'ಪುಷ್ಪ'-2 ಪ್ರಪಂಚದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹೇಗಿದೆ ಸೆಟ್, ಎಷ್ಟು ಖರ್ಚಾಯ್ತು?
ಎಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಗಳಲ್ಲಿ ಮಾತ್ರವಲ್ಲ ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತಿದೆ. ಗಣೇಶ ಮೂರ್ತಿಯನ್ನು ಏರಿಯಾಗೆ ಸ್ವಾಗತಿಸಿ, ಪೂಜಿಸಿ, ಪಟಾಕಿ ಸಿಡಿಸಿ, ಅನ್ನದಾನ, ಆರ್ಕೇಸ್ಟ್ರಾ, ಮೆರವಣಿಗೆ, ವಿಸರ್ಜನೆ ಅಂತೆಲ್ಲಾ ಯುವಕರು ಸಂಭ್ರಮಿಸುತ್ತಿದ್ದಾರೆ.
ಒಂದ್ಕಾಲದಲ್ಲಿ ಬಹಳ ಸರಳವಾಗಿ ಗಣೇಶ ಹಬ್ಬ ಆಚರಣೆ ನಡೆಯುತ್ತಿತ್ತು. ಈಗ ಲಕ್ಷ ಲಕ್ಷ ಖರ್ಚು ಮಾಡಿ ಯುವಕರು ಹಬ್ಬ ಆಚರಿಸುತ್ತಿದ್ದಾರೆ. ಭಿನ್ನ ವಿಭಿನ್ನ ರೀತಿಯಲ್ಲಿ ಪೆಂಡಾಲ್ ನಿರ್ಮಿಸಿ, 20, 30 ಅಡಿಗಳಷ್ಟು ಎತ್ತರದ ಗಣೇಶ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸುತ್ತಿದ್ದಾರೆ. ಏರಿಯಾಗಿಂತ ಏರಿಯಾಗೆ ಗಣೇಶನನ್ನು ಬಹಳ ವಿಶೇಷವಾಗಿ ಕೂರಿಸಿ ಹಬ್ಬ ಮಾಡಲಾಗುತ್ತಿದೆ. ತಮಿಳುನಾಡಿನ ಡಕನಿಕೊಟೈನಲ್ಲಿ 'ಪುಷ್ಪ'-2 ಥೀಮ್‌ನಲ್ಲಿ ಸೆಟ್ ಹಾಕಿ ಯುವಕರು ಹಬ್ಬ ಆಚರಿಸುತ್ತಿದ್ದಾರೆ.

ಎರಡೂ ವರ್ಷಗಳ ಹಿಂದೆ ಅದೇ ಜಾಗದಲ್ಲಿ ಯಶ್ ನಟನೆಯ 'ಕೆಜಿಎಫ್' ಸಿನಿಮಾ ಶೈಲಿಯ ಸೆಟ್ ಹಾಕಿ ಯುವಕರು ಗಣೇಶ ಹಬ್ಬ ಆಚರಿಸಿದ್ದರು. ಅದು ಸಖತ್ ವೈರಲ್ ಆಗಿತ್ತು. ಈ ಬಾರಿ 'ಪುಷ್ಪ'-2 ಸಿನಿಮಾ ಸ್ಟೈಲ್‌ನಲ್ಲಿ ವೇದಿಕೆ ಸಿದ್ಧಪಡಿಸಿದ್ದಾರೆ. ಅದಕ್ಕೆ ಸಂಬಂಧಿಸಿ ಫೋಟೊ, ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಕಳೆದ ವರ್ಷ ಕೊನೆಗೆ ತೆರೆಗಪ್ಪಳಿಸಿತ್ತು. 1700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಪುಷ್ಪರಾಜ್ ಆಗಿ ಸ್ಟೈಲಿಶ್ ಸ್ಟಾರ್ ಪರ್ಫಾರ್ಮನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಸೀರೆ ಉಟ್ಟು ಗಂಗಮ್ಮ ಜಾತ್ರೆ ಎಪಿಸೋಡ್‌ನಲ್ಲಿ ಮಿಂಚಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಕೂಡ ಅದೇ ರೀತಿ ಸೀರೆ ಉಟ್ಟ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅದೇ ಸಿನಿಮಾವನ್ನು ನೆನಪಿಸುವಂತೆ ಇಲ್ಲಿ ಗಣೇಶ ಪೆಂಡಾಲ್ ತಲೆ ಎತ್ತಿದೆ. ಎಲ್ಲರ ಗಮನ ಸೆಳೆಯುತ್ತಿದೆ. 3 ದಿನಗಳ ಕಾಲ ಇಲ್ಲಿ ಗಣೇಶ ಹಬ್ಬ ಆಚರಣ ನಡೆಯಲಿದೆ.
