ಪುಷ್ಪ: ರಾಕ್ಷಸನಿಗೇ ರಾಕ್ಷಸ ಫಹಾದ್ ಫಾಸಿಲ್
ನಟ ಫಹಾದ್ ಫಾಸಿಲ್ ಭಾರತ ಚಿತ್ರರಂಗದ ಪ್ರಸ್ತುತ ಅತ್ಯದ್ಭುತ ನಟರಲ್ಲಿ ಒಬ್ಬರು. ಮಲಯಾಳಂ ಸಿನಿಮಾದ ಈ ನಟ ತಮ್ಮ ಅತ್ಯದ್ಭುತ ನಟನೆಯಿಂದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು ಪಡೆದುಕೊಂಡಿದ್ದಾರೆ.
ಫಹಾದ್ ಫಾಸಿಲ್ ನಟನೆ ಮೆಚ್ಚಿ ತಮಿಳು, ತೆಲುಗು ಚಿತ್ರರಂಗದವರೂ ಸಹ ಫಾಸಿಲ್ ಅವರನ್ನು ಕರೆದು ಅವಕಾಶಗಳನ್ನು ನೀಡುವ ಮೂಲಕ ತಮ್ಮ ಸಿನಿಮಾದ ಸಹ ಮೌಲ್ಯ ಹೆಚ್ಚಿಸಿಕೊಳ್ಳುತ್ತಿವೆ. ಈಗಾಗಲೇ ಒಂದು ಎರಡು ತಮಿಳು ಸಿನಿಮಾದಲ್ಲಿ ನಟಿಸಿರುವ ಫಹಾದ್ ಫಾಸಿಲ್ ಇದೀಗ ಮೊದಲ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.
ಫಹಾದ್ ಫಾಸಿಲ್ ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಪುಷ್ಪ'ದಲ್ಲಿ ನಟಿಸುತ್ತಿದ್ದಾರೆ. 'ಪುಷ್ಪ' ಸಿನಿಮಾದ ಮುಖ್ಯ ವಿಲನ್ ಫಹಾದ್ ಫಾಸಿಲ್ ಅವರಾಗಿದ್ದಾರೆ. ಸಿನಿಮಾದ ಎರಡೂ ಭಾಗಗಳಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಳ್ಳಲಿದ್ದಾರೆ. ಈವರೆಗೆ ಟೀಸರ್, ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿರುವ 'ಪುಷ್ಪ' ಚಿತ್ರತಂಡ ಇದೇ ಮೊದಲ ಬಾರಿಗೆ ಫಹಾದ್ ಫಾಸಿಲ್‌ರ ಪೋಸ್ಟರ್ ಬಿಡುಗಡೆ ಮಾಡಿದೆ.

