'ಪುಷ್ಪ' ಸಿನಿಮಾದ ಡಾಲಿ ಧನಂಜಯ್ ಫೈಟ್ ದೃಶ್ಯ ಲೀಕ್
'ಪುಷ್ಪ' ಸಿನಿಮಾಕ್ಕೆ 'ದೃಶ್ಯ ಸೋರಿಕೆ' ಕಾಟ ಮುಂದುವರೆದಿದೆ. ಚಿತ್ರತಂಡ ಎಷ್ಟೇ ಎಚ್ಚರ ವಹಿಸುವ ಪ್ರಯತ್ನ ಪಟ್ಟರೂ ಸಿನಿಮಾದ ದೃಶ್ಯಗಳು ಲೀಕ್ ಆಗುತ್ತಲೇ ಇವೆ.
ಈವರೆಗು ಸುಮಾರು 30 ನಿಮಿಷದ 'ಪುಷ್ಪ' ಸಿನಿಮಾದ ದೃಶ್ಯಗಳು ಲೀಕ್ ಆಗಿವೆ ಎನ್ನಲಾಗುತ್ತಿದೆ. ಚಿತ್ರೀಕರಣದಿಂದ ಈ ಹಿಂದೆ ದೃಶ್ಯಗಳು ಲೀಕ್ ಆಗುತ್ತಿದ್ದವು. ಆದರೆ ಈಗ ಎಡಿಟಿಂಗ್ ಟೇಬಲ್‌ನಿಂದಲೇ ಸಿನಿಮಾದ ದೃಶ್ಯಗಳು ಲೀಕ್ ಆಗುತ್ತಿವೆ. ಇದು ಚಿತ್ರತಂಡ ದೊಡ್ಡ ತಲೆನೋವು ತಂದಿದೆ.
ಇದೀಗ 'ಪುಷ್ಪ' ಸಿನಿಮಾದ ಮತ್ತೊಂದು ಫೈಟ್ ದೃಶ್ಯ ಲೀಕ್ ಆಗಿದ್ದು ಲೀಕ್ ಆಗಿರುವ ಫೈಟ್ ದೃಶ್ಯದಲ್ಲಿ ಕನ್ನಡಿಗ ನಟ ಡಾಲಿ ಧನಂಜಯ್ ಸಹ ಇದ್ದಾರೆ. ಈಗ ಲೀಕ್ ಆಗಿರುವ ದೃಶ್ಯ ಡಾಲಿಯ ಪಾತ್ರದ ಸಣ್ಣ ಪರಿಚಯವನ್ನೂ ಹೇಳುತ್ತಿದೆ.

ಮದುವೆ ಮನೆಯಲ್ಲಿ ಡಾಲಿಯೊಂದಿಗೆ ಪುಷ್ಪ ಕಾದಾಟ
ಇದೀಗ ಲೀಕ್ ಆಗಿರುವ ಚಿತ್ರದಲ್ಲಿ ಅಲ್ಲು ಅರ್ಜುನ್, ಡಾಲಿ ಧನಂಜಯ್ ವಿರುದ್ಧ ಫೈಟ್ ಮಾಡುತ್ತಿದ್ದಾರೆ. ಡಾಲಿ ಅವರನ್ನು ನೆಲಕ್ಕೆ ಕೆಡವಿ ಕಾಲು ತಿರುವುತ್ತಿರುವ ದೃಶ್ಯವಿರುವ ವಿಡಿಯೋ ಲೀಕ್ ಆಗಿದೆ. ಫೈಟ್ ನಡೆಯುತ್ತಿರುವ ಸ್ಥಳ ಯಾವುದೊ ಮದುವೆ ಸಂಭ್ರಮದ ಮನೆ ಇದ್ದಂತಿದೆ. ಹೂವಿನಿಂದ ಅಲಂಕೃತಗೊಂಡಿರುವ ಮನೆಯಲ್ಲಿ ಅಲ್ಲು ಅರ್ಜುನ್, ಧನಂಜಯ್ ಫೈಟ್ ನಡೆಯುತ್ತಿದೆ. ಬೆಂಡಾದ ಮೈಕ್ ಸೆಟ್, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮದುವೆ ಖುರ್ಚಿಗಳು ಕಾಣುತ್ತಿವೆ.

ಸನ್ನಿವೇಶದ ಮಾಹಿತಿ ಹರಿಬಿಡಲಾಗಿದೆ
ಸಿನಿಮಾದಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಮೇಲೆ ಡಾಲಿ ಧನಂಜಯ್ ಕಣ್ಣು ಹಾಕಿದ್ದು, ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ರಶ್ಮಿಕಾ-ಡಾಲಿ ಮದುವೆ ನಡೆಯುವ ಸಂದರ್ಭದಲ್ಲಿ ಅಲ್ಲು ಅರ್ಜುನ್ ಬಂದು ಮದುವೆ ಗಂಡಾದ ಡಾಲಿಗೆ ಚೆನ್ನಾಗಿ ಭಾರಿಸಿ ರಶ್ಮಿಕಾರನ್ನು ಕರೆದೊಯ್ಯುವ ಸನ್ನಿವೇಶ ಸಿನಿಮಾದಲ್ಲಿದೆ ಎಂಬ ಕತೆಯನ್ನು ಲೀಕ್ ಆಗಿರುವ ವಿಡಿಯೋ ಜೊತೆಗೆ ಹರಿಬಿಡಲಾಗುತ್ತಿದೆ. ವಿಡಿಯೋ ಲೀಕ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿಸುವ ಕಾರ್ಯವನ್ನು ಚಿತ್ರತಂಡ ಮಾಡಿದೆ.

