'ಪುಷ್ಪ' ಸಿನಿಮಾದ ಎರಡನೇ ಭಾಗ ಬಿಡುಗಡೆ ಯಾವಾಗ: ಚಿತ್ರೀಕರಣ ಮುಗಿದಿದೆಯೇ?
ಎರಡು ದಿನದ ಹಿಂದೆ ಬಿಡುಗಡೆ ಆಗಿದ್ದ 'ಪುಷ್ಪ' ಸಿನಿಮಾ ಬಹು ದೊಡ್ಡ ಹಿಟ್ ಆಗಿದೆ. ಎರಡೇ ದಿನಕ್ಕೆ ಸಿನಿಮಾವು ಕೋಟ್ಯಂತರ ಹಣವನ್ನು ಗಳಿಸಿದೆ.
ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಇಂಟರ್ವೆಲ್ ನಂತರ ಸಿನಿಮಾ ಸಪ್ಪೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಸಿನಿಮಾದ ಎರಡನೇ ಭಾಗ ಸಹ ನಿರ್ಮಾಣ ಮಾಡುತ್ತಿದ್ದು, ಕತೆಯನ್ನು ಎರಡನೇ ಭಾಗಕ್ಕಾಗಿ ನಿರ್ದೇಶಕರು ಉಳಿಸಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.
'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗುವ ವಿಷಯವನ್ನು ಚಿತ್ರತಂಡವು ಬಹಳ ಮೊದಲೇ ತಿಳಿಸಿತ್ತು. 'ಪುಷ್ಪ' ಸಿನಿಮಾದ ಮೊದಲನೇ ಭಾಗದ ಸಿನಿಮಾಕ್ಕೆ 'ಪುಷ್ಪ' ದಿ ರೈಸ್' ಎಂದು ಹೆಸರಿಡಲಾಗಿದ್ದು, ಎರಡನೇ ಭಾಗದ ಸಿನಿಮಾದ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಆದರೆ ಕೆಲವರು 'ಪುಷ್ಪ; ದಿ ಕಾಂಕರರ್' ಎಂದು ಹೇಳುತ್ತಿದ್ದಾರೆ.

'ಪುಷ್ಪ' ಸಿನಿಮಾದ ಎರಡನೇ ಭಾಗಕ್ಕೆ ಪೀಠಿಕೆಯನ್ನು 'ಪುಷ್ಪ' ಸಿನಿಮಾದ ಮೊದಲ ಭಾಗದ ಕ್ಲೈಮ್ಯಾಕ್ಸ್‌ನಲ್ಲಿಯೇ ನಿರ್ದೇಶಕ ಸುಕುಮಾರ್ ಹಾಕಿದ್ದಾರೆ. 'ಪುಷ್ಪ' ಸಿನಿಮಾದ ಎರಡನೇ ಭಾಗವು ಫಹಾದ್ ಫಾಸಿಲ್ ಪಾತ್ರ ಹಾಗೂ ಪುಷ್ಪನ ನಡುವೆ ನಡೆವ ಸಂಘರ್ಷವನ್ನು ಪ್ರಧಾನವಾಗಿರಿಸಿಕೊಳ್ಳಲಿದೆ.
'ಪುಷ್ಪ' ಸಿನಿಮಾದ ಎರಡನೇ ಭಾಗದ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯವಷ್ಟೆ ಬಾಕಿ ಇದೆ. 'ಪುಷ್ಪ' ಸಿನಿಮಾದ ಮೊದಲ ಭಾಗದ ಬಿಡುಗಡೆ, ಕಲೆಕ್ಷನ್, ಡಿಜಿಟಲ್ ಬಿಡುಗಡೆ ಬಳಿಕ 'ಪುಷ್ಪ' ಸಿನಿಮಾದ ಎರಡನೇ ಭಾಗದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯಲಿದೆ.
'ಪುಷ್ಪ' ಸಿನಿಮಾದ ಎರಡನೇ ಭಾಗದಲ್ಲಿ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿರಲಿದ್ದಾರೆ. ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವೆ ಹಲವು ಹಂತದ ಸಂಘರ್ಷಗಳು ನಡೆಯಲಿವೆ. ಇದರ ಜೊತೆಗೆ ಸುನಿಲ್ ಪಾತ್ರ ಅವರ ಪತ್ನಿ ಪಾತ್ರ ಹಾಗೂ ಡಾಲಿ ಧನಂಜಯ್ ಪಾತ್ರಗಳು ಸಹ ಅಲ್ಲು ಅರ್ಜುನ್ ನಿರ್ವಹಿಸಿರುವ ಪುಷ್ಪ ಪಾತ್ರದ ಮೇಲೆ ಮುಗಿ ಬೀಳಲಿವೆ. ಇವರುಗಳಿಂದ ಪುಷ್ಪ ಹೇಗೆ ಬಚಾವಾಗುತ್ತಾನೆ ಹೇಗೆ ಬೆಳೆಯುತ್ತಾನೆ, ಸಿಂಡಿಕೇಟ್ ಹಾಗೂ ತನ್ನ ರಕ್ತ ಚಂದನ ವ್ಯವಹಾರವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದೇ 'ಪುಷ್ಪ' ಸಿನಿಮಾದ ಎರಡನೇ ಭಾಗದ ಕತೆ.
'ಪುಷ್ಪ' ಸಿನಿಮಾದ ಮೊದಲ ಭಾಗವು ಡಿಸೆಂಬರ್ 17 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರೆಯೆಗಳು ವ್ಯಕ್ತವಾಗಿವೆ. ಸಿನಿಮಾದ ಎರಡನೇ ಅರ್ಧ ತುಸು ಹಿಂಜಿದಂತಿದೆ ಎಂದೂ, ಫಹಾದ್ ಫಾಸಿಲ್‌ಗೆ ಹೆಚ್ಚಿನ ಸ್ಕೋಪ್ ಇಲ್ಲವೆಂದು, ಎರಡನೇ ಅರ್ಧದಲ್ಲಿ ಕತೆ ಬಿಗುವಾಗಿ ಇಲ್ಲವೆಂದು ಹಾಗೂ ಹಿನ್ನೆಲೆ ಸಂಗೀತ ಸಾಧಾರಣವಾಗಿದೆಯೆಂದು ಹೇಳಲಾಗುತ್ತಿದೆ. 'ಪುಷ್ಪ' ಸಿನಿಮಾದ ಎರಡನೇ ಭಾಗದಲ್ಲಿ ಈ ಎಲ್ಲ ಕೊರತೆಗಳನ್ನು ಸುಕುಮಾರ್ ನಿವಾರಣೆ ಮಾಡುತ್ತಾರಾ ನೋಡಬೇಕಿದೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ.


Click it and Unblock the Notifications











