ಸುದ್ದಿಗೋಷ್ಠಿ ಮಾಡಿ ಸಿಕ್ಕಿಬಿದ್ರಾ ಅಲ್ಲು ಅರ್ಜುನ್? ಟ್ರೋಲ್ ಆಗುತ್ತಿರುವುದು ಯಾಕೆ?
ಆಂಧ್ರ, ತೆಲಂಗಾಣದಲ್ಲಿ ನಟ ಅಲ್ಲು ಅರ್ಜುನ್ ಬಂಧನ ವಿಚಾರ ಭಾರೀ ಸದ್ದು ಮಾಡುತ್ತಲೇ ಇದೆ. ವಾರ ಕಳೆದರೂ ಈ ವಿಚಾರ ತಣ್ಣಗಾಗಿಲ್ಲ. ಒಂದ್ಕಡೆ ತೆಲಂಗಾಣ ಸಿಎಂ ಅಲ್ಲು ಅರ್ಜುನ್ ವಿರುದ್ಧ ಆರೋಪ ಮಾಡಿದರೆ, ಮತ್ತೊಂದು ಕಡೆ ಅದಕ್ಕೆ 'ಪುಷ್ಪ'-2 ನಟ ಸ್ಪಷ್ಟನೆ ನೀಡಿದ್ದಾರೆ.
ತೆಲಂಗಾಣ ಅಸೆಂಬ್ಲಿಯಲ್ಲಿ ಕೂಡ ಇದೇ ವಿಚಾರ ಚರ್ಚೆ ಆಗಿ ಮತ್ತೆ ಸುದ್ದಿಯಾಗಿದೆ. ಇದಕ್ಕೆ ಸುದ್ದಿಗೋಷ್ಠಿ ನಡೆಸಿ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ನನ್ನದೇನು ತಪ್ಪಿಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಅದು. ಅದನ್ನು ಯಾರೂ ಊಹಿಸಿರಲಿಲ್ಲ. ಆ ಬಗ್ಗೆ ನನಗೆ ನೋವಿದೆ. ಆದರೆ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ಚಾರಿತ್ರ್ಯ ಹರಣವಾಗುತ್ತಿದೆ ಎಂದಿದ್ದಾರೆ.

'ಪುಷ್ಪ'-2 ಸಿನಿಮಾ ಪ್ರೀಮಿಯರ್ ಶೋ ವೀಕ್ಷಿಸಲು ನಟ ಅಲ್ಲು ಅರ್ಜುನ್ ಹೈದರಾಬಾದ್‌ನಲ್ಲಿರುವ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಆದರೆ ನೆಚ್ಚಿನ ನಟನನ್ನು ನೋಡಲು ಒಮ್ಮೆ ಅಭಿಮಾನಿಗಳು ಮುಗಿಬಿದ್ದಾಗ ತಳ್ಳಾಟ ನೂಕಾಟದಲ್ಲಿ ಕಾಲ್ತುಳಿತ ಘಟನೆ ಸಂಭವಿಸಿತ್ತು. ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಪುತ್ರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ನಟ ಅಲ್ಲು ಅರ್ಜುನ್ ಸರಿಯಾದ ಭದ್ರತೆ ಇಲ್ಲದೇ ಚಿತ್ರಮಂದಿರಕ್ಕೆ ಸಿನಿಮಾ ವೀಕ್ಷಿಸಲು ಬಂದಿದ್ದರು. ಬಂದು ಸಿನಿಮಾ ನೋಡಿ ಹೋಗುವುದು ಬಿಟ್ಟು ರ್ಯಾಲಿ ರೀತಿ ಕಾರ್ ಏರಿ ಕೈಬೀಸುತ್ತಾ ಇದ್ದರು. ಕಾಲ್ತುಳಿತಕ್ಕೆ ಇದೇ ಮುಖ್ಯ ಕಾರಣ ಎನ್ನುವುದು ಕೆಲವರ ವಾದ. ತೆಲಂಗಾಣ ಸರ್ಕಾರ ಕೂಡ ಇದೇ ರೀತಿ ಆರೋಪ ಮಾಡುತ್ತಿದೆ.
ಘಟನೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಚಿತ್ರಮಂದಿರದ ಮಾಲೀಕರು, ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಶುಕ್ರವಾರ ಪ್ರಕರಣದ ಎ11 ಆರೋಪಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಷ್ಟರಲ್ಲಿ ಮಧ್ಯಂತರ ಜಾಮೀನು ಸಿಕ್ಕಿತು. ಆದರೂ ನಟ ಒಂದು ರಾತ್ರಿ ಜೈಲಿನಲ್ಲಿ ಇದ್ದು ಬರವಂತಾಗಿತ್ತು.