18 ಸೆಕೆಂಡ್‌ಗಳ ಫೈಟ್ ವಿಡಿಯೋ ಲೀಕ್ ಆಗಿತ್ತು
ಈ ಹಿಂದೆ 18 ಸೆಕೆಂಡ್‌ನ ಫೈಟ್ ದೃಶ್ಯ ಇದೀಗ ಲೀಕ್ ಆಗಿತ್ತು. ಅಲ್ಲು ಅರ್ಜುನ್ ಕಬ್ಬಿಣದ ಚೇರಿನಲ್ಲಿ ವಿಲನ್‌ಗೆ ಹೊಡೆಯುತ್ತಿರುವ ದೃಶ್ಯ ಇದಾಗಿತ್ತು. ಮಾಸ್ ಲುಕ್‌ನಲ್ಲಿ ಅಲ್ಲು ಅರ್ಜುನ್ ಚೇರ ಅನ್ನು ಕೊರಳಲ್ಲೇ ಹಿಡಿದು ಪಂಚೆ ಎತ್ತಿಕಟ್ಟಿ ವಿಲನ್‌ಗಳನ್ನು ಚೆಂಡಾಡುತ್ತಿರುವ ದೃಶ್ಯವನ್ನು ಆ ಲೀಕ್ಡ್ ವಿಡಿಯೋ ಒಳಗೊಂಡಿತ್ತು. ವಿಡಿಯೋ ಬಿಡುಗಡೆ ಆಗುತ್ತಿದ್ದಂತೆ ದೂರು ನೀಡಿದ್ದ ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯನ್ನೂ ಬಿಡುಗಡೆ ಮಾಡಿತ್ತು, ''''ಮೈತ್ರಿ ಮೂವೀಸ್‌ಗೆ ಸೇರಿದ ಸಿನಿಮಾದ ವಿಡಿಯೋ ಮೆಟಿರಿಯಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಷ್ಪ' ಸಿನಿಮಾದ ವಿಡಿಯೋ ಲೀಕ್ ಆಗಿರುವುದು ಬಹಳ ನಿರಾಶೆ ತಂದಿದೆ. ವಿಡಿಯೋ ಲೀಕ್ ಮಾಡಿರುವ ಘಟನೆಯನ್ನು ನಾವು ಖಂಡಿಸುತ್ತಿದ್ದೇವೆ. ಈ ಕುರಿತು ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಯಾರು ಈ ಕಿಡಿಗೇಡಿತನದ ಕೆಲಸ ಮಾಡಿದ್ದಾರೊ ಅವರು ಭಾರತೀಯ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ'' ಎಂದಿತ್ತು.

ವಿಡಿಯೋ ಹಂಚಿಕೊಂಡಿದ್ದ ಗಣೇಶ್ ಆಚಾರ್ಯ
ಅದಕ್ಕೂ ಹಿಂದೆಯೂ ಒಮ್ಮೆ 'ಪುಷ್ಪ' ಸಿನಿಮಾದ ವಿಡಿಯೋ ಲೀಕ್ ಆಗಿತ್ತು. 'ಪುಷ್ಪ' ಸಿನಿಮಾದ ಹಾಡೊಂದರ ಚಿತ್ರೀಕರಣದ ವಿಡಿಯೋ ಅದಾಗಿತ್ತು, ಶೂಟಿಂಗ್ ನೋಡಲು ಹೋಗಿದ್ದ ಅಭಿಮಾನಿಗಳು ಯಾರೊ ಆ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅಲ್ಲು ಅರ್ಜುನ್, ಸಹ ನಟರೊಟ್ಟಿಗೆ ನರ್ತಿಸುವ ದೃಶ್ಯಗಳಿದ್ದವು. ಜೊತೆಗೆ ಹಾಡು ಸಹ ಅಸ್ಪಷ್ಟವಾಗಿ ಕೇಳುತ್ತಿತ್ತು. ಆವಾಗಲೂ ಚಿತ್ರತಂಡ ಸೈಬರ್ ಪೊಲೀಸರಿಗೆ ದೂರು ನೀಡಿತ್ತು. ಅದಾಗ್ಯೂ 'ಪುಷ್ಪ' ಸಿನಿಮಾದ ವಿಡಿಯೋ ಲೀಕ್‌ಗಳು ನಿಂತಿಲ್ಲ. ಇದರ ಮಧ್ಯೆ, ಸಿನಿಮಾದ 'ದಾಕ್ಕೊ-ದಾಕ್ಕೊ ಮೇಕ' ಹಾಡಿಗೆ ನೃತ್ಯ ಸಂಯೋಜಿಸಿರುವ ಗಣೇಶ್ ಆಚಾರ್ಯ ಸ್ವತಃ ಹಾಡಿನ ಚಿತ್ರೀಕರಣದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ನಂತರ ಅದನ್ನು ಡಿಲೀಟ್ ಮಾಡಿದರು. ಆದರೆ ಆ ವಿಡಿಯೋವನ್ನು ಸಹ ಕೆಲವರು ಸೇವ್ ಮಾಡಿಕೊಂಡು ವೈರಲ್ ಮಾಡಿದರು.


Click it and Unblock the Notifications











