'ಪುಷ್ಪ 2' ಚಿತ್ರೀಕರಣ ಪ್ರಾರಂಭಕ್ಕೆ ದಿನಾಂಕ ನಿಗದಿ
ಈ ವರ್ಷ ಪ್ಯಾನ್ ಇಂಡಿಯಾ ಸಿನಿಮಾದ ಹವಾ ಪ್ರಾರಂಭವಾಗಿದ್ದು ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದ ಮೂಲಕ. 'ಪುಷ್ಪ' ಸಿನಿಮಾ ವೇದಿಕೆ ನಿರ್ಮಿಸಿ ಕೊಟ್ಟರೆ ಅದರ ಮೇಲೆ ಅದ್ಭುತ ಪ್ರದರ್ಶನ ತೋರಿದವು 'RRR' ಹಾಗೂ 'ಕೆಜಿಎಫ್ 2'.
ಭಾರಿ ಹಿಟ್ ಆದ 'ಪುಷ್ಪ' ಸಿನಿಮಾದ ಮುಂದಿನ ಭಾಗದ ಬಗ್ಗೆ ದೇಶದಾದ್ಯಂತ ಸಿನಿಮಾ ಪ್ರಿಯರಿಗೆ ನಿರೀಕ್ಷೆ ಇದ್ದು, ಇದೀಗ 'ಪುಷ್ಪ 2' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲು ದಿನಾಂಕ ನಿಗದಿಯಾಗಿದೆ.
'ಪುಷ್ಪ' ಸಿನಿಮಾ ನಿರೀಕ್ಷೆಗೂ ದೊಡ್ಡ ಹಿಟ್ ಆದ ಕಾರಣ 'ಪುಷ್ಪ 2' ಸಿನಿಮಾವನ್ನು ಜಾಗರೂಕತೆಯಿಂದ ಮೊದಲ ಭಾಗಕ್ಕಿಂತಲೂ ದೊಡ್ಡ ಹಿಟ್ ಅನ್ನಾಗಿ ಮಾಡುವ ಒತ್ತಡದಲ್ಲಿ ನಿರ್ದೇಶಕ ಸುಕುಮಾರ್ ಕತೆ ಹೆಣೆದಿದ್ದು, ಹಲವು ರೀಡಿಂಗ್, ತಿದ್ದುವಿಕೆಗಳ ಬಳಿಕ ಅಂತಿಮ ಡ್ರಾಫ್ಟ್ ಅನ್ನು ತಯಾರಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್, ಮೈತ್ರಿ ಮೂವಿ ಮೇಕರ್ಸ್ ಎಲ್ಲರಿಗೂ ಕತೆ ಒಪ್ಪಿಗೆಯಾಗಿದ್ದು ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಮುಹೂರ್ತ ಕಾರ್ಯವೂ ನಡೆದಿದೆ. ಆದರೆ ಮುಹೂರ್ತಕ್ಕೆ ಅಲ್ಲು ಅರ್ಜುನ್ ಆಗಲಿ ರಶ್ಮಿಕಾ ಮಂದಣ್ಣ ಆಗಲಿ ಬಂದಿರಲಿಲ್ಲ. ಇದೀಗ ಸಿನಿಮಾದ ಚಿತ್ರೀಕರಣ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ.
'ಪುಷ್ಪ 2' ಸಿನಿಮಾದ ಚಿತ್ರೀಕರಣವು ಸೆಪ್ಟೆಂಬರ್ 08 ರಿಂದ ಪ್ರಾರಂಭವಾಗಲಿದೆ. 'ಪುಷ್ಪ' ಸಿನಿಮಾದ ಮೊದಲ ಭಾಗ ಚಿತ್ರೀಕರಣವಾದ ಕೇರಳ, ನೆಲಗೊಂಡ ಅರಣ್ಯ ಪ್ರದೇಶ, ರಾಮೋಜಿ ರಾವ್ ಫಿಲಂ ಸಿಟಿಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ.

'ಪುಷ್ಪ 2' ಸಿನಿಮಾವು ಫಹಾದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ಪಾತ್ರದ ನಡುವಿನ ಕಿತ್ತಾಟದ ಕತೆಯನ್ನು ಹೊಂದಿರಲಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್, ಸುನಿಲ್ ಅವರುಗಳು ಸಹ ಮುಖ್ಯ ವಿಲನ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಪಾತ್ರವೂ ಈ ಸಿನಿಮಾದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಳ್ಳಲಿದೆ.


Click it and Unblock the Notifications











