30 ನಿಮಿಷದ ವಿಡಿಯೋ ಲೀಕ್: ಕಂಗಾಲಾದ 'ಪುಷ್ಪ' ಚಿತ್ರತಂಡ
ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಪುಷ್ಪ'ಕ್ಕೆ ಒಂದರ ಹಿಂದೊಂದರಂತೆ ಸಮಸ್ಯೆಗಳು ಕಾಡುತ್ತಲೇ ಇವೆ. ಕೊರೊನಾ, ಡೆಂಗ್ಯೂ ಬಳಿಕ ಈಗ ಸಿನಿಮಾದ ದೃಶ್ಯಗಳು ಸತತವಾಗಿ ಲೀಕ್ ಆಗಿ ಸಿನಿಮಾ ತಂಡಕ್ಕೆ ತಲೆ ನೋವು ತರಿಸುತ್ತಿವೆ.
ಕೆಲವು ದಿನಗಳ ಹಿಂದಷ್ಟೆ 'ಪುಷ್ಪ' ಸಿನಿಮಾದ 18 ಸೆಕೆಂಡ್‌ಗಳ ಫೈಟ್ ದೃಶ್ಯದ ವಿಡಿಯೋ ಒಂದು ಲೀಕ್ ಆಗಿತ್ತು. ಈಗ ಮತ್ತೊಂದು ವಿಡಿಯೋ ಲೀಕ್ ಆಗಿದೆ. 'ಪುಷ್ಪ' ಸಿನಿಮಾದ ಈ ವರೆಗಿನ ಲೀಕ್ ಆಗಿರುವ ದೃಶ್ಯಗಳ ಒಟ್ಟು ಉದ್ದ 30 ನಿಮಿಷ ಎಂದು ಹೇಳಲಾಗುತ್ತಿದೆ. ಹೊಸದಾಗಿ ಲೀಕ್ ಆಗಿರುವ ವಿಡಿಯೋವನ್ನು ಇಂಟರ್ನೆಟ್‌ನಿಂದ ತೆಗಿಸುವ ಕಾರ್ಯವನ್ನು ಚಿತ್ರತಂಡ ಮಾಡುತ್ತಿದೆ.
18 ಸೆಕೆಂಡ್‌ಗಳ ಫೈಟ್ ವಿಡಿಯೋ ಲೀಕ್ ಆದ ಮೊಬೈಲ್‌ನಿಂದಲೇ ಸಿನಿಮಾದ ಪ್ರಮುಖ ದೃಶ್ಯವೊಂದು ಇಡಿಯಾಗಿ ಲೀಕ್ ಆಗಿದೆ. ಇದು ಚಿತ್ರತಂಡಕ್ಕೆ ವಿಶೇಷವಾಗಿ ಅಲ್ಲು ಅರ್ಜುನ್‌ಗೆ ತೀವ್ರ ಸಿಟ್ಟು ತರಿಸಿದೆ. ನಿರ್ಮಾಣ ಸಂಸ್ಥೆಗೆ ಈ ಬಗ್ಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೆಂದು ಅಲ್ಲು ಅರ್ಜುನ್ ಒತ್ತಾಯಿಸಿದ್ದಾರೆ.

ಶಿಸ್ತು ಕ್ರಮಕ್ಕೆ ಮುಂದಾದ ನಿರ್ಮಾಣ ಸಂಸ್ಥೆ
ಅಂತೆಯೇ ಶಿಸ್ತಿನ ಕ್ರಮಕ್ಕೆ ಮುಂದಾಗಿರುವ 'ಪುಷ್ಪ' ಸಿನಿಮಾದ ನಿರ್ಮಾಪಕರು, ಚಿತ್ರತಂಡಕ್ಕೆ ಶಿಸ್ತಿನ ಆದೇಶವನ್ನು ನೀಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ರೂಂಗಳಿಗೆ ಯಾರೂ ಸಹ ಮೊಬೈಲ್ ತರಬಾರದು ಎಂದು ಹೊಸ ಆದೇಶವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ಆದೇಶಿಸಿದೆ. ಅಷ್ಟೇ ಅಲ್ಲದೆ, 'ಪುಷ್ಪ' ಭಾಗ 2 ಚಿತ್ರೀಕರಣವೂ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಆ ಸಿನಿಮಾದ ಸೆಟ್‌ನಲ್ಲಿಯೂ ಮೊಬೈಲ್ ಬ್ಯಾನ್ ಮಾಡುವುದಾಗಿ ಚಿತ್ರ ನಿರ್ಮಾಣ ಸಂಸ್ಥೆ ಹೇಳಿದೆ.

