'ಅವತಾರ್ 2' ಜೊತೆಗೆ ಬರಲಿದೆ 'ಪುಷ್ಪ 2'! ಏನಿದು ಕನೆಕ್ಷನ್
'ಅವತಾರ್ 2' ಸಿನಿಮಾ ಮುಂದಿನ ತಿಂಗಳು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಇರುವ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಈ ವರೆಗಿನ ಎಲ್ಲ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳನ್ನು ಈ ಸಿನಿಮಾ ಮುರಿದು ಹಾಕಲಿದೆ ಎಂಬ ನಿರೀಕ್ಷೆ ಬಾಕ್ಸ್ ಆಫೀಸ್ ಪರಿಣಿತದ್ದಾಗಿದ್ದು, ಹಲವು ದಾಖಲೆಗಳನ್ನು ಬರೆಯಲು ಸಜ್ಜಾಗಿಯೇ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎನ್ನಲಾಗಿದೆ.
'ಅವತಾರ್ 2' ಸಿನಿಮಾದ ಯಶಸ್ಸಿನ ಜೊತೆಗೆ ತಮ್ಮ ಸಿನಿಮಾಗಳಿಗೂ ಪ್ರಚಾರ ಭಾಗ್ಯ ಕಲ್ಪಿಸುವ ದೂರಾಲೋಚನೆಯನ್ನು ಕೆಲವು ಸಿನಿಮಾಗಳು ಮಾಡಿಕೊಂಡಿವೆ. ತೆಲುಗಿನ 'ಪುಷ್ಪ 2' ಸಿನಿಮಾ ಈ ರೀತಿಯ ಯೋಜನೆಯೊಂದನ್ನು ಮಾಡಿದ್ದು, 'ಅವತಾರ್ 2' ಸಿನಿಮಾದ ಜೊತೆಗೆ 'ಪುಷ್ಪ 2' ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ!

ಸಿನಿಮಾ ಜೊತೆ ಟೀಸರ್ ಬಿಡುಗಡೆ
ಜನಪ್ರಿಯ ಸಿನಿಮಾ ಬಿಡುಗಡೆ ಆದಾಗ ಅದರ ಜೊತೆಗೆ ಮತ್ತೊಂದು ಸಿನಿಮಾದ ಟೀಸರ್ ಬೀಡುಗಡೆ ಮಾಡುವ ಸಂಪ್ರದಾಯ ಇತ್ತೀಚೆಗೆ ಪ್ರಾರಂಭವಾಗಿದೆ. ಹಲವು ಚಿತ್ರತಂಡಗಳು ತಮ್ಮ ಸಿನಿಮಾದ ಟ್ರೈಲರ್ ಅಥವಾ ಟೀಸರ್ ಅನ್ನು ಮತ್ತೊಂದು ಜನಪ್ರಿಯ ಸಿನಿಮಾ ಬಿಡುಗಡೆ ಆದಾಗ ಅದರೊಟ್ಟಿಗೆ ಬಿಡುಗಡೆ ಮಾಡುತ್ತಾರೆ. ಸಿನಿಮಾ ನೋಡಲು ಬಂದ ಜನ ಇಂಟರ್ವೆಲ್ ಸಮಯದಲ್ಲಿ ಟ್ರೈಲರ್ ಅಥವಾ ಟೀಸರ್ ಸಹ ನೋಡಿ ಖುಷಿ ಪಡುತ್ತಾರೆ.

ಚಿತ್ರೀಕರಣ ಪ್ರಾರಂಭವಾಗಿ ಎರಡು ತಿಂಗಳಾಯ್ತು
ಹಾಗೆಯೇ 'ಅವತಾರ್ 2' ಸಿನಿಮಾದ ಜೊತೆಗೆ 'ಪುಷ್ಪ 2' ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲು ನಿರ್ದೇಶಕ ಸುಕುಮಾರ್ ಯೋಜಿಸಿದ್ದಾರೆ. 'ಪುಷ್ಪ 2' ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಎರಡು ತಿಂಗಳ ಮೇಲಾಗಿದ್ದು, ಈ ವರೆಗೆ ಯಾವುದೇ ಪೋಸ್ಟರ್, ಟೀಸರ್, ಮೋಷನ್ ಪೋಸ್ಟರ್ ಯಾವುದನ್ನೂ ಬಿಡುಗಡೆ ಮಾಡಿಲ್ಲ. ಈಗ ಏಕಾ-ಏಕಿ ಟೀಸರ್ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ ಅದೂ ವಿಶ್ವದ ಅತ್ಯಂತ ಜನಪ್ರಿಯ ಸಿನಿಮಾದ ಜೊತೆಗೆ!