ಗಣೇಶ ಪ್ರತಿಷ್ಠಾಪನೆಯ ಪೆಂಡಾಲ್ ಪ್ರವೇಶಿಸುತ್ತಿದ್ದಂತೆ ಆರಂಭದಲ್ಲಿ ಪುಷ್ಪರಾಜ್ ಎಲಿಕ್ಯಾಪ್ಟರ್‌ನಿಂದ ಇಳಿಯುವ ಸನ್ನಿವೇಶದ ಚಿತ್ರಣ ಇದೆ. ಅಲ್ಲಿಂದ ಒಳಗೆ ಸಾಗಿದರೆ ಗಂಗಮ್ಮ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಉಟ್ಟು ಕಾಣಿಸಿಕೊಂಡಿರುವ ಮೂರ್ತಿ ನೋಡಬಹುದು. ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ಕಾಳಿ ವಿಗ್ರಹದ ಮುಂದೆ ಪುಷ್ಪರಾಜ್ ಸೀರೆ ಉಟ್ಟ ಗೆಟಪ್‌ನಲ್ಲಿ ತ್ರಿಶೂಲ ಹಿಡಿದು ಫೈಟ್ ಮಾಡುವ ಸನ್ನಿವೇಶ ಇದೆ. ಅದೇ ಗೆಟಪ್‌ನಲ್ಲಿ ಗಣೇಶನ ಮೂರ್ತಿ ನಿರ್ಮಿಸಲಾಗಿದೆ.
ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಈ ರೀತಿ 'ಪುಷ್ಪ'-2 ಸಿನಿಮಾ ಶೈಲಿಯ ಸೆಟ್ ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸುತ್ತ ಮುತ್ತಲ ಊರುಗಳಿಂದ ಸಾಕಷ್ಟು ಜನ ಬಂದು ಈ ಸೆಟ್ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿಂದೆ ಪುಷ್ಪರಾಜ್, ಕೆಜಿಎಫ್ ರಾಕಿ ಸೇರಿದಂತೆ ಸಿನಿಮಾ ಪಾತ್ರಗಳಿಂದ ಪ್ರೇರಣೆಗೊಂಡು ಗಣೇಶ ಮೂರ್ತಿಗಳನ್ನು ತಯಾರಿಸಿ ಯುವಕರು ಪೂಜಿಸಿ ಸಂಭ್ರಮಿಸಿದ್ದರು. ಆದರೆ ಗಣೇಶನಿಗೆ ಸ್ಮಗ್ಲರ್‌ಗಳ ಪಾತ್ರದಂತೆ ವೇಷ ಹಾಕುವುದು ಎಷ್ಟು ಸರಿ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು.
ದಶಕಗಳ ಹಿಂದೆಯೇ ಈ ರೀತಿ ವಿಭಿನ್ನವಾಗಿ ಗಣೇಶ ಮೂರ್ತಿಗಳನ್ನು ತಯಾರಿಸುವ ಪ್ರಯತ್ನ ಶುರುವಾಯಿತು. 'ಬಾಹುಬಲಿ' ಚಿತ್ರದಲ್ಲಿ ಶಿವುಡು ಶಿವಲಿಂಗ ಎತ್ತಿಕೊಂಡ ಶೈಲಿಯಲ್ಲಿ ತಯಾರಿಸಿದ್ದ ಗಣೇಶ ಮೂರ್ತಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು.


Click it and Unblock the Notifications











