"ಆ ವಿಚಾರದಲ್ಲಿ ಅಲ್ಲು ಅರ್ಜುನ್ ಬಿಟ್ಟರೆ ಯಾರಿಲ್ಲ" ಎಂದ ರಶ್ಮಿಕಾ; ತಿಳಿ ಹೇಳಿದ ನೆಟ್ಟಿಗರು
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಈಗಾಗಲೇ ಸಿನಿಮಾ ವಿಶ್ವದಾದ್ಯಂತ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಶ್ರೀವಲ್ಲಿಯಾಗಿ ಕೊಡಗಿನ ಕುವರಿ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಗಂಗಮ್ಮ ಜಾತ್ರೆ ಎಪಿಸೋಡ್‌ನಲ್ಲಿ ಆಕೆಯ ನಟನೆಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.
'ಪುಷ್ಪ'-2 ಚಿತ್ರದಿಂದ ರಶ್ಮಿಕಾ ಮಂದಣ್ಣ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಮುಖ್ಯವಾಗಿ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಅವಕಾಶಗಳು ಸಿಗುವ ಸಾಧ್ಯತೆಯಿದೆ. ಈಗಾಗಲೇ 'ಚಾವ' ಹಾಗೂ 'ಸಿಕಂದರ್' ರೀತಿಯ ದೊಡ್ಡ ಸಿನಿಮಾಗಳಲ್ಲಿ ನ್ಯಾಷನಲ್ ಕ್ರಶ್ ನಟಿಸುತ್ತಿದ್ದಾರೆ. ಇನ್ನು 'ಪುಷ್ಪ'-2 ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಖುಷಿಯಾಗಿದ್ದಾರೆ. ಪಿಂಕ್‌ವಿಲ್ಲಾ ಸಂದರ್ಶನದಲ್ಲಿ ಭಾಗಿ ಆಗಿ ಮಾತನಾಡಿದ್ದಾರೆ.

ಗೆಲುವಿನ ಸಂಭ್ರಮದಲ್ಲಿ ರಶ್ಮಿಕಾ 'ಪುಷ್ಪ'-2 ಚಿತ್ರದ ಬಗ್ಗೆ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ತಮ್ಮ ಪಾತ್ರ ಹಾಗೂ ಅಲ್ಲು ಅರ್ಜುನ್ ಪಾತ್ರದ ಬಗ್ಗೆ ಹಾಡಿ ಕೊಂಡಾಡಿದ್ದಾರೆ. 20 ನಿಮಿಷ ಸೀರೆ ಉಟ್ಟು ಕಾಣಿಸಿಕೊಳ್ಳುವುದು ಅಲ್ಲು ಅರ್ಜುನ್ ಬಿಟ್ಟರೆ ಯಾವ ನಟನಿಗು ಸಾಧ್ಯವಿಲ್ಲ ಎಂದಿದ್ದಾರೆ. ನೆಟ್ಟಿಗರು ಇದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಜಾತ್ರೆ ಸನ್ನಿವೇಶ ಚಿತ್ರೀಕರಣ ಅನುಭವದ ಬಗ್ಗೆ ರಶ್ಮಿಕಾ ಮಂದಣ್ಣ ಮಾತನಾಡಿ "ಅಲ್ಲು ಅರ್ಜುನ್ ಸರ್, ಬಿಟ್ಟರೆ ಯಾರು ಈ ರೀತಿ ಮಾಡೋಕೆ ಸಾಧ್ಯವಿಲ್ಲ. ಯಾವುದೇ ನಟನಿಗೆ ಆ ರೀತಿ ಸೀರೆ ಉಟ್ಟು ನಟಿಸುವ ಧೈರ್ಯ ಬರಲ್ಲ. ಸೀರೆ ಉಟ್ಟು ಡ್ಯಾನ್ಸ್ ಮಾಡುವುದು, ಫೈಟ್ ಮಾಡುವುದು, ನಟಿಸುವುದು, 21 ನಿಮಿಷ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೇರೆ ಯಾವ ನಟ ಮಾಡ್ತಾರೆ ಹೇಳಿ ನೋಡೋಣ" ಎಂದು ಪ್ರಶ್ನಿಸಿದ್ದಾರೆ.
