ನಿರೀಕ್ಷೆಗಳ ಮೂಟೆಗೆ ಸೂಜಿ ಚುಚ್ಚಿದ 'ಪುಷ್ಪ' ನಿರ್ಮಾಪಕರು
'ಪುಷ್ಪ' ಭಾರತದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈಗಾಗಲೇ ಹಲವು ಹಾಡುಗಳನ್ನು, ಒಂದು ಟ್ರೈಲರ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ ನಿರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿದೆ.
ಭಾರಿ ಅದ್ಧೂರಿಯಾಗಿ 'ಪುಷ್ಪ' ಸಿನಿಮಾ ತಯಾರಾಗಿದ್ದು, ಸಿನಿಮಾದ ಬಿಡುಗಡೆಯನ್ನು ಸಹ ಅಷ್ಟೆ ಅದ್ಭುತವಾಗಿ ಪ್ಲಾನ್ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಪ್ರೀ ರಿಲೀಸ್ ಇವೆಂಟ್ ಅನ್ನು ಸಹ ಆಯೋಜಿಸಲಾಗಿದೆ.
'ಪುಷ್ಪ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವು ಹೈದರಾಬಾದ್‌ನ ಯೂಸಫ್‌ಘಡ, ಪೊಲೀಸ್ ಗ್ರೌಂಡ್‌ನಲ್ಲಿ ಡಿಸೆಂಬರ್ 12ನೇ ತಾರೀಖು ನಡೆಯಲಿದೆ. ಈ ಪ್ರಿರಿಲೀಸ್ ಕಾರ್ಯಕ್ರಮಕ್ಕೆ ಬಾಲಿವುಡ್‌ನಿಂದಲೂ ದೊಡ್ಡ-ದೊಡ್ಡ ಸ್ಟಾರ್ ನಟರು ಆಗಲಿಸಲಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ಆದರೆ 'ಪುಷ್ಪ' ನಿರ್ಮಾಪಕರು ಬೇರೆಯದ್ದೇ ಕತೆ ಹೇಳಿದ್ದಾರೆ.
'ಪುಷ್ಪ' ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬರಲಿದ್ದಾರೆ ಎನ್ನಲಾಗಿತ್ತು. ಅದೂ ಮಾತ್ರವೇ ಅಲ್ಲದೆ ಚಿರಂಜೀವಿ ಹಾಗೂ ಬಾಲಕೃಷ್ಣ ಬಹಳ ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಒಟ್ಟು ಸೇರಲಿದ್ದಾರೆ. ಇವರ ಜೊತೆಗೆ ಮೆಗಾ ಕುಟುಂಬದ ಇತರ ಹೀರೋಗಳು ಹಾಗೂ ಪ್ರಭಾಸ್ ಸಹ ಆಗಮಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಯಾವುದೇ ಸ್ಟಾರ್ ನಟರು ಭಾಗವಹಿಸುವುದಿಲ್ಲ: ಮೈತ್ರಿ ಮೂವೀಸ್
ಪ್ರೀ ರಿಲೀಸ್ ಇವೆಂಟ್ ಬಗ್ಗೆ ಸುದ್ದಿಗೋಷ್ಠಿ ನಡೆಸಿದ 'ಪುಷ್ಪ' ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವೀಸ್‌ನ ನವೀನ್ ಯರನೇನಿ, ವೈ ರವಿ ಶಂಕರ್, ಮೋಹನ್ ಚರುಕುರಿ, 'ಪುಷ್ಪ' ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿಯೇ ಇರುತ್ತದೆ ಆದರೆ ಅಲ್ಲು ಅರ್ಜುನ್ ಹೊರತುಪಡಿಸಿ ಇನ್ನಾವುದೇ ಸ್ಟಾರ್ ನಟರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲು ಅರ್ಜುನ್ ಒಬ್ಬರೇ ಸಾಕು: ನಿರ್ಮಾಪಕ
''ಅಲ್ಲು ಅರ್ಜುನ್ ಒಬ್ಬರಿಗೇ ತಮ್ಮ ಸಿನಿಮಾವನ್ನು ಜನರಿಗೆ ತಲುಪಿಸುವ ಶಕ್ತಿ, ಸ್ಟಾರ್ ಡಮ್ ಇದೆ. ಹಾಗಿರುವಾಗ ಬೇರೆ ನಟರು ಅವಶ್ಯಕತೆ ಇಲ್ಲ. ಅಲ್ಲದೆ ಬೇರೆ ನಟರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಹಾಗಾಗಿ ನಾವು ಯಾರನ್ನೂ ಸಂಪರ್ಕ ಮಾಡಿಲ್ಲ. ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ 'ಪುಷ್ಪ' ಸಿನಿಮಾಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞರು ಭಾಗವಹಿಸಲಿದ್ದಾರೆ, ಆ ದಿನವನ್ನು ಹಬ್ಬದಂತೆ ಎಲ್ಲರೂ ಆಚರಿಸಲಿದ್ದೇವೆ'' ಎಂದಿದ್ದಾರೆ ನಿರ್ಮಾಪಕರು.

ಬಾಲಯ್ಯ ಬರುವ ನಿರೀಕ್ಷೆ ಇತ್ತು
ಕೆಲವು ದಿನಗಳ ಹಿಂದಷ್ಟೆ ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಅತಿಥಿಯಾಗಿ ಹೋಗಿದ್ದರು. ಹಾಗಾಗಿ ಅಲ್ಲು ಅರ್ಜುನ್ ಸಿನಿಮಾದ ಕಾರ್ಯಕ್ರಮಕ್ಕೆ ಬಾಲಯ್ಯ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಇನ್ನು ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಜೊತೆಗೆ 'ಗಾಢ್ ಫಾದರ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಗಾಗಿ ಅವರು ಬರಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಆದರೆ ಸಲ್ಮಾನ್ ಖಾನ್, ಚಿರಂಜೀವಿ ನಟನೆಯ ಮತ್ತೊಂದು ಸಿನಿಮಾ 'ಆಚಾರ್ಯ'ದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎನ್ನಲಾಗಿದೆ.

ರಕ್ತ ಚಂದನ ಕಳ್ಳ ಸಾಗಣೆ ಕುರಿತ ಕತೆ
'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆ ಬಗ್ಗೆ ನಿರ್ಮಿಸಲಾಗಿರುವ ಸಿನಿಮಾ ಆಗಿದ್ದು, ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರತಿಭಾವಂತ ನಟರ ದಂಡೇ ಇದೆ. ಕನ್ನಡದ ಡಾಲಿ ಧನಂಜಯ್ ಜಾಲಿ ರೆಡ್ಡಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯನಟ ಸುನಿಲ್, ಕಳ್ಳ ಸಾಗಣೆದಾರರ ಬಾಸ್ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದಾರೆ. ಸಿನಿಮಾದ ಐದು ಹಾಡುಗಳು ಯೂಟ್ಯೂಬ್‌ನಲ್ಲಿ ಬಿಡಗುಡೆ ಆಗಿದ್ದು ಎಲ್ಲ ಹಾಡುಗಳು ಹಿಟ್ ಆಗಿವೆ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿ ಸಮಂತಾ ಐಟಂ ಹಾಡಿಗೆ ನರ್ತಿಸಿದ್ದಾರೆ. ಸಿನಿಮಾವು ಇದೇ ಡಿಸೆಂಬರ್ 17 ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











