತಿದೆ. ಆತನ ಮಡದಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಎಸ್‌ಐ ಭನ್ವರ್ ಸಿಂಗ್ ಶೇಖಾವತ್ ಎದುರು ಪುಷ್ಪ ಆರ್ಭಟ ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ಮೂಡಿ ಬರ್ತಿದೆ. ಮೈತ್ರಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ.
ಮೊದಲ ಭಾಗದಲ್ಲಿ ನಟಿಸಿದ್ದ ಹಲವರು ಎರಡನೇ ಭಾಗದಲ್ಲೂ ಇರ್ತಾರೆ. ಜಾಲಿ ರೆಡ್ಡಿ ಆಗಿ ಡಾಲಿ ಧನಂಜಯ ಕೂಡ ನಟಿಸಲಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರತಂಡ ಟಾರ್ಗೆಟ್ ಆಗಿ ಇಟ್ಟುಕೊಂಡು ಸಿನಿಮಾ ಕಟ್ಟಿಕೊಡುತ್ತಿದೆ. ಬರೋಬ್ಬರಿ 1000 ಕೋಟಿ ರೂ. ಕಲೆಕ್ಷನ್ ನಿರೀಕ್ಷೆಯಲ್ಲಿದೆ ಚಿತ್ರತಂಡ.


Click it and Unblock the Notifications











