'ಪುಷ್ಪ' ಎದುರು 'ಕಿಸ್ಸಿಕ್' ಎಂದು ಕುಣಿಯಲು ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು?
ತೆಲುಗಿನ 'ಪುಷ್ಪ'-2 ಚಿತ್ರದ ಐಟಂ ಸಾಂಗ್‌ಗೆ ಕನ್ನಡ ನಟಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ರಾಮೋಜಿ ಫಿಲ್ಮ್‌ಸಿಟಿಯಲ್ಲಿ ಭಾರೀ ಸೆಟ್ ಹಾಕಿ ಸಾಂಗ್ ಶೂಟಿಂಗ್ ಮಾಡಲಾಗ್ತಿದೆ. ಅಲ್ಲು ಅರ್ಜುನ್ ಜೊತೆ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದಾರೆ. 'ಕಿಸ್ಸಿಕ್' ಎಂದು ಶುರುವಾಗುವ ಸಾಂಗ್ ಸಖತ್ ಕಿಕ್ ಕೊಡುವ ನಿರೀಕ್ಷೆಯಿದೆ.
ಡಿಸೆಂಬರ್ 5ರಂದು 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. 3 ವರ್ಷಗಳ ಹಿಂದೆ ಬಂದಿದ್ದ ಮೊದಲ ಭಾಗ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್ ತೆರೆಗಪ್ಪಳಿಸಲು ಸಜ್ಜಾಗಿದೆ. ಹಿಂದಿನ ಸಿನಿಮಾದಲ್ಲಿ 'ಊ ಅಂಟಾವಾ ಮಾವ' ಎಂದು ಸಮಂತಾ ಬಿಂದಾಸ್ ಆಗಿ ಕುಣಿದಿದ್ದರು. ಆ ಸಾಂಗ್ ಇವತ್ತಿಗೂ ಟ್ರೆಂಡಿಂಗ್‌ನಲ್ಲಿದೆ. ಅದನ್ನು ಮೀರಿಸುವಂತೆ ಹೊಸ ಸಾಂಗ್ ಮಾಡಲಾಗ್ತಿದೆ.

ದೇವಿ ಶ್ರೀಪ್ರಸಾದ್ 'ಕಿಸ್ಸಿಕ್' ಸಾಂಗ್‌ಗೆ ಬಿಂದಾಸ್ ಟ್ಯೂನ್ ಹಾಕಿದ್ದಾರೆ. ಶ್ರೀಲೀಲಾ ಇದೇ ಮೊದಲ ಬಾರಿಗೆ ಸ್ಪೆಷಲ್ ಸಾಂಗ್‌ಗೆ ಕುಣಿದಿದ್ದಾರೆ. ಕಳೆದ ವರ್ಷವಷ್ಟೆ ನಾನು ಐಟಂ ಸಾಂಗ್‌ಗೆ ಹೆಜ್ಜೆ ಹಾಕಲ್ಲ. ಸದ್ಯಕ್ಕೆ ಒಳ್ಳೆ ಪಾತ್ರಗಳು ಸಿಗುತ್ತಿವೆ. ಇಂತಹ ಸಮಯದಲ್ಲಿ ಆ ಸಾಹಸ ಮಾಡಲ್ಲ ಎಂದಿದ್ದರು. ಆದರೆ 'ಪುಷ್ಪ'-2 ಚಿತ್ರಕ್ಕಾಗಿ ತಮ್ಮ ನಿರ್ಧಾರ ಬದಲಿಸಿದ್ದಾರೆ.
ಈ ಸ್ಪೆಷಲ್ ಸಾಂಗ್‌ಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕುಣಿಯುತ್ತಾರೆ ಎಂದು ಗುಲ್ಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. ಈ ಬದಲಾವಣೆಗೆ ಸಂಭಾವನೆಯೇ ಮುಖ್ಯ ಕಾರಣ ಎನ್ನಲಾಗ್ತಿದೆ. ಶ್ರದ್ಧಾ ಭಾರೀ ಸಂಭಾವನೆ ಬೇಡಿಕೆ ಇಟ್ಟರು. ಅದಕ್ಕಾಗಿ ನಿರ್ಮಾಪಕರು ಶ್ರೀಲೀಲಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ.
'ಕಿಸ್ಸಿಕ್' ಸಾಂಗ್‌ಗೆ ಕುಣಿಯಲು ಶ್ರೀಲೀಲಾ ಎಷ್ಟು ಸಂಭಾವನೆ ಪಡೆದರು ಎನ್ನುವ ಬಗ್ಗೆ ಊಹಾಪೋಹ ಶುರುವಾಗಿದೆ. 3 ದಿನಗಳ ಕಾಲ ಕಾಲ್‌ಶೀಟ್ ಕೊಟ್ಟು ಒಂದೂವರೆ ಕೋಟಿಯಿಂದ 2 ಕೋಟಿ ರೂಪಾಯಿವರೆಗೂ ಶ್ರೀಲೀಲಾ ಸಂಭಾವನೆ ಪಡೆದಿದ್ದಾರೆ ಎಂದು ಗುಲ್ಲಾಗಿದೆ. ಶ್ರದ್ಧಾ ಕಪೂರ್ 5 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಹಾಗಾಗಿ ಚಿತ್ರತಂಡ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗ್ತಿದೆ.
ಕಥೆಗೆ ಬೇಕೋ ಬೇಡ್ವೋ ತೆಲುಗು ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಇಡುತ್ತಾರೆ. ಬಿಂದಾಸ್ ನಂಬರ್ ಪ್ಲ್ಯಾನ್ ಮಾಡುತ್ತಾರೆ. ಖ್ಯಾತ ನಟಿಯನ್ನು ಕುಣಿಸುತ್ತಾರೆ. ಆ ಮೂಲಕ ಚಿತ್ರಕ್ಕೆ ಹೈಪ್ ಕ್ರಿಯೇಟ್ ಮಾಡುತ್ತಾರೆ. 'ಪುಷ್ಪ'-2 ವಿಚಾರದಲ್ಲೂ ಇದೇ ಪ್ರಯತ್ನ ನಡೀತಿದೆ. ಅದಕ್ಕಾಗಿ ಕೋಟಿ ಕೋಟಿ ಹಣ ಸುರಿದಿದ್ದಾರೆ. ಶೀಘ್ರದಲ್ಲೇ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಲಿದೆ.