ಇಂದು ಫಹಾದ್ ಫಾಸಿಲ್ ಹುಟ್ಟುಹಬ್ಬ
ಇಂದು ಫಹಾದ್ ಫಾಸಿಲ್ ಹುಟ್ಟುಹಬ್ಬವಾಗಿದ್ದು 'ಪುಷ್ಪ' ಚಿತ್ರತಂಡವು ಫಹಾದ್ ಫಾಸಿಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಫಹಾದ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಚಿತ್ರತಂಡವು ಇದೀಗ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಫಹಾದ್ ಫಾಸಿಲ್‌ರ ಒಂದು ಕಣ್ಣಷ್ಟೆ ಕಾಣುತ್ತಿದೆ. ಆ ಕಣ್ಣಿನಲ್ಲಿಯೇ ಕೋಪ, ಕ್ರೌರ್ಯ, ರೋಷ, ಪ್ರತೀಕಾರ ಕುಟಿಲತೆಗಳನ್ನು ತುಳುಕಿಸಿದ್ದಾರೆ ಫಹಾದ್ ಫಾಸಿಲ್. ''ಪುಷ್ಪ' ಸಿನಿಮಾದ ವಿಲನ್ (ಅಂಟ್ಯಾಗನಿಸ್ಟ್) ಫಹಾದ್ ಫಾಸಿಲ್‌ಗೆ ಹುಟ್ಟುಹಬ್ಬದ ಶುಭಾಶಯ. ನೀವು ಅತ್ಯಂತ ಪ್ರತಿಭಾವಂತ ನಟ'' ಎಂದು 'ಪುಷ್ಪ' ಚಿತ್ರತಂಡ ಫಹಾದ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಫಹಾದ್ ಫಾಸಿಲ್ ಪಾತ್ರ ಇರಲಿಲ್ಲ
'ಪುಷ್ಪ' ಸಿನಿಮಾ ಪ್ರಾರಂಭವಾದಾಗ ಫಹಾದ್ ಫಾಸಿಲ್ ಪಾತ್ರವೇ ಇರಲಿಲ್ಲವಂತೆ ಆದರೆ ಕತೆಯನ್ನು ಹಿಂಜಿದಷ್ಟು ಕತೆಗೆ ಇನ್ನೊಬ್ಬ ಪ್ರಮುಖ ವಿಲನ್ ಅಗತ್ಯ ಕಂಡು ಬಂದಾಗ ಫಹಾದ್ ಫಾಸಿಲ್ ಪಾತ್ರದ ಉಗಮವಾಗಿದೆ. ಆ ನಂತರ ಆ ಪಾತ್ರವನ್ನು ನಾಯಕನ ಪಾತ್ರದಷ್ಟೇ ಗಟ್ಟಿಗೊಳಿಸಿ ಅದಕ್ಕೆ ಸೂಕ್ತನಟನಾದ ಫಹಾದ್ ಫಾಸಿಲ್ ಅವರನ್ನು ಆಯ್ಕೆ ಮಾಡಲಾಗಿದೆ. 'ಪುಷ್ಪ' ಸಿನಿಮಾದಲ್ಲಿ ಖಳನಟರ ದಂಡೇ ಇದೆ. ಅವರಲ್ಲೆಲ್ಲ ಫಹಾದ್ ಫಾಸಿಲ್ ಮುಖ್ಯ ವಿಲನ್ ಎನ್ನಲಾಗುತ್ತಿದೆ.

ಎರಡು ಭಾಗಗಳಲ್ಲಿ 'ಪುಷ್ಪ' ತೆರೆಗೆ
'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಮೊದಲ ಭಾಗದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಆದರೆ ಫಹಾದ್ ಫಾಸಿಲ್ ಮೊದಲ ಭಾಗಕ್ಕಿಂತಲೂ ಎರಡನೇ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ಜಗಪತಿ ಬಾಬು, ಕನ್ನಡದ ನಟ ಧನಂಜಯ್ ಮುಖ್ಯ ವಿಲನ್‌ಗಳಾಗಿರುತ್ತಾರೆ ಎನ್ನಲಾಗಿದೆ. ಮೊದಲ ಭಾಗದಲ್ಲಿ ಫಹಾದ್ ಫಾಸಿಲ್ ಇರುತ್ತಾರಾದರೂ ತೆರೆಯ ಮೇಲೆ ಹೆಚ್ಚಿಗೆ ಕಾಣಿಸಿಕೊಳ್ಳುವುದಿಲ್ಲ ಬದಲಿಗೆ ಅವರು ಎರಡನೇ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ಕಾಮಿಡಿ ನಟ ಸುನಿಲ್ ಸಹ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಸಿನಿಮಾ
'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಮಾಡುವ ವ್ಯಕ್ತಿಯೊಬ್ಬನ ಕತೆಯಾಗಿದ್ದು, ಸಿನಿಮಾದ ನಾಯಕನ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವೀಸ್ ಹಾಗೂ ಮುಟ್ಟಮ್ ಶೆಟ್ಟಿ ಮೀಡಿಯಾ ನಿರ್ಮಾಣ ಮಾಡುತ್ತಿದೆ. ಸಿನಿಮಾಕ್ಕೆ ಸಂಗೀತವನ್ನು ದೇವಿಶ್ರೀಪ್ರಸಾದ್ ನೀಡುತ್ತಿದ್ದಾರೆ. ಆಗಸ್ಟ್ 13 ರಂದು ಮೊದಲ ಹಾಡು ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾವು ಡಿಸೆಂಬರ್ 5 ರಂದು ಬಿಡುಗಡೆ ಆಗಲಿದೆ. ಕೊರೊನಾ ಪರಿಸ್ಥಿತಿಯ ಮೇಲೆ ಸಿನಿಮಾದ ಬಿಡುಗಡೆ ನಿರ್ಭರವಾಗಿದೆ


Click it and Unblock the Notifications











