Pushpa 2 Box Office Day 25 ;ಬಾಕ್ಸಾಫೀಸ್‌ನಲ್ಲಿ ತಗ್ಗದ ಪುಷ್ಪರಾಜ್ ಅಬ್ಬರ, ನಿನ್ನೆ ಗಳಿಸಿದ್ದೆಷ್ಟು ಗೊತ್ತಾ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ನೂರು ದಿನ ಪ್ರದರ್ಶನ ಕಂಡರೆ ಆ ಚಿತ್ರ ಗೆದ್ದಂತೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸ್ಟಾರ್‌ಗಳ ಚಿತ್ರಗಳು ಎರಡೇ ವಾರಕ್ಕೆ ಹಾಕಿದ ಬಂಡವಾಳವನ್ನು ನಿರ್ಮಾಪಕರಿಗೆ ಮರಳಿ ತಂದು ಕೊಡುತ್ತವೆ. ನಾಲ್ಕನೇ ವಾರಕ್ಕೆ ಓಟಿಟಿಯಲ್ಲಿ ಕೂಡ ಬಿಡುಗಡೆಯಾಗುತ್ತವೆ.
ಇಂತಹ ಕಾಲದಲ್ಲಿ ಪುಷ್ಪ 2 ಇನ್ನು ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. 25 ದಿನಗಳನ್ನು ಪೂರೈಸಿದೆ. ಬೇಬಿ ಜಾನ್ ಸೇರಿ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಚಿತ್ರಗಳು ಬಂದರೂ ಕೂಡ ಇನ್ನೂ ಬಾಕ್ಸಾಫೀಸ್‌ನ ಪುಷ್ಪ ಕೊಳ್ಳೆ ಹೊಡೆಯುತ್ತಿದೆ.

ಹೌದು, Sacnilk ವೆಬ್ ಸೈಟ್ ಪ್ರಕಾರ ಪುಷ್ಪ 2 ಇಲ್ಲಿಯವರೆಗೆ ಭಾರತದಲ್ಲಿ ₹1360 ಕೋಟಿಯನ್ನು ಗಳಿಸಿದೆ. ಇನ್ನು ಹೊರದೇಶದಲ್ಲಿ ₹257.2 ಕೋಟಿಯನ್ನು ಪುಷ್ಪ 2 ಗಳಿಸಿದೆ. ಚಿತ್ರದ ಒಟ್ಟಾರೆ ಗಳಿಕೆ ₹1618 ಕೋಟಿಯಾಗಿದೆ. ಆದರೆ ಪುಷ್ಪ 2 ಚಿತ್ರತಂಡವೇ ಅಧಿಕೃತವಾಗಿ ಹೇಳಿರುವಂತೆ ಚಿತ್ರದ ಗಳಿಕೆ ₹1700 ಕೋಟಿಯ ಗಡಿಯನ್ನು ದಾಟಿದೆ. ಈ ಮೂಲಕ ಬಾಹುಬಲಿ 2 ಮತ್ತು ದಂಗಲ್ ಚಿತ್ರದ ನಂತರ ₹1700 ಕೋಟಿಯನ್ನು ತಲುಪಿದ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪುಷ್ಪ 2 ಪಾತ್ರವಾಗಿದೆ.
ಇನ್ನು ಅಚ್ಚರಿ ಎಂದರೆ ಚಿತ್ರ ತೆರೆಗೆ ಬಂದು 25 ದಿನವಾದರೂ ಕೂಡ ಉತ್ತರ ಭಾರತದಲ್ಲಿ ಪುಷ್ಪರಾಜ್ ಹವಾ ಕಡಿಮೆಯಾಗಿಲ್ಲ. ಬದಲಿಗೆ ಆಂಧ್ರಪ್ರದೇಶದಲ್ಲಿ ತೆಲುಗು ಅವತರಣಿಕೆಗೆ ಇರದ ಡಿಮ್ಯಾಂಡ್ ಉತ್ತರ ಭಾರತದಲ್ಲಿ ಪುಷ್ಪಗೆ ಇದೆ. ಹಿಂದಿಯಲ್ಲಿ ಈ ಚಿತ್ರವನ್ನು ನೋಡಲು ಇನ್ನೂ ನೂಕು ನುಗ್ಗಲಿನ ವಾತಾವರಣ ಕಂಡು ಬರುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೊನ್ನೆ ಶನಿವಾರದಂದು ಹಿಂದಿ ಮಾರ್ಕೆಟ್‌ನಲ್ಲಿ ಪುಷ್ಪ 2 ₹10 ಕೋಟಿಯನ್ನು ಗಳಿಸಿದೆ. ಭಾನುವಾರ ₹12 ಕೋಟಿಯನ್ನು ಕೊಳ್ಳೆ ಹೊಡೆದಿದೆ. ವಿಶೇಷ ಅಂದರೆ ಕಳೆದ ವಾರ ಬಿಡುಗಡೆಯಾದ ವರುಣ್ ಧವನ್ ಅಭಿನಯದ ಬೇಬಿ ಜಾನ್ ಚಿತ್ರ ಕೂಡ ಇಷ್ಟು ಹಣವನ್ನು ಬಾಕ್ಸಾಫೀಸ್‌ನಲ್ಲಿ ಗಳಿಸಿಲ್ಲ.
