ಎರಡನೇ ದಿನ ತಗ್ಗಿದ 'ಪುಷ್ಪ'-2 ಆರ್ಭಟ? ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?
ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 'ಪುಷ್ಪ'ರಾಜ್ ರೂಲ್ ಜೋರಾಗಿದೆ. ಟಿಕೆಟ್ ದರ ಹೆಚ್ಚಿಸಿದ್ದರೂ ಸಿನಿಮಾ ನೋಡುವ ಪ್ರೇಕ್ಷಕರ ಉತ್ಸಾಹ ಕಮ್ಮಿ ಆಗಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಸೀಕ್ವೆಲ್ ಕ್ರೇಜ್ ಕೂಡ ಚಿತ್ರಕ್ಕೆ ಪ್ಲಸ್ ಆಗಿದೆ.
ಮೊದಲ ದಿನ 'ಪುಷ್ಪ'-2 ಸಿನಿಮಾ ವಿಶ್ವದಾದ್ಯಂತ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಇನ್ನು ಹಿಂದಿ ವರ್ಷನ್ 72 ಕೋಟಿ ರೂ. ಗಳಿಕೆ ಕಂಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ. ಗುರುವಾರ ಭಾರತದಲ್ಲಿ 165 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು ಚರ್ಚೆ ಆಗುತ್ತಿದೆ.

ಬುಧವಾರ ರಾತ್ರಿ ಪ್ರೀಮಿಯರ್ ಶೋಗಳಿಂದಲೇ ಸಿನಿಮಾ 10 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ ಸಹಜವಾಗಿಯೇ 2ನೇ ದಿನದ ಕಲೆಕ್ಷನ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಡ್ವಾನ್ಸ್ ಬುಕ್ಕಿಂಗ್ ಕೂಡ ಚೆನ್ನಾಗಿಯೇ ಇದೆ. ಮಧ್ಯಾಹ್ನ 3 ಗಂಟೆ ವೇಳೆ ಭಾರತದಲ್ಲಿ ಎಲ್ಲಾ ಭಾಷೆಗಳು ಸೇರಿ ಸಿನಿಮಾ 27 ಕೋಟಿ ರೂ.ಗೂ ಕಲೆಕ್ಷನ್ ಮಾಡಿರಬಹುದು ಎಂದು Sacnilk.com ವರದಿ ಮಾಡಿದೆ.
ಈಗಾಗಲೇ 'ಪುಷ್ಪ'-2 ಸಿನಿಮಾ ಭಾರತದಲ್ಲಿ 250 ಕೋಟಿ ರೂ. ಗಡಿ ದಾಟಿ ಮುನ್ನುಗ್ಗುತ್ತಿದೆ. ಹಿಂದಿ ವರ್ಷನ್‌ಗೆ ರೆಸ್ಪಾನ್ಸ್ ಚೆನ್ನಾಗಿದೆ. ವಾರದ ದಿನ ಆಗಿರುವುದರಿಂದ ಜನ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಂಜೆ ಬಳಿಕ ಅಥವಾ ಶನಿವಾರ, ಭಾನುವಾರ ಸಿನಿಮಾ ನೋಡಲು ಪ್ಲ್ಯಾನ್ ಮಾಡಿರಬಹುದು. ಹಾಗಾಗಿ 2ನೇ ದಿನ ಗಳಿಕೆ ಕೊಂಚ ಕಮ್ಮಿ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಮೊದಲ ದಿನ 72 ಕೋಟಿ ರೂ. ಗಳಿಕೆ ಕಂಡಿರುವ ಹಿಂದಿ ವರ್ಷನ್ 2ನೇ ದಿನ 40 ಕೋಟಿ ರೂ. ಕೊಳ್ಳೆ ಹೊಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಮೊದಲ ದಿನಕ್ಕಿಂತ ಎರಡನೇ ರೆಸ್ಪಾನ್ಸ್ ಕಮ್ಮಿ ಆಗಿದೆ. ಫಸ್ಟ್ ಶೋ ಹಾಗು ಸೆಕೆಂಡ್ ಶೋ ನೋಡಲು ಪ್ರೇಕ್ಷಕರು ಮುಗಿಬೀಳ್ತಾರಾ ಕಾದು ನೋಡಬೇಕಿದೆ.
ತೆಲುಗು ರಾಜ್ಯಗಳು ಮಾತ್ರವಲ್ಲ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಕೂಡ 'ಪುಷ್ಪ'-2 ಹವಾ ಕಮ್ಮಿ ಆಗಿದೆ. ಅದಕ್ಕೆ ಕಾರಣ ಏನು ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಈಗಾಗಲೇ ಸಿನಿಮಾ ಥಿಯೇಟರ್ ಪ್ರಿಂಟ್ ಪೈರಸಿ ಆಗಿದೆ. ಮಿಶ್ರಪ್ರತಿಕ್ರಿಯೆ ಬಂದಿದೆ. ಹಾಗಾಗಿ ಸಹಜವಾಗಿಯೇ ಜನ ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರಾ? ಎನ್ನುವ ಪ್ರಶ್ನೆ ಕಾಡುತ್ತಿದೆ.
ಶನಿವಾರ, ಭಾನುವಾರ ರಜೆ ದಿನಗಳಲ್ಲಿ 'ಪುಷ್ಪ'ರಾಜ್ ದರ್ಬಾರ್ ನೋಡಲು ಪ್ರೇಕ್ಷಕರು ಆಸಕ್ತಿ ತೋರಿಸುವುದರ ಮೇಲೆ ಬಾಕ್ಸಾಫೀಸ್ ಭವಿಷ್ಯ ನಿಂತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗಿದೆ. ಮೊದಲ ದಿನ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿತ್ತು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಇದೀಗ ಟಿಕೆಟ್ ದರ ಸಾಮಾನ್ಯ ಸ್ಥಿತಿಗೆ ಬಂದಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಇನ್ನು ಟಿಕೆಟ್ ದರ ಕಮ್ಮಿ ಆಗಿಲ್ಲ.
ಟಿಕೆಟ್ ದರ ಹೆಚ್ಚಿಸಿದ್ದು ಹೇಗೆ ಚಿತ್ರದ ಕಲೆಕ್ಷನ್‌ಗೆ ಪ್ಲಸ್ ಆಗಿತ್ತೋ ಅದೇ ರೀತಿ ಪ್ರೇಕ್ಷಕರ ಆಸಕ್ತಿ ಕಮ್ಮಿ ಆಗಲು ಟಿಕೆಟ್ ದರವೇ ಕಾರಣವಾಗಿದೆ. ಇನ್ನು 'ಬಾಹುಬಲಿ-2' ಹಾಗೂ 'ಕೆಜಿಎಫ್-2' ಚಿತ್ರಗಳ ಜೊತೆಗೆ 'ಪುಷ್ಪ'-2 ಚಿತ್ರವನ್ನು ಹೋಲಿಸಿ ನೋಡಲಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಅಲ್ಲು ಅರ್ಜುನ್ ಸಿನಿಮಾ ನಿರಾಸೆ ಮೂಡಿಸಿದೆ.


Click it and Unblock the Notifications











