'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್ ಮಾರಾಟ ಗೊಂದಲ ನಿವಾರಣೆ
'ಪುಷ್ಪ' ಸಿನಿಮಾ ಭಾರತದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ಅಲ್ಲು ಅರ್ಜುನ್ ಅಭಿಮಾನಿಗಳು, ಸಿನಿಪ್ರೇಮಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂತೆಯೇ, ಸಿನಿಮಾ ಸಹ ಚೆನ್ನಾಗಿ ಮೂಡಿಬಂದಿದೆಯೆಂದು ಚಿತ್ರತಂಡ ಹೇಳಿಕೊಂಡಿದೆ.
'ಪುಷ್ಪ' ಸಿನಿಮಾ ತೆಲುಗು ಮಾತ್ರವೇ ಅಲ್ಲದೆ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಡಬ್ಬಿಂಗ್ ಸಹ ಪೂರ್ತಿಯಾಗಿದೆ. ಸಿನಿಮಾ ಬಿಡುಗಡೆಗೆ ಹಂತಕ್ಕೆ ಬರುವ ವೇಳೆಗೆ ಕೆಲ ಸಮಸ್ಯೆಗಳು ನಿರ್ಮಾಪಕರಿಗೆ ಎದುರಾಗಿದೆ.
ಚಿತ್ರಮಂದಿರ ಟಿಕೆಟ್ ದರಗಳ ವಿಷಯದಲ್ಲಿ ಸರ್ಕಾರ ಹಾಗೂ ಚಿತ್ರರಂಗಕ್ಕೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಚಿತ್ರನಿರ್ಮಾಪಕರಿಗೆ ಸಮಸ್ಯೆ ತಂದೊಡ್ಡಿದೆ. ಹಾಗಾಗಿ ಆಂಧ್ರದಲ್ಲಿ ಆಗಬಹುದಾದ ಲಾಭದ ಕೊರತೆಯನ್ನು ಬೇರೆ ರಾಜ್ಯಗಳ ಮೂಲಕ ಸಮತೋಲನ ಮಾಡಿಕೊಳ್ಳಲು ಚಿತ್ರತಂಡ ಯೋಜಿಸಿ ಡಬ್ಬಿಂಗ್ ಸಿನಿಮಾವನ್ನು ಹೆಚ್ಚು ಭಾಷೆಯಲ್ಲಿ ಬಿಡುಗಡೆ ಮಾಡಲು ಇಚ್ಛಿಸಿತ್ತು. ಆದರೆ ಹಿಂದಿ ಡಬ್ಬಿಂಗ್ ಬಿಡುಗಡೆ ವಿಷಯದಲ್ಲಿ ಗೊಂದಲ ಉಂಟಾಗಿತ್ತು.

ಮೊದಲೇ ಮಾರಾಟ ಮಾಡಿಬಿಟ್ಟಿದ್ದ ಚಿತ್ರತಂಡ
'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್ ವಿಷಯ ಗೊಂದಲ ಮೂಡಿಸಿತ್ತು. 'ಪುಷ್ಪ' ಸಿನಿಮಾ ಚಿತ್ರೀಕರಣ ಆರಂಭದ ಸಮಯದಲ್ಲಿಯೇ ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ತಮ್ಮ ಮಾಮೂಲಿ ವಿತರಕ ಸಂಸ್ಥೆಗೆ ಹಿಂದಿ ಸಿನಿಮಾದ ಡಬ್ಬಿಂಗ್ ಹಕ್ಕನ್ನು ಮಾರಾಟ ಮಾಡಿಬಿಟ್ಟರು. ಆದರೆ ಸಿನಿಮಾದ ಚಿತ್ರೀಕರಣ ಪ್ರಾರಂಭವಾದ ಬಳಿಕ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುವುದು ಖಾತ್ರಿಯಾಯಿತು ಹಾಗೂ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗುವುದು ಗೊತ್ತಾಯಿತು.

