ಮಹಿಳೆ ಸಾವು; 'ಪುಷ್ಪ'- 2 ರಿಲೀಸ್ ಬೆನ್ನಲ್ಲೇ ಅಲ್ಲು ಅರ್ಜುನ್ ಬಂಧನವಾಗುತ್ತಾ?
ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಪ್ರಪಂಚದಾದ್ಯಂತ ತೆರೆಗೆ ಬಂದಿದೆ. 11 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಕರ್ನಾಟಕದಲ್ಲೂ ಪುಷ್ಪರಾಜ್ ಆರ್ಭಟ ಜೋರಾಗಿದೆ. ಪ್ರೇಕ್ಷಕರು ಫಸ್ಟ್ ಡೇ ಫಸ್ಟ್ ಶೋ ಮುಗಿಬಿದ್ದು ಸಿನಿಮಾ ನೋಡಿದ್ದಾರೆ.
ಅಲ್ಲು ಅರ್ಜುನ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೂ ಕೂಡ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಒಂದು ದಿನ ಮೊದ್ಲೆ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಬುಧವಾರ ರಾತ್ರಿಯೇ ಪ್ರೇಕ್ಷಕರು ಪುಷ್ಪರಾಜ್ ದರ್ಶನ ಮಾಡಿ ಖುಷಿಪಟ್ಟಿದ್ದಾರೆ. ಮಾಸ್ ಮಸಾಲಾ ಸಿನಿಮಾ ಕಟ್ಟಿಕೊಟ್ಟು ಸುಕುಮಾರ್ ತಕ್ಕಮಟ್ಟಿಗೆ ಗೆದ್ದಿದ್ದಾರೆ.

ಇನ್ನು 'ಪುಷ್ಪ-2' ರಿಲೀಸ್ ಹೊತ್ತಲ್ಲೇ ಹೈದರಾಬಾದ್‌ನಲ್ಲಿ ದುರಂತ ಸಂಭವಿಸಿದೆ. ಅಲ್ಲಿನ ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್ ಸಿನಿಮಾ ನೋಡಲು ಬಂದಿದ್ದರು. ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ತಳ್ಳಾಟ ನೂಕಾಟ ನಡೆದು ಕಾಲ್ತುಳಿತಕ್ಕೆ ಸಿಕ್ಕಿ 39 ವರ್ಷದ ರೇವತಿ ಎಂಬ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಆಕೆಯ 9 ವರ್ಷದ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಹಿಳೆ ಸಾವನ್ನಪ್ಪಿದ ವಿಚಾರದ ಬಗ್ಗೆ 'ಪುಷ್ಪ-2' ಚಿತ್ರದ ನಿರ್ಮಾಪಕರು ಪ್ರತಿಕ್ರಿಯಿಸಿದ್ದಾರೆ. ವಿಷಯ ಗೊತ್ತಾಗಿ ಬಹಳ ಆಘಾತವಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ ಬಾಲಕನ ಚೇತರಿಕೆಗೆ ಪ್ರಾರ್ಥಿಸುತ್ತಿದ್ದೇವೆ. ಆ ಕುಟುಂಬಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇವೆ ಎಂದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಈ ಘಟನೆ ಸಂಬಂಧ ತೆಲಂಗಾಣ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧ ನಟ ಅಲ್ಲು ಅರ್ಜುನ್ ವಿರುದ್ಧ ದೂರುಗಳು ದಾಖಲಾಗುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಜೊತೆ ಸೇರಿ ಬಕ್ಕ ಜಾಡ್ಸನ್ ಎಂಬುವವರು HYDRA ಕಮೀಷನರ್ ದೂರು ನೀಡಿದ್ದಾರೆ. ಈ ಘಟನೆಗೆ ಅಲ್ಲು ಅರ್ಜುನ್, ಚಿತ್ರದ ನಿರ್ಮಾಪಕರು ಹಾಗೂ ಪೊಲೀಸರು ಕಾರಣ. ರಾತ್ರಿ ವೇಳೆ ಅಲ್ಲು ಅರ್ಜುನ್ ಯಾಕೆ ಬರಬೇಕಿತ್ತು. ಕೂಡಲೇ ಆತನನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.
ಪ್ರಗತಿಶೀಲ ಪ್ರಜಾಪ್ರಭುತ್ವ ವಿದ್ಯಾರ್ಥಿ ಸಂಘ ಕೂಡ ಈ ಘಟನೆಯನ್ನು ಖಂಡಿಸಿದೆ. ನಟ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಯಾಕೆ ಬಂದರು. ತಮ್ಮ ಲಾಭಕ್ಕಾಗಿ ಅವರು ಬಂದಿದ್ದಾರೆ. ಇನ್ನು ಸಂಧ್ಯಾ ಚಿತ್ರಮಂದಿರದ ಮುಂದೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮೃತ ರೇವತಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಕುಟುಂಬಕ್ಕೆ 1 ಕೋಟಿ ಪರಿಹಾರ ಎಸ್ಎಫ್ಐ , ಡಿವೈಎಫ್ಐ, ವಿದ್ಯಾರ್ಥಿ ಸಂಘಗಳು ಬೇಡಿಕೆ ಇಟ್ಟಿದ್ದರು.
3 ವರ್ಷಗಳ ಹಿಂದೆ 'ಪುಷ್ಪ' ಸಿನಿಮಾ ತೆರೆಗೆ ಬಂದು ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆ ಇತ್ತು. ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಪ್ರೀಮಿಯರ್ ಶೋಗಳ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿತ್ತು. 5 ಪಟ್ಟು 10 ಪಟ್ಟು ಟಿಕೆಟ್ ದರ ಹೆಚ್ಚಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕದಲ್ಲಿ ಕೂಡ ಟಿಕೆಟ್ ದರ ಹೆಚ್ಚಿತ್ತು. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿತ್ತು. ಬುಕ್‌ಮೈ ಶೋನಲ್ಲಿ ದಾಖಲೆ ಬರೀತಿದೆ.
ಟಿಕೆಟ್ ದರ ಹೆಚ್ಚಾದ ಕಾರಣ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ಬುಕ್ಕಿಂಗ್ ನಡೆಯಲಿಲ್ಲ. ಆಂಧ್ರ, ತೆಲಂಗಾಣದಲ್ಲಿ ಕೂಡ ಟಿಕೆಟ್ ದರ ಹೆಚ್ಚಾಗಿತ್ತು. ಮಧ್ಯಮವರ್ಗದ ಪ್ರೇಕ್ಷಕರು ಇಷ್ಟು ಹಣ ಕೊಟ್ಟು ಸಿನಿಮಾ ನೋಡಲು ಸಾಧ್ಯವೇ ಎಂದು ಅಸಮಾಧಾನ ಹೊರ ಹಾಕಿದ್ದರು. ಆದರೆ ಚಿತ್ರತಂಡ ಮಾತ್ರ ಬಜೆಟ್ ಜಾಸ್ತಿ ಎಂದು ಹೇಳಿ ಅದನ್ನು ಮರಳಿ ಪಡೆಯಲು ಟಿಕೆಟ್ ದರ ಹೆಚ್ಚಿಸಿದ್ದಾರೆ.


Click it and Unblock the Notifications











