ಈ ದಿನದಂದು ಬಹುನಿರೀಕ್ಷಿತ ಪುಷ್ಪ 2 ಚಿತ್ರೀಕರಣ ಆರಂಭವಾಗುವ ಸಾಧ್ಯತೆ
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಿ ಮೊದಲಿಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ನಂತರ ಹಿಟ್ ಲಿಸ್ಟ್ ಸೇರಿದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ದಿ ರೈಸ್ ಚಿತ್ರದ ಮುಂದುವರೆದ ಭಾಗ 'ಪುಷ್ಪ ದ ರೂಲ್' ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲ ಸಿನಿಪ್ರೇಕ್ಷಕರಲ್ಲಿ ಮೂಡಿದೆ.
ಆಗಸ್ಟ್ 22ರಂದು ಮುಹೂರ್ತ ಪೂಜೆಯನ್ನು ನಡೆಸಿದ್ದ ಪುಷ್ಪ ಚಿತ್ರತಂಡ ದಸರಾ ಹಬ್ಬದಿಂದ ಚಿತ್ರೀಕರಣ ಆರಂಭಿಸಲಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಅಕ್ಟೋಬರ್ 1ರಿಂದ ಪುಷ್ಪ 2 ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ.
ಹೌದು, ಹೈದರಾಬಾದ್‌ನ ಗಾಂಧಿ ಪೇಟ್ ಪ್ರದೇಶದಲ್ಲಿ ಅಲ್ಲು ಅರವಿಂದ್ ಅವರು ನೂತನವಾಗಿ ಸ್ಟುಡಿಯೋಸ್ ನಿರ್ಮಿಸಿದ್ದು, ಈ ಸ್ಟುಡಿಯೋಗೆ ಅಲ್ಲು ಸ್ಟುಡಿಯೋಸ್ ಎಂದು ನಾಮಕರಣ ಮಾಡಿದ್ದಾರೆ. ಈ ಸ್ಟುಡಿಯೋ ದಸರಾ ಪ್ರಯುಕ್ತ ಅಕ್ಟೋಬರ್ 1ರಂದು ಆರಂಭಗೊಳ್ಳಲಿದ್ದು, ಸ್ಟುಡಿಯೋದಲ್ಲಿ ಚಿತ್ರೀಕರಣವಾಗುವ ಮೊದಲ ಸಿನಿಮಾವೇ ಪುಷ್ಪ ದಿ ರೂಲ್ ಎನ್ನಲಾಗುತ್ತಿದೆ.

ಇನ್ನು ಪುಷ್ಪ ದಿ ರೈಸ್ ಚಿತ್ರದ ಮೂಲಕ ಹುಟ್ಟುಹಾಕಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ನಿರ್ದೇಶಕ ಬಿ ಸುಕುಮಾರ್ ನಿರ್ದೇಶಿಸಲಿರುವ ಎರಡನೇ ಭಾಗದ ಮೇಲೂ ಸಹ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಪುಷ್ಪಾ ದಿ ರೈಸ್ ಚಿತ್ರದ ಅಂತ್ಯದಲ್ಲಿ ನಾಯಕ ಅಲ್ಲು ಅರ್ಜುನ್ ಹಾಗೂ ಖಳ ನಟ ಫಹಾದ್ ಫಾಸಿಲ್ ನಡುವಿನ ದ್ವೇಷ ದೊಡ್ಡ ಮಟ್ಟಕ್ಕೆ ತಿರುಗಿದ್ದು, ಚಿತ್ರದ ಎರಡನೇ ಭಾಗದಲ್ಲಿ ಇಬ್ಬರ ನಡುವಿನ ಹಗೆತನ ಇನ್ನೆಷ್ಟು ಮಟ್ಟಕ್ಕೆ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮೊದಲ ಭಾಗಕ್ಕೆ ಭರ್ಜರಿ ಹಿನ್ನೆಲೆ ಸಂಗೀತ ಹಾಗೂ ಹಿಟ್ ಹಾಡುಗಳನ್ನು ಸಂಯೋಜಿಸಿದ್ದ ದೇವಿ ಶ್ರೀ ಪ್ರಸಾದ್ ಈ ಚಿತ್ರದ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಸೃಷ್ಟಿಸಲಿದ್ದಾರಾ ಎಂದು ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