'ಅವತಾರ್ 2' ಸಿನಿಮಾದ ಜೊತೆಗೆ 'ಪುಷ್ಪ 2'
'ಅವತಾರ್ 2' ಸಿನಿಮಾದ ಜೊತೆಗೆ 'ಪುಷ್ಪ 2' ಸಿನಿಮಾದ ಟೀಸರ್ ಕೇವಲ ಭಾರತದಲ್ಲಿ ಮಾತ್ರವೇ ಬಿಡುಗಡೆ ಆಗಲಿದೆಯೇ ಅಥವಾ ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇರುವ ಅರಬ್ ದೇಶಗಳು, ಅಮೆರಿಕ, ಚೀನಾಗಳಲ್ಲಿಯೂ ಬಿಡುಗಡೆ ಆಗಲಿದೆಯೇ ಕಾದು ನೋಡಬೇಕಿದೆ. ಬಿಡುಗಡೆ ಆದ ಮೊದಲ ವಾರ ಅತಿ ಹೆಚ್ಚು ಗಳಿಸುವ, ಅತಿ ಹೆಚ್ಚು ಜನರಿಂದ ನೋಡಲ್ಪಡುವ ಸಿನಿಮಾ 'ಅವತಾರ್ 2' ಆಗಲಿದೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಇಂಥಹಾ ಭಾರಿ ನಿರೀಕ್ಷೆ ಇರುವ ಸಿನಿಮಾ ಜೊತೆಗೆ ಟೀಸರ್ ಬಿಡುಗಡೆ ಮಾಡಿದರೆ ವೈರಲ್ ಆಗುವುದು ಪಕ್ಕಾ. ಅಂದಹಾಗೆ 'ಅವತಾರ್ 2' ಸಿನಿಮಾವು ಡಿಸೆಂಬರ್ 16 ರಂದು ಬಿಡುಗಡೆ ಆಗಲಿದೆ.

2021ರ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಿದ್ದ ಸಿನಿಮಾ
ಇನ್ನು 'ಪುಷ್ಪ' ಸಿನಿಮಾದ ಮೊದಲ ಭಾಗ 2021 ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾ ಬಹುದೊಡ್ಡ ಹಿಟ್ ಆಗಿತ್ತು. ದಕ್ಷಿಣ ಭಾರತದ ಸಿನಿಮಾಗಳಿಗೆ ಬಾಲಿವುಡ್ ಭಾಗದಲ್ಲಿರುವ ಬೇಡಿಕೆಯನ್ನು ಮೊದಲು ತೋರಿಸಿಕೊಟ್ಟಿದ್ದೇ ಈ ಸಿನಿಮಾ. ಮೊದಲ ಭಾಗದಲ್ಲಿ ರಕ್ತ ಚಂದನ ಕಳ್ಳಸಾಗಣೆದಾರನಾಗಿ ಹೆಸರು ಗಳಿಸಿ ಮೇಲೇರಿದ ಪುಷ್ಪಗೆ ದುಷ್ಟ ಪೊಲೀಸ್ ಅಧಿಕಾರಿ ಶೆಖಾವತ್ ಎದುರಾಗುವಲ್ಲಿಗೆ ಮೊದಲ ಭಾಗ ಮುಗಿದಿತ್ತು, ಎರಡನೇ ಭಾಗವು ಶೇಖಾವತ್ ಹಾಗೂ ಪುಷ್ಪನ ನಡುವೆ ಯುದ್ಧದ ಕತೆಯನ್ನು ಹೊಂದಿರಲಿದೆ. ಎರಡನೇ ಭಾಗದಲ್ಲಿ ಕನ್ನಡದ ನಟ ಡಾಲಿ ಧನಂಜಯ್ ಪಾತ್ರ ತುಸು ಹೆಚ್ಚಿಗೆ ಇರಲಿದೆ ಎನ್ನಲಾಗುತ್ತಿದೆ.


Click it and Unblock the Notifications