ಅಂದ್ಹಾಗೇ ₹1700 ಕೋಟಿಯನ್ನು ಗಳಿಸಿರುವ ಪುಷ್ಪ-02 ಚಿತ್ರ ಇನ್ನು ₹60 ಕೋಟಿಯನ್ನು ಗಳಿಸಿದರೆ ಬಾಹುಬಲಿ 2 ಚಿತ್ರವನ್ನು ಹಿಂದಿಕ್ಕಲಿದೆ. ಹೊಸ ದಾಖಲೆಯೊಂದನ್ನು ನಿರ್ಮಾಣ ಮಾಡಲಿದೆ. ದಂಗಲ್ ನಂತರ ಅತೀ ಹೆಚ್ಚು ಹಣ ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇನ್ನು ಮೊದಲ ಸ್ಥಾನದಲ್ಲಿರುವ ದಂಗಲ್ ಬಾಕ್ಸಾಫೀಸ್‌ನಲ್ಲಿ ಒಟ್ಟಾರೆ ₹2,059 ಕೋಟಿಯನ್ನು ಗಳಿಸಿದೆ. ಆ ಪೈಕಿ ಚೀನಾದಿಂದನೇ ₹1300 ಕೋಟಿಗೂ ಅಧಿಕ ಹಣ ಹರಿದು ಬಂದಿದೆಯಾದರೂ ಸದ್ಯ ಈ ದಾಖಲೆಯನ್ನು ಪುಷ್ಪ 2 ಮುರಿಯುವುದು ಅಸಾಧ್ಯವೆನ್ನುವ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ಈ ಜನವರಿ ಹತ್ತರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೇರೆ ಬೇರೆ ಭಾಷೆಗಳಲ್ಲಿ ಅನೇಕ ಚಿತ್ರಗಳು ಬರುತ್ತಿವೆ. ಆ ಪೈಕಿ ರಾಮ್ ಚರಣ್ ತೇಜಾ ಅಭಿನಯದ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಕೂಡ ಒಂದು.
ಇನ್ನು ಗೇಮ್ ಚೇಂಜರ್‌ಗೆ ಈಗಾಗಲೇ ಬೇಡಿಕೆ ಹೆಚ್ಚಾಗಿದೆ. ಚಿತ್ರದ ಮೇಲಿನ ನಿರೀಕ್ಷೆ ಕೂಡ ಹೆಚ್ಚಿದೆ. ಈ ಕಾರಣಕ್ಕೆ ಗೇಮ್ ಚೇಂಜರ್‌ಗೆ ಪುಷ್ಪರಾಜ್ ದಾರಿ ಬಿಟ್ಟು ಕೊಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ಪುಷ್ಪರಾಜ್ ಕ್ರೇಜ್ ಕಡಿಮೆಯಾಗಿದೆ. ಈ ಕಾರಣಕ್ಕೆ ದಂಗಲ್ ದಾಖಲೆ ಸೇಫ್ ಆಗಿರಲಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಪುಷ್ಪ2 ಚಿತ್ರದ ಗಳಿಕೆ ಎಷ್ಟಾಗಬಹುದು ಎನ್ನುವ ಕುತೂಹಲ ಕೂಡ ಅನೇಕರನ್ನು ಈಗ ಕಾಡುತ್ತಿದೆ.


Click it and Unblock the Notifications