ಎಚ್ಚೆರಿಕೆ ನೀಡಿದ್ದ ಸಿನಿಮಾ ನಿರ್ಮಾಣ ಸಂಸ್ಥೆ
18 ಸೆಕೆಂಡ್‌ಗಳ ಫೈಟ್ ವಿಡಿಯೋ ಲೀಕ್ ಆಗಿದ್ದಾಗಲೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ದೃಶ್ಯ ಲೀಕ್ ಮಾಡಿದವರಿಗೆ ಹಾಗೂ ಅದನ್ನು ಹಂಚಿಕೊಂಡವರಿಗೆ ಎಚ್ಚರಿಕೆ ನೀಡಿತ್ತು. ''ಮೈತ್ರಿ ಮೂವೀಸ್‌ಗೆ ಸೇರಿದ ಸಿನಿಮಾದ ವಿಡಿಯೋ ಮೆಟಿರಿಯಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಷ್ಪ' ಸಿನಿಮಾದ ವಿಡಿಯೋ ಲೀಕ್ ಆಗಿರುವುದು ಬಹಳ ನಿರಾಶೆ ತಂದಿದೆ. ವಿಡಿಯೋ ಲೀಕ್ ಮಾಡಿರುವ ಘಟನೆಯನ್ನು ನಾವು ಖಂಡಿಸುತ್ತಿದ್ದೇವೆ. ಈ ಕುರಿತು ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಯಾರು ಈ ಕಿಡಿಗೇಡಿತನದ ಕೆಲಸ ಮಾಡಿದ್ದಾರೊ ಅವರು ಭಾರತೀಯ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ'' ಎಂದು ಹೇಳಿತ್ತು.

ಈ ಹಿಂದೆಯೂ ವಿಡಿಯೋ ಲೀಕ್ ಆಗಿತ್ತು
ಈ ಹಿಂದೆಯೂ ಒಮ್ಮೆ 'ಪುಷ್ಪ' ಸಿನಿಮಾದ ವಿಡಿಯೋ ಲೀಕ್ ಆಗಿತ್ತು. 'ಪುಷ್ಪ' ಸಿನಿಮಾದ ಹಾಡೊಂದರ ಚಿತ್ರೀಕರಣದ ವಿಡಿಯೋ ಅದಾಗಿತ್ತು, ಶೂಟಿಂಗ್ ನೋಡಲು ಹೋಗಿದ್ದ ಅಭಿಮಾನಿಗಳು ಯಾರೊ ಆ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅಲ್ಲು ಅರ್ಜುನ್, ಸಹ ನಟರೊಟ್ಟಿಗೆ ನರ್ತಿಸುವ ದೃಶ್ಯಗಳಿದ್ದವು. ಜೊತೆಗೆ ಹಾಡು ಸಹ ಅಸ್ಪಷ್ಟವಾಗಿ ಕೇಳುತ್ತಿತ್ತು. ಆವಾಗಲೂ ಚಿತ್ರತಂಡ ಸೈಬರ್ ಪೊಲೀಸರಿಗೆ ದೂರು ನೀಡಿತ್ತು. ಅದಾಗ್ಯೂ 'ಪುಷ್ಪ' ಸಿನಿಮಾದ ವಿಡಿಯೋ ಲೀಕ್‌ಗಳು ನಿಂತಿಲ್ಲ. ಇದರ ಮಧ್ಯೆ, ಸಿನಿಮಾದ 'ದಾಕ್ಕೊ-ದಾಕ್ಕೊ ಮೇಕ' ಹಾಡಿಗೆ ನೃತ್ಯ ಸಂಯೋಜಿಸಿರುವ ಗಣೇಶ್ ಆಚಾರ್ಯ ಸ್ವತಃ ಹಾಡಿನ ಚಿತ್ರೀಕರಣದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ನಂತರ ಅದನ್ನು ಡಿಲೀಟ್ ಮಾಡಿದರು. ಆದರೆ ಆ ವಿಡಿಯೋವನ್ನು ಸಹ ಕೆಲವರು ಸೇವ್ ಮಾಡಿಕೊಂಡು ವೈರಲ್ ಮಾಡಿದರು.

ಸುಕುಮಾರ್ ನಿರ್ದೇಶನ ಮಾಡಿರುವ ಸಿನಿಮಾ
'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕನ್ನಡಿಗ ಡಾಲಿ ಧನಂಜಯ್, ಕಿಶೋರ್ ಸಹ ಮುಖ್ಯ ಪಾತ್ರಗಳಲ್ಲಿದ್ದಾರೆ. ಮುಖ್ಯ ವಿಲನ್ ಆಗಿ ಮಲಯಾಳಂ ಫಹಾದ್ ಫಾಸಿಲ್ ನಟಿಸುತ್ತಿದ್ದು, ಜಗಪತಿ ಬಾಬು ಹಾಗೂ ಕಮಿಡಿಯನ್ ಸುನಿಲ್ ಸಹ ವಿಲನ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗವು ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