ಅಲ್ಲು ಅರ್ಜುನ್ ಜೈಲಿನಿಂದ ಹೊರಬಂದ ಬಳಿಕ ಚಿತ್ರರಂಗದ ಹಲವು ಗಣ್ಯರು ಅವರ ಮನೆಗೆ ಭೇಟಿ ನೋಡಿ ಧೈರ್ಯ ತುಂಬಿದ್ದರು. ಈ ಬಗ್ಗೆ ಅಸೆಂಬ್ಲಿಯಲ್ಲಿ ಇತ್ತೀಚೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮಾತನಾಡಿದ್ದರು. ಅಲ್ಲು ಅರ್ಜುನ್ ಒಂದು ರಾತ್ರಿ ಜೈಲಿನಲ್ಲಿ ಇದ್ದರು ಬಂದರು ಅಷ್ಟೆ. ಅವರ ಕೈ ಹೋಯ್ತಾ, ಕಾಲು ಹೋಯ್ತಾ, ಕಿಡ್ನಿ ಹೋಯ್ತಾ? ಚಿತ್ರರಂಗದವರು ಹೋಗಿ ಮಾತನಾಡುವಂಥದ್ದು ಏನಿತ್ತು ಎಂದಿದ್ದರು. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಆ ಬಾಲಕನ ಬಗ್ಗೆ ಯಾರಾದರೂ ತಲೆಕೆಡಿಸಿಕೊಂಡ್ರಾ? ಎಂದು ಪ್ರಶ್ನಿಸಿದ್ದಾರೆ.
ಅಂದು ಕಾಲ್ತುಳಿತ ನಡೆದ ರಾತ್ರಿ ಏನೆಲ್ಲಾ ಆಯಿತು ಎನ್ನುವ ಬಗ್ಗೆ ರೇವಂತ್ ರೆಡ್ಡಿ ಮಾತನಾಡಿದ್ದಾರೆ. ಮುಖ್ಯವಾಗಿ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದಿದ್ದಕ್ಕೆ ಈ ಘಟನೆ ನಡೆಯಿತು ಎಂದು ಆರೋಪಿಸಿದ್ದರು. ನಿನ್ನೆ(ಡಿಸೆಂಬರ್ 21) ರಾತ್ರಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಗಳಿಗೆ ಅಲ್ಲು ಅರ್ಜುನ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು.
ಅಲ್ಲು ಅರ್ಜುನ್ ಸುದ್ದಿಗೋಷ್ಠಿಯಲ್ಲಿ ಹೇಳಿದ ಕೆಲ ವಿಚಾರಗಳು ಈಗ ಟ್ರೋಲ್ ಆಗುತ್ತಿದೆ. ಮುಖ್ಯವಾಗಿ "ನಾನು ಚಿತ್ರಮಂದಿರಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ಹೊರಟುಹೋದೆ" ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. "ಆ ಘಟನೆ ಬಳಿಕ ನೋವಿನಲ್ಲೇ ಕಾಲ ಕಳೆಯುತ್ತೇನೆ. ನನ್ನ ಸಿನಿಮಾ ಸಕ್ಸಸ್ ಸೆಲೆಬ್ರೇಟ್ ಮಾಡಲು ಆಗುತ್ತಿಲ್ಲ. ಅಷ್ಟು ನೊಂದಿದ್ದೇನೆ" ಎಂದಿದ್ದಾರೆ. ಅಲ್ಲು ಅರ್ಜುನ್ ತಂದೆ ಮಾತನಾಡಿ "ಅಂದಿನಿಂದ ನನ್ನ ಮಗ ಯಾವುದೋ ಮೂಲೆಯಲ್ಲಿ ಕೂತು ಘಟನೆ ಬಗ್ಗೆ ಯೋಚಿಸುತ್ತಾ ಇದ್ದಾನೆ" ಎಂದಿದ್ದರು.
ಸದ್ಯ ಅಲ್ಲು ಅರ್ಜುನ್ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಚಿತ್ರಮಂದಿರಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ನೀವು ಹೊರಟು ಹೋದ್ರಾ? ಹಾಗಿದ್ರೆ ಚಿತ್ರದಲ್ಲಿ ಬರುವ ಜಾತ್ರೆ ಸೀನ್ ನೋಡುತ್ತಾ ಎಂಜಾಯ್ ಮಾಡಿದ್ದೀರಾ? ಚಿತ್ರದಲ್ಲಿ ಆ ಸೀನ್ 2 ಗಂಟೆ ಬಳಿಕ ಬರುತ್ತದೆ ಅಲ್ವಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಪುಷ್ಪ'-2 ರಿಲೀಸ್ ಬಳಿಕ ಕೇಕ್ ಕತ್ತರಿಸಿ ಸುಕುಮಾರ್ ಜೊತೆ ಸೆಲೆಬ್ರೇಷನ್ ಮಾಡಿದ್ದೀರಾ, ದೆಹಲಿಯಲ್ಲಿ ಚಿತ್ರದ ಸಕ್ಸಸ್ ಈವೆಂಟ್‌ನಲ್ಲಿ ಭಾಗಿ ಆಗಿ ಮಾತನಾಡಿದ್ದೀರಾ? ಈಗ ನೋಡಿದರೆ ನಾನು ನನ್ನ ಸಿನಿಮಾ ಸಕ್ಸಸ್ ಸೆಲೆಬ್ರೇಟ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಕೂತಿದ್ದೀನಿ ಎನ್ನುತ್ತೀರಾ, ಯಾವುದು ಸರಿ? ಯಾವುದು ತಪ್ಪು? ಎಂದು ವೀಡಿಯೋ ಸಮೇತ ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಅಲ್ಲು ಅರ್ಜುನ್ ಏನು ಹೇಳ್ತಾರೆ ಕಾದು ನೋಡಬೇಕಿದೆ.


Click it and Unblock the Notifications











