ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಬಿತ್ತು ಬ್ರೇಕ್; ಎರಡೂ ಸಿನಿಮಾ ರಿಲೀಸ್ ಪೋಸ್ಟ್‌ಪೋನ್?
ಕೆಲವೊಮ್ಮೆ ತಿಂಗಳುಗಟ್ಟಲೆ ದೊಡ್ಡ ಸಿನಿಮಾಗಳು ಬಿಡುಗಡೆ ಆಗದೇ ಇರೋದು, ಬಳಿಕ ಒಟ್ಟೊಟ್ಟಿಗೆ ತೆರೆಗೆ ಬರೋದು ಸರ್ವೇಸಾಮಾನ್ಯ. ಇನ್ನು ಲಾಂಗ್ ವೀಕೆಂಡ್ ಟಾರ್ಗೆಟ್ ಮಾಡಿ ಬಿಗ್ ಬಜೆಟ್ ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಾರೆ. ಬಾಕ್ಸಾಫೀಸ್ ಕ್ಲ್ಯಾಶ್‌ಗೂ ಹೆದರದೇ ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಕಳೆದ ವರ್ಷ ಆಗಸ್ಟ್ 15ಕ್ಕೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಟ್ಟಿತ್ತು. ಈ ವರ್ಷವೂ ದೊಡ್ಡ ದೊಡ್ಡ ಸಿನಿಮಾಗಳು ಆ ದಿನದ ಮೇಲೆ ಕಣ್ಣಿಟ್ಟಿವೆ. ತೆಲುಗಿನ 'ಪುಷ್ಪ-2' ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಎಂದು ಕಳೆದ ವರ್ಷವೇ ಘೋಷಿಸಿದ್ದರು. ಇದೀಗ ರಿಲೀಸ್ ಡೇಟ್ ಹತ್ತಿರವಾದಂತೆ ಗೊಂದಲ ಶುರುವಾಗಿದೆ. ಮತ್ತೊಂದು ಕಡೆ ಅದೇ ದಿನ ಕನ್ನಡದ 'ಭೈರತಿ ರಣಗಲ್' ಸಿನಿಮಾ ಬಿಡುಗಡೆ ಪ್ರಯತ್ನ ನಡೆದಿತ್ತು. ಹಾಗಾಗಿ ಎರಡೂ ಸಿನಿಮಾಗಳ ನಡುವೆ ಕ್ಲ್ಯಾಶ್ ಎನ್ನುವ ಚರ್ಚೆ ಶುರುವಾಗಿತ್ತು.

ಹೇಳಿ ಕೇಳಿ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 1000 ಕೋಟಿ ರೂ. ಕಲೆಕ್ಷನ್ ಮೇಲೆ ಚಿತ್ರತಂಡ ಕಣ್ಣಿಟ್ಟಿದೆ. ಮತ್ತೊಂದು ಕಡೆ 'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್' ಕೂಡ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಮತ್ತೊಮ್ಮೆ ನರ್ತನ್ ಹಾಗೂ ಶಿವಣ್ಣ ಜೊತೆಯಾಗಿರುವುದು ಕುತೂಹಲ ಮೂಡಿಸಿದೆ. ಆದರೆ ಆಗಸ್ಟ್ 15ಕ್ಕೆ ಎರಡೂ ಸಿನಿಮಾಗಳು ಬಿಡುಗಡೆ ಆಗುವುದು ಅನುಮಾನ ಎನ್ನಲಾಗ್ತಿದೆ.
'ಪುಷ್ಪ'-2 ಪೋಸ್ಟ್‌ಪೋಸ್ ಬಹುತೇಕ ಪಕ್ಕಾ ಎಂದು ಟಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ. ಇತ್ತ ಕನ್ನಡದಲ್ಲಿ 'ಭೈರತಿ ರಣಗಲ್' ಶೂಟಿಂಗ್ ತಡವಾಗುತ್ತಿದ್ದು ಆಗಸ್ಟ್ 15ಕ್ಕೆ ಬಿಡುಗಡೆ ಕಷ್ಟ ಕಷ್ಟ ಎನ್ನುವ ವಾದ ಶುರುವಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಶಿವಣ್ಣ ಪತ್ನಿ ಗೀತಾ ಪರ ಪ್ರಚಾರಕ್ಕೆ ಸಿನಿಮಾಗಳಿಂದ ಬಿಡುವು ಮಾಡಿಕೊಂಡಿದ್ದರು. ಹಾಗಾಗಿ 'ಭೈರತಿ ರಣಗಲ್' ಚಿತ್ರೀಕರಣ ಇನ್ನು ಮುಗಿದಿಲ್ಲ. ಇನ್ನು ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮಾಡಬೇಕಿದೆ. ಅದಕ್ಕೆ ಇನ್ನು ಹೆಚ್ಚು ಸಮಯ ಬೇಕಿದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್ ಕಷ್ಟ ಎನ್ನಲಾಗ್ತಿದೆ.

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ 'ಭೈರತಿ ರಣಗಲ್' ಸಿನಿಮಾ ನಿರ್ಮಾಣವಾಗುತ್ತಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. 'ಮಫ್ತಿ' ಚಿತ್ರದಲ್ಲಿ ಮಾಫಿಯಾ ಡಾನ್ ಆಗಿ ಶಿವಣ್ಣ ಅಬ್ಬರಿಸಿದ್ದರು. ಆದರೆ ಆತನ ಹಿನ್ನೆಲೆ ಏನು ಎನ್ನುವ ಕಥೆ ಪ್ರೀಕ್ವೆಲ್‌ನಲ್ಲಿದೆ. ಛಾಯಾ ಸಿಂಗ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅತ್ತ ಸುಕುಮಾರ್ 'ಪುಷ್ಪ'-2 ಕಥೆ ಕಟ್ಟಿಕೊಟ್ಟಿದ್ದಾರೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ನಲ್ಲಿ 2 ಹಾಡುಗಳು ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಫಹಾದ್ ಫಾಸಿಲ್, ಧನಂಜಯ್, ಸುನಿಲ್, ಅನಸೂಯಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ. ಈಗಾಗಲೇ 2 ಟೀಸರ್‌ಗಳು ಬಂದು ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ಮಾಡಿದೆ.
'ಪುಷ್ಪ'-2 ಹಾಗೂ 'ಭೈರತಿ ರಣಗಲ್' ಪೋಸ್ಟ್‌ಪೋನ್ ಎನ್ನುತ್ತಿದ್ದಂತೆ ತಮಿಳಿನ 'ತಂಗಲಾನ್' ಅದೇ ದಿನ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ನಡೀತಿದೆ. ಫಾ. ರಂಜಿತ್ ನಿರ್ದೇಶನದಲ್ಲಿ ಚಿಯಾನ್ ವಿಕ್ರಂ ನಟನೆಯ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕೆಜಿಎಫ್ ಚಿನ್ನದ ಗಣಿ ಕಾರ್ಮಿಕರ ಕಥೆ ಚಿತ್ರದಲ್ಲಿದೆ. ಈ ಐತಿಹಾಸಿಕ ಸಿನಿಮಾ ಸ್ಯಾಂಪಲ್ಸ್ ಈಗಾಗಲೇ ಹಿಟ್ ಆಗಿವೆ. ಅಕ್ಷಯ್ ಕುಮಾರ್ ನಟನೆಯ 'ಖೇಲ್ ಖೇಲ್ ಮೇನ್' ಸಿನಿಮಾ ಕೂಡ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ.


Click it and Unblock the Notifications











