ದುರಾಸೆ.. 'ಪುಷ್ಪ-2'ಗೆ ಕರ್ನಾಟಕದಲ್ಲಿ ಗೋ ಗ್ರೀನ್ ಬಿಸಿ; ಎಡವಟ್ಟು ಆಗಿದ್ದೆಲ್ಲಿ?
ಸುಕುಮಾರ್ ನಿರ್ದೇಶನದ 'ಪುಷ್ಪ'-2 ಬಿಡುಗಡೆ ಇನ್ನು 3 ದಿನ ಮಾತ್ರ ಬಾಕಿಯಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಕರ್ನಾಟಕದಲ್ಲಿ ಕೂಡ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆಯಲ್ಲಿದೆ ಚಿತ್ರತಂಡ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಆದರೆ ಬುಕ್ಕಿಂಗ್ ಮಾತ್ರ ನಿರೀಕ್ಷಿತಮಟ್ಟದಲ್ಲಿ ಇಲ್ಲ.
ಇತ್ತೀಚೆಗೆ ಪರಭಾಷೆಯ ದೊಡ್ಡ ಸಿನಿಮಾಗಳನ್ನು ರಾಜ್ಯದಲ್ಲಿ ದೊಡ್ಡದಾಗಿ ರಿಲೀಸ್ ಮಾಡುತ್ತಿದ್ದಾರೆ. 5 ಆ ಭಾಷೆಗಳಿಗೆ ಡಬ್ ಆಗಿ ನೂರಾರು ಸ್ಕ್ರೀನ್‌ಗಳಲ್ಲಿ ಸಾವಿರಾರು ಶೋಗಳನ್ನು ಹಾಕಲಾಗುತ್ತಿದೆ. ಅದರಲ್ಲೂ ಬೆಳ್ಳಂ ಬೆಳಗ್ಗೆ 4 ಗಂಟೆಗೆ ಮೊದಲ ಪ್ರದರ್ಶನ ಆರಂಭಿಸುತ್ತಿದ್ದಾರೆ. 'ಜೈಲರ್', 'ಲಿಯೋ', 'ಕಲ್ಕಿ 2898 AD', 'GOAT' ಹಾಗೂ 'ವೆಟ್ಟೆಯಾನ್' ಚಿತ್ರಗಳು ಇದೇ ರೀತಿ ಸದ್ದು ಮಾಡಿತ್ತು.

ಕರ್ನಾಟಕದಲ್ಲಿ 'ಪುಷ್ಪ'-2 ಕ್ರೇಜ್ ಜೋರಾಗಿದೆ. ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಪ್ರೇಕ್ಷಕರು ತಮ್ಮ ಟಿಕೆಟ್ ಕಾಯ್ದಿರಲು ಮುಂದಾಗಿದ್ದಾರೆ. ಆದರೆ ಯಾರೋ ತಕ್ಕ ಮಟ್ಟಿಗೆ ರೆಸ್ಪಾನ್ಸ್ ಸಿಗುತ್ತಿಲ್ಲ. ಅದಕ್ಕೆ ಕಾರಣ ಕೂಡ ಇದೆ. ವಿತರಕರ ಅತಿಯಾದ ಆಸೆಯಿಂದ ಈ ರೀತಿ ಆಗುತ್ತಿದೆ. ಬೇಗ ನಿರ್ಧಾರ ಬದಲಿಸದೇ ಇದ್ದರೆ ಇದರಿಂದ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗಬಹುದು.
3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಹಿಟ್ ಆಗಿತ್ತು. ಅದರ ಬೆಂಬಲ ಸೀಕ್ವೆಲ್‌ಗೆ ಇದೆ. ಜನ ಸಿನಿಮಾ ನೋಡಲು ಕಾಯುತ್ತಿರುವುದು ನಿಜ. ಹಾಗಂತ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಿದ್ದರೆ ಪ್ರೇಕ್ಷಕರು ಸಹಜವಾಗಿಯೇ ಹಿಂದೇಟು ಹಾಕುತ್ತಾರೆ. 'ಪುಷ್ಪ'-2 ವಿಚಾರದಲ್ಲಿ ಇದೇ ರೀತಿ ಆಗುತ್ತಿದೆ. ಬೆಂಗಳೂರಿನಲ್ಲಿ 4 ಪಟ್ಟು, 8 ಪಟ್ಟು ಟಿಕೆಟ್ ದರ ಏರಿಸಿದ್ದಾರೆ. ಅಷ್ಟು ಹಣ ತೆತ್ತು ಸಿನಿಮಾ ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ.
ಗುರುವಾರ(ಡಿಸೆಂಬರ್ 5) 4 ಗಂಟೆ ಹಾಗೂ 7 ಗಂಟೆ ಶೋಗಳ ಟಿಕೆಟ್ ದರ 1000 ರೂ. 2000 ರೂ. ನಿಗದಿಯಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 1000 ರೂ. ಎಂದು ನೋಡಿ ಜನ ಶಾಕ್ ಆಗಿದ್ದಾರೆ. ನಿಧಾನವಾಗಿಯೇ ಸಿನಿಮಾ ನೋಡೋಣ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಇನ್ನುಳಿದಂತೆ ಸಾಮಾನ್ಯ ಟಿಕೆಟ್ ದರ ಇರುವ ಥಿಯೇಟರ್‌ಗಳಲ್ಲಿ ಶೋಗಳ ಬುಕ್ಕಿಂಗ್ ಚೆನ್ನಾಗಿದೆ. ಕೆಲ ಶೋಗಳು ಸೋಲ್ಡೌಟ್ ಸಹ ಆಗಿದೆ. ಆದರೆ ದೊಡ್ಡಮಟ್ಟದಲ್ಲಿ ಬುಕ್ಕಿಂಗ್ ಇನ್ನು ಆಗಿಲ್ಲ.

ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ 'ಪುಷ್ಪ'-2 ತೆಲುಗು ವರ್ಷನ್ ದರ ಹೆಚ್ಚಿದೆ. ಬೆಳಗ್ಗೆ 4 ಗಂಟೆ ಶೋಗೆ ಸಿಲ್ವರ್ ಕ್ಲಾಸ್ 800 ರೂ. ಹಾಗೂ ಗೋಲ್ಡ್ ಕ್ಲಾಸ್ 1000 ರೂ. ಇದೆ. ಆದರೆ ಅನುಪಮಾ ಚಿತ್ರಮಂದಿರದಲ್ಲಿ ಕನ್ನಡ ಹಾಗೂ ಸಂತೋಷ್ ಚಿತ್ರಮಂದಿರದಲ್ಲಿ ಹಿಂದಿ ವರ್ಷನ್ ಬಿಡುಗಡೆ ಆಗ್ತಿದೆ. ಅಲ್ಲಿ ಟಿಕೆಟ್ ದರ ಎಂದಿನಂತೆ ಇದೆ. ಟಿಕೆಟ್ ದರ ಹೆಚ್ಚಿಸಿರುವುದೇ ಬುಕ್ಕಿಂಗ್ ಡಲ್ ಆಗಲು ಪ್ರಮುಖ ಕಾರಣ ಎನ್ನುವುದು ಗೊತ್ತಾಗುತ್ತಿದೆ.
ಅಲ್ಲು ಅರ್ಜುನ್ ಹಾಗೂ ಮೆಗಾ ಫ್ಯಾನ್ಸ್ ನಡುವಿನ ತಿಕ್ಕಾಟ ಕೂಡ 'ಪುಷ್ಪ'-2 ಚಿತ್ರಕ್ಕೆ ಹಿನ್ನಡೆ ತಂದೊಡ್ಡಿದೆ ಎನ್ನಲಾಗ್ತಿದೆ. ಮುಂದಿನ ದಿನಗಳಲ್ಲಿ ಟಿಕೆಟ್ ದರ ಕಮ್ಮಿ ಆಗುತ್ತಾ? ಶೋಗಳು ಹೌಸ್‌ಫುಲ್ ಆಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ.
'ಪುಷ್ಪ'-2 ಚಿತ್ರದಲ್ಲಿ ಕನ್ನಡ ಕಲಾವಿದರು ಕೆಲಸ ಮಾಡಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಮತ್ತೊಮ್ಮೆ ಜಾಲಿ ರೆಡ್ಡಿಯಾಗಿ ಡಾಲಿ ಧನಂಜಯ್ ನಟಿಸಿದ್ದಾರೆ. ಇನ್ನು ಐಟಂ ಸಾಂಗ್‌ಗೆ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ನೆಗೆಟಿವ್ ಪಾತ್ರದಲ್ಲಿ ತಾರಕ್ ಪೊನ್ನಪ್ಪ ಅಬ್ಬರಿಸಿದ್ದಾರೆ.


Click it and Unblock the Notifications











