ಬೆದರಿಕೆ ಪ್ರಕರಣದಲ್ಲಿ ಬಂಧನವಾಗಿರುವ 'ಪುಷ್ಪ' ನಟ ಜಗದೀಶ್: ವಿಚಾರಣೆ ವೇಳೆ ಆತ ಹೇಳಿದ್ದೇನು?
ಜೂನಿಯರ್ ಆರ್ಟಿಸ್ಟ್ ಆತ್ಯಹತ್ಯೆ ಪ್ರಕರಣದಲ್ಲಿ 'ಪುಷ್ಪ' ಸಿನಿಮಾ ನಟ ಜಗದೀಶ್ ಬಂಧನವಾಗಿತ್ತು. ಕೆಲ ದಿನಗಳ ಕಾಲ ಆಕೆಯ ಜೊತೆ ಸಹಜೀವನ ನಡೆಸುತ್ತಿದ್ದ ಜಗದೀಶ್ ಆಕೆಯನ್ನು ಬೆದಿರಿಸಿದ್ದ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ನಟ ವಿಚಾರಣೆ ವೇಳೆ ತನ್ನ ತಪ್ಪು ಒಪ್ಪಿಕೊಂಡಿರುವುದಾಗಿ ವರದಿಯಾಗುತ್ತಿದೆ.
'ಪುಷ್ಪ' ಚಿತ್ರದಲ್ಲಿ ನಾಯಕ 'ಪುಷ್ಪ'ರಾಜ್ ಬಲಗೈ ಬಂಟ ಕೇಶವ ಪಾತ್ರದಲ್ಲಿ ಜಗದೀಶ್ ನಟಿಸಿದ್ದರು. ಆ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಜಗದೀಶ್ ಪಾತ್ರಕ್ಕೂ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ ಚಿತ್ರದ ಸೀಕ್ವೆಲ್ ಚಿತ್ರೀಕರಣ ನಡೀತಿದೆ. 'ಪುಷ್ಪ' ದಿ ರೈಸ್ ಸಿನಿಮಾ 2 ವರ್ಷ ಪೂರೈಸಿದೆ. ಹಲವು ದಾಖಲೆಗಳನ್ನು ಬರೆದ ಚಿತ್ರವನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೇ ಜಗದೀಶ್ ತನ್ನ ವಿಚಾರಣೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.

ಕಾಕಿನಾಡ ಮೂಲಕ ಮಹಿಳೆಯೊಬ್ಬರು ಮದುವೆಯಾಗಿ ಗಂಡನಿಂದ ವಿಚ್ಛೇದನ ಪಡೆದಿದ್ದರು. ಹೈದರಾಬಾದ್‌ಗೆ ಬಂದು ಸೋಮಾಜಿಗುಡದಲ್ಲಿ ನೆಲೆಸಿದ್ದ ಆಕೆ ಚಿತ್ರರಂಗದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಗುರ್ತಿಸಿಕೊಂಡಿದ್ದರು. ಆಕೆಗೆ ನಟ ಜಗದೀಶ್ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ಸಹಜೀವನ ನಡೆಸುತ್ತಿದ್ದರು. ಆದರೆ 'ಪುಷ್ಪ' ಸಿನಿಮಾ ಸಕ್ಸಸ್ ಬಳಿಕ ಜಗದೀಶ್ ವರಸೆ ಬದಲಿಸಿದ್ದರು. ಹಾಗಾಗಿ ಆಕೆ ಮತ್ತೊಬ್ಬನ ಜೊತೆ ನಿಕಟ ಸಂಪರ್ಕದಲ್ಲಿದ್ದಳು ಎನ್ನಲಾಗುತ್ತಿದೆ.
