ಕಾಲ್ತುಳಿತ ಪ್ರಕರಣ; ಮೃತ ಮಹಿಳೆ ಕುಟುಂಬಕ್ಕೆ ಕೋಟಿ ಕೋಟಿ ಪರಿಹಾರ ಘೋಷಣೆ
'ಪುಷ್ಪ'-2 ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ಚಿತ್ರಮಂದಿರದಲ್ಲಿ ನಡೆದ ದುರಂತ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಟ ಅಲ್ಲು ಅರ್ಜುನ್ ನೋಡಲು ಒಮ್ಮೆಲೆ ಅಭಿಮಾನಿಗಳು ಮುಗಿಬಿದ್ದು ಕಾಲ್ತುಳಿತ ನಡೆದಿತ್ತು. ಈ ವೇಳೆ ರೇವತಿ ಎಂಬ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸ್ ಠಾಣೆಯಿಂದ ಅನುಮತಿ ಇಲ್ಲದೇ ಇದ್ದರೂ ನಟ ಅಲ್ಲು ಅರ್ಜುನ್ ಅಂದು ಸಿನಿಮಾ ನೋಡಲು ಹೋಗಿದ್ದು ತಪ್ಪು. ಆತ ಕಾರ್ ಏರಿ ರ್ಯಾಲಿ ನಡೆಸಿದ್ದು ಇಷ್ಟೆಲ್ಲಾ ಆಗಲು ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಹ ಅರೋಪಿಸಿದ್ದಾರೆ. ಪ್ರಕರಣದಲ್ಲಿ ಎ11 ಆಗಿರುವ ನಟ ಅಲ್ಲು ಅರ್ಜುನ್ ಬಂಧನವಾಗಿತ್ತು. ಮಧ್ಯಂತರ ಜಾಮೀನು ಪಡೆದರೂ ಒಂದು ದಿನ ಜೈಲಿನಲ್ಲಿ ಇರುವಂತಾಗಿತ್ತು.

ಪ್ರಕರಣ ಸಂಬಂಧ ಇತ್ತೀಚೆಗೆ ನಟ ಅಲ್ಲು ಅರ್ಜುನ್ ಮತ್ತೊಮ್ಮೆ ಪೊಲೀಸ್ ವಿಚಾರಣೆ ಎದುರಿಸುವಂತಾಗಿತ್ತು. ನೋಟಿಸ್ ನೀಡಿ ನಟನನ್ನು ಠಾಣೆ ಕರೆಸಿ 3 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಘಟನೆ ಬಳಿಕ ಆಸ್ಪತ್ರೆಯಲ್ಲಿ ದಾಖಲಲಾಗಿರುವ ಬಾಲಕನ ಬಗ್ಗೆ ಗಮನ ಹರಿಸಿಲ್ಲ ಎನ್ನುವ ಆರೋಪವೂ ಕೇಳಿಬಂದಿತ್ತು. ಇದು ಮೃತ ಕುಟುಂಬಕ್ಕೆ 'ಪುಷ್ಪ'-2 ತಂಡ 2 ಕೋಟಿ ರೂ. ಪರಿಹಾರ ಘೋಷಿಸಿದೆ.
ನಟ ಅಲ್ಲು ಅರ್ಜುನ್ ವೈಯಕ್ತಿಕವಾಗಿ ರೇವತಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ಚಿತ್ರದ ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಹಾಗೂ 'ಪುಷ್ಪ'-2 ಚಿತ್ರ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 50 ಲಕ್ಷ ರೂ. ನೀಡಲು ಮುಂದಾಗಿದೆ. ಈ ವಿಚಾರವನ್ನು ಸ್ವತಃ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಖಚಿತಪಡಿಸಿದ್ದಾರೆ.
ಡಿಸೆಂಬರ್ 5ರಂದು 'ಪುಷ್ಪ'-2 ಸಿನಿಮಾ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಸಿನಿಮಾ ವಿಶ್ವದಾದ್ಯಂತ 1500 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಶೀಘ್ರದಲ್ಲೇ 2000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಆದರೆ ಡಿಸೆಂಬರ್ 4ರಂದು ರಾತ್ರಿಯೇ ಚಿತ್ರದ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿತ್ತು. ಅಂದು ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಫ್ಯಾಮಿಲಿ ಜೊತೆ ಸಿನಿಮಾ ನೋಡಲು ಅಲ್ಲು ಅರ್ಜುನ್ ಹೋಗಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಅಂದು ಚಿತ್ರಮಂದಿರದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲು ಅರ್ಜುನ್ ಬರುವ ವಿಚಾರ ಗೊತ್ತಾಗಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಮೃತ ಮಹಿಳೆ ರೇವತಿ ಅವರ ಪತಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಟ ಅಲ್ಲು ಅರ್ಜುನ್ ಜಾಮೀನು ಪಡೆಯಲು ಮುಂದಾಗಿದ್ದರು. ಅಷ್ಟರಲ್ಲಿ ಡಿಸೆಂಬರ್ 13ರಂದು ಪೊಲೀಸರು ಅವರ ಮನೆಗೆ ಹೋಗಿ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಯಿತು.
ಅಲ್ಲು ಅರ್ಜುನ್ ಪರ ವಕೀಲರು ಕೂಡಲೇ ಮಧ್ಯಂತರ ಜಾಮೀನು ಪಡೆದರು. ಆದರೂ ಅಂದು ಜೈಲಿನಿಂದ ಬಿಡುಗಡೆ ಪ್ರಕ್ರಿಯೆ ತಡವಾಯಿತು. ಹಾಗಾಗಿ ಮರುದಿನ ಬೆಳ್ಳಂ ಬೆಳಗ್ಗೆ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದಿದ್ದರು. ಬಳಿಕ ಚಿತ್ರರಂಗದ ಸಾಕಷ್ಟು ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಈ ಬಗ್ಗೆ ಕೂಡ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇತ್ತೀಚೆಗೆ ಅಸೆಂಬ್ಲಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.


Click it and Unblock the Notifications