ಇನ್ನು ನವೆಂಬರ್ 17ಕ್ಕೆ 'ಪುಷ್ಪ'-2 ಟ್ರೈಲರ್ ಬಿಡುಗಡೆ ಆಗಲಿದೆ. ದೇಶದ 7 ನಗರಗಳಲ್ಲಿ ಈವೆಂಟ್ ನಡೆಸಿ ಸಿನಿಮಾ ಪ್ರಚಾರ ಮಾಡಲು ಚಿತ್ರತಂಡ ಮುಂದಾಗಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. 'ಪುಷ್ಪ' ಚಿತ್ರದ ಮೊದಲ ಭಾಗದಲ್ಲಿ ನಟಿಸಿದ್ದ ಬಹುತೇಕರು ಸೀಕ್ವೆಲ್‌ನಲ್ಲಿ ಕೂಡ ಇರುತ್ತಾರೆ. ಈಗಾಗಲೇ ಸಿನಿಮಾ 1000 ಕೋಟಿ ರೂ. ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ.
ಈಗಾಗಲೇ ಚಿತ್ರದ 2 ಟೀಸರ್ ಹಾಗೂ 2 ಸಾಂಗ್ ರಿಲೀಸ್ ಆಗಿದೆ. ಸಾಂಗ್ಸ್ ಇಷ್ಟವಾದರೂ ಟೀಸರ್‌ಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಟ್ರೈಲರ್ ಮೂಲಕ ದೊಡ್ಡಮಟ್ಟದಲ್ಲಿ ಪುಷ್ಪರಾಜ್ ಸದ್ದು ಮಾಡಲು ಸಿದ್ಧವಾಗಿದ್ದಾನೆ. ಜೊತೆಗೆ 'ಕಿಸ್ಸಿಕ್' ಸಾಂಗ್ ಕೂಡ ಬರಲಿದೆ. ಮೊದಲ ದಿನವೇ ಸಿನಿಮಾ 230 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ರೂಲ್ ಹೇಗಿರುತ್ತೆ ಕಾದು ನೋಡಬೇಕಿದೆ.


Click it and Unblock the Notifications