"ಅಲ್ಲು ಅರ್ಜುನ್ ಅವರು ಆ ರೀತಿ ಸೀರೆಯಲ್ಲಿ ನಟಿಸೋದು ನೋಡಿ ಅವರ ಮೇಲಿನ ಗೌರವ ಹೆಚ್ಚಾಯಿತು. ನಾನಂತೂ ಇದನ್ನು ಹಿಂದೆ ನೋಡಿಲ್ಲ. ಅವರ ಜೀವನಕ್ಕೆ ಶುಭವಾಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಮೊದಲ ದಿನ ಅವರೊಟ್ಟಿಗೆ ಸಿನಿಮಾ ನೋಡಿದಾಗ ನಾನು ಬಹಳ ಎಂಜಾಯ್ ಮಾಡಿದ್ದೆ. ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದೆ. ಇಲ್ಲಿ ಏನು ನಡೀತಿದೆ ಎಂದು ನೋಡಿ ಬೆರಗಾಗಿದ್ದೆ. ಯಾವುದೋ ಲೋಕದಲ್ಲಿದ್ದೀನಿ ಎನಿಸಿತು" ಎಂದು ರಶ್ಮಿಕಾ ವಿವರಿಸಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿಕೆಗೆ ಕೆಲವರು ವ್ಯಂಗ್ಯವಾಡಿದ್ದಾರೆ. ಅಯ್ಯೋ ನೀವು ಬೇರೆ ಸಿನಿಮಾಗಳನ್ನು ನೋಡಿಲ್ಲ ಎನಿಸುತ್ತದೆ. ಕಾಂಚನಾ ಚಿತ್ರದಲ್ಲಿ ರಾಘವ ಲಾರೆನ್ಸ್ ಸೀರೆ ಉಟ್ಟು ಬಹಳ ಹೊತ್ತು ನಟಿಸಿದ್ದರು. ಆ ಸಿನಿಮಾ ಕನ್ನಡಕ್ಕೆ ರೀಮೆಕ್ ಆಗಿದ್ದಾಗ ಉಪೇಂದ್ರ ಅದೇ ರೀತಿ ಮಿಂಚಿದ್ದರು. ಇನ್ನು ಮೇಕಪ್ ಚಿತ್ರದಲ್ಲಿ ಜಗ್ಗೇಶ್, 'ಜಯಲಲಿತ' ಚಿತ್ರದಲ್ಲಿ ಶರಣ್ ಕೂಡ ಸೀರೆ ಉಟ್ಟು ನಟಿಸಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಅವ್ವೈ ಷಣ್ಮುಗಿ' ಹಾಗೂ 'ದಶಾವತಾರಂ' ಚಿತ್ರಗಳಲ್ಲಿ ಕಮಲ್ ಹಾಸನ್ ಕೂಡ ಸೀರೆ ಉಟ್ಟು ನಟಿಸಿದ್ದರು. ಕಮಲ್ ಹಾಸನ್ ಅಂತೂ ಹೆಣ್ಣಿನ ವೇಷದಲ್ಲಿ ನಟಿಸಲು ಏಳೆಂಟು ಗಂಟೆ ಮೇಕಪ್ ಹಾಕಿಕೊಳ್ಳುತ್ತಿದ್ದರು. ಅದರ ಬಗ್ಗೆ ತಿಳಿದು ಮಾತನಾಡಬೇಕು, ಸುಮ್ಮನೆ ಏನೇನೋ ಹೇಳಿಕೆ ಕೊಡಬೇಡಿ. ಚಿಯಾನ್ ವಿಕ್ರಂ, ಶರತ್ ಕುಮಾರ್, ವಿಜಯ್ ಸೇತುಪತಿ ಸೇರಿದಂತೆ ಹಲವು ನಟರು ತೆರೆಮೇಲೆ ಸೀರೆ ಉಟ್ಟು ಮಿಂಚಿದ್ದಾರೆ ಎಂದು ಪರಭಾಷಾ ಪ್ರೇಕ್ಷಕರು ರಶ್ಮಿಕಾಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಇನ್ನು 'ಪುಷ್ಪ'-2 ಕಲೆಕ್ಷನ್ ವಿಚಾರಕ್ಕೆ ಬಂದರೆ ಬಹಳ ಬೇಗ 1000 ಕೋಟಿ ರೂ. ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಹಿಂದಿ ವರ್ಷನ್ 406 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಸಿನಿಮಾ ಯಶಸ್ವಿಯಾಗಿ ಒಂದು ವಾರ ಪೂರೈಸಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಶೀಘ್ರದಲ್ಲೇ 'ಕೆಜಿಎಫ್-2' ಹಾಗೂ 'ಬಾಹುಬಲಿ'-2 ದಾಖಲೆಗಳನ್ನು ಮುರಿಯಲಿದೆ. ಆದರೆ ಗಣನೀಯವಾಗಿ ಟಿಕೆಟ್ ದರ ಹೆಚ್ಚಿಸಿದ್ದೇ ಇದಕ್ಕೆ ಕಾರಣ ಎನ್ನುವ ವಾದ ಕೆಲವರದ್ದು.


Click it and Unblock the Notifications