ಕೆಲ ದಿನಗಳ ಹಿಂದೆ ಆಕೆ ಆ ಯುವಕನ ಜೊತೆ ಏಕಾಂತದಲ್ಲಿದ್ದ ಫೋಟೊ, ವಿಡಿಯೋಗಳನ್ನು ಚಿತ್ರೀಕರಿಸಿದ್ದ ಜಗದೀಶ್ ಅದನ್ನು ಸೋಶಿಯಲ್ ಮೀಡಿಯಾಗೆ ಹಾಕುವುದಾಗಿ ಬೆದರಿಕೆ ಒಡ್ಡಿದ್ದ ಎನ್ನುವ ಮಾತುಗಳು ಕೇಳಿಬರ್ತಿದೆ. ಆತನ ಬೆದರಿಕೆಗೆ ಹೆದರಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿತ್ತು. ಅದೇ ಕಾರಣಕ್ಕೆ ಪಂಜಗುಟ್ಟ ಪೊಲೀಸರು ನಟ ಜಗದೀಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ವಿಚಾರಣೆಯಲ್ಲಿ ಜಗದೀಶ್ ತನ್ನ ತಪ್ಪು ಒಪ್ಪಿಕೊಂಡಿದ್ದು ಏನೆಲ್ಲಾ ಆಯಿತು ಎನ್ನುವ ವಿಚಾರವನ್ನು ಬಹಿರಂಗಪಡಿಸಿರುವುದಾಗಿ ವರದಿಯಾಗುತ್ತಿದೆ. ಆಕೆ ಮತ್ತೊಬ್ಬನ ಜೊತೆ ಆತ್ಮೀಯವಾಗಿ ಇದ್ದಿದ್ದು ಸಹಿಸಲಾರದೇ ಈ ರೀತಿ ಬೆದರಿಕೆವೊಡ್ಡಿದ್ದಾಗಿ ಜಗದೀಶ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಹೆಚ್ಚಿನ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಜಗದೀಶ್ ವಿರುದ್ಧ ವಿರುದ್ಧ ಐಪಿಸಿ ಸೆಕ್ಷನ್ 354(ಸಿ) ಮತ್ತು 306 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂದಹಾಗೆ ಜಗದೀಶ್ ಪೂರ್ಣ ಹೆಸರು ಜಗದೀಶ್ ಪ್ರತಾಪ್ ಭಂಡಾರಿ. 2019ರಲ್ಲಿ ಬಂದ 'ಮಲ್ಲೇಶಂ' ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದರು. ಬಳಿಕ 'ಜಾರ್ಜ್ ರೆಡ್ಡಿ', 'ಪಲಾಸ 1978' ಸಿನಿಮಾಗಳಲ್ಲಿ ಮಿಂಚಿದ್ದರು. ಆ ನಂತರ ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದ ಕೇಶವ ಪಾತ್ರಕ್ಕೆ ಆಡಿಯನ್ ಕೊಟ್ಟು ಆಯ್ಕೆ ಆಗಿದ್ದರು. ಸಿನಿಮಾ ಹಿಟ್ ಆಗುತ್ತಿದ್ದಂತೆ ಜಗದೀಶ್ ಖದರ್ ಬದಲಾಗಿತ್ತು. ಸಾಕಷ್ಟು ಸಿನಿಮಾ ಅವಕಾಶಗಳು ಸಿಗಲು ಆರಂಭವಾಗಿತ್ತು. ಹಾಗಾಗಿ ಆತನ ನಡೆ ನುಡಿಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿತ್ತು ಎನ್ನಲಾಗುತ್ತದೆ.
ಶೀಘ್ರದಲ್ಲಿ ಪ್ರಕರಣದಲ್ಲಿ ನಟ ಜಗದೀಶ್‌ಗೆ ಜಾಮೀನು ಸಿಗುವ ಸಾಧ್ಯತೆಯಿದೆ. 'ಪುಷ್ಪ'-2 ಸಿನಿಮಾ ಚಿತ್ರೀಕರಣ ಇನ್ನು ಬಾಕಿಯಿದೆ. ಹಾಗಾಗಿ ಜಾಮೀನು ಪಡೆದು ಹೊರಬಂದು ಜಗದೀಶ್ ನಟಿಸುವ ಸಾಧ್ಯತೆಯಿದೆ. ಮುಂದಿನ ವರ್ಷ ಆಗಸ್ಟ್ 15ಕ್ಕೆ ಸೀಕ್ವೆಲ್ ತೆರೆಗೆ ಬರಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಚಿತ್ರದಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಮುಂದುವರೆಸಲಿದ್ದಾರೆ.
ಪ್ರೀಕ್ವೆಲ್‌ಗೆ ಸಿಕ್ಕ ಅದ್ಭುತ ಸಕ್ಸಸ್‌ನಿಂದ ಚಿತ್ರತಂಡ ಸೀಕ್ವೆಲ್ ಅನ್ನು ಮತ್ತಷ್ಟು ಅದ್ಧೂರಿಯಾಗಿ ತೆರೆಗೆ ತರಲು ಮುಂದಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