ಒಪ್ಪಂದ ರದ್ದು ಮಾಡಿಕೊಂಡ ಚಿತ್ರತಂಡ
ಆದರೆ ಹಿಂದಿ ಡಬ್ಬಿಂಗ್ ಹಕ್ಕು ಪಡೆದಿದ್ದ ವಿತರಕ ಹೆಚ್ಚುವರಿ ಹಣ ಕೊಡಲು ಒಪ್ಪಲಿಲ್ಲ. ಜೊತೆಗೆ ಈ ಹಿಂದಿನ ಒಪ್ಪಂದದಲ್ಲಿ ಸಿನಿಮಾ ಚಿತ್ರಮಂದಿರ ಬಾಡಿಗೆ ನಿರ್ಮಾಪಕರೇ ತುಂಬುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸಿನಿಮಾ ಪ್ರಚಾರದ ಖರ್ಚು ಸಹ ನಿರ್ಮಾಪಕರ ಮೇಲೆಯೇ ಇತ್ತು. ಇದೆಲ್ಲವುದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿತ್ತು. ಕೊನೆಗೆ ಅಲ್ಲು ಅರ್ಜುನ್, ತಮ್ಮ ಪರಿಚಯದ ಹಿಂದಿ ನಿರ್ಮಾಪಕರ ಮೂಲಕ ವಿತರಕ ಸಂಸ್ಥೆಯೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅವರ ಒಪ್ಪಂದವನ್ನು ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನಿಲ್ ತಂಡಾನಿ ಕೈಗೆ 'ಪುಷ್ಪ' ಸಿನಿಮಾ
ಇದೀಗ 'ಪುಷ್ಪ' ಸಿನಿಮಾದ ಹಿಂದಿ ಡಬ್ಬಿಂಗ್ ಬಿಡುಗಡೆ ಹಕ್ಕನ್ನು ಬಾಲಿವುಡ್‌ನ ಪ್ರಮುಖ ನಿರ್ಮಾಪಕ, ವಿತರಕ ಅನಿಲ್ ಟಂಡನ್ (ನಟಿ ರವೀನಾ ಟಂಡನ್ ಪತಿ)ಗೆ ನೀಡಲಾಗಿದೆ. ಅನಿಲ್ ಟಂಡನ್ ದೊಡ್ಡ ಮೊತ್ತಕ್ಕೆ 'ಪುಷ್ಪ' ಸಿನಿಮಾದ ಹಿಂದಿ ಹಕ್ಕು ಖರೀದಿ ಮಾಡಿದ್ದಾರೆ. ಡಿಸೆಂಬರ್ 17 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಮಹಾರಾಷ್ಟ್ರ ಮಾತ್ರವೇ ಅಲ್ಲದೆ ಇತರೆ ಕೆಲವು ಹಿಂದಿ ಭಾಷಿಕ ರಾಜ್ಯಗಳಲ್ಲಿಯೂ ದೊಡ್ಡ ಮಟ್ಟದಲ್ಲಿಯೇ 'ಪುಷ್ಪ' ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಲಿದೆ.

ಡಿಸೆಂಬರ್ 17 ಕ್ಕೆ ಸಿನಿಮಾ ಬಿಡುಗಡೆ
'ಪುಷ್ಪ' ಸಿನಿಮಾವು ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದ ಮುಖ್ಯ ಖಳನಾಯಕನ ಪಾತ್ರದಲ್ಲಿ ಮಲಯಾಳಂನ ಫಹಾದ್ ಫಾಸಿಲ್ ಮಿಂಚಲಿದ್ದಾರೆ. ಜೊತೆಗೆ ಜಗಪತಿ ಬಾಬು, ಹಾಸ್ಯನಟ ಸುನಿಲ್, ಕನ್ನಡದ ಡಾಲಿ ಧನಂಜಯ್, ಪ್ರಕಾಶ್ ರೈ ಸಹ ಇರಲಿದ್ದಾರೆ. ಸಿನಿಮಾಕ್ಕೆ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದು ಈವರೆಗೆ ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಮೂರೂ ಹಾಡುಗಳು ಹಿಟ್ ಆಗಿವೆ. ಸಿನಿಮಾದ ಮತ್ತೊಂದು ವಿಶೇಷತೆಯೆಂದರೆ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿ ಸಮಂತಾ ವಿಶೇಷ ಹಾಡೊಂದರಲ್ಲಿ ನರ್ತಿಸಲಿದ್ದಾರೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 17 ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.


Click it and Unblock the Notifications











