ರಾಧೆ-ಶ್ಯಾಂ ಟೀಸರ್: ರಗಡ್ ಲುಕ್ ನಿಂದ ಲವರ್ ಬಾಯ್ ಲುಕ್ ಕಡೆಗೆ ಪ್ರಭಾಸ್
ಪ್ರಭಾಸ್ ಮೊದಲಿನಿಂದಲೂ ಆಕ್ಷನ್ ಹೀರೋ ಆಗಿ ಖ್ಯಾತರು. ಅವರ ಸಿನಿಮಾಗಳಲ್ಲಿ ಮೂಲ ಧಾತುವೇ ಹೊಡೆದಾಟ, ರಗಡ್ ಡೈಲಾಗ್‌ಗಳು.
ಬಾಹುಬಲಿ, ಸಾಹೋ ಅಂಥಹಾ ಸಿನಿಮಾಗಳಂತೂ ಪ್ರಭಾಸ್ ಗೆ ಭರ್ಜರಿ ಆಕ್ಷನ್ ಇಮೇಜ್ ತಂದುಕೊಟ್ಟಿದ್ದವು. ಆದರೆ ಪ್ರಭಾಸ್, ತಮ್ಮ ಆಕ್ಷನ್ ಹೀರೋ ಇಮೇಜಿನಿಂದ ತುಸು ಹೊರಗೆ ಇಣುಕುವ ಪ್ರಯತ್ನವನ್ನು ರಾಧೆ-ಶ್ಯಾಂ ಸಿನಿಮಾದಲ್ಲಿ ಮಾಡಿದ್ದಾರೆ.
ರಾಧೆ-ಶ್ಯಾಂ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಟೀಸರ್ ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಇದೊಂದು ಸುಂದರ ಪ್ರೇಮ ಕತೆ ಎಂಬುದು.

ಸರಳ-ಸುಂದರ ಟೀಸರ್
ಟೀಸರ್ ಸರಳವಾಗಿ ಆದರೆ ಸುಂದರವಾಗಿದೆ. ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಹಚ್ಚ ಹಸಿರಿನ ನಡುವೆ ವಿಂಟೇಜ್ ಮಾದರಿ ರೈಲೊಂದರ ಬಾಗಿಲಿನಿಂದ ಹೊರಕ್ಕೆ ಮುಖ ಒಡ್ಡಿ ತಂಗಾಳಿಯನ್ನು ಆಸ್ವಾದಿಸುತ್ತಿದ್ದಾರೆ ನಾಯಕಿ ಪೂಜಾ ಹೆಗ್ಡೆ, ನಾಯಕಿಯ ಅಂದವನ್ನು ಆಸ್ವಾದಿಸುತ್ತಿದ್ದಾರೆ ಪ್ರಭಾಸ್.

ಪುನರ್ಜನ್ಮದ ಕತೆ ಹೊಂದಿರಲಿದೆಯೇ ಸಿನಿಮಾ?
ಟೀಸರ್ ಪ್ರಾರಂಭದಲ್ಲಿ ವಿಂಟೇಜ್ ರೈಲಿನ ಒಳಗೆ ರಾಜ-ರಾಣಿಯ ಪುತ್ಥಳಿಗಳನ್ನು ತೋರಿಸಲಾಗಿದೆ. ಸಿನಿಮಾವು ಪುನರ್ಜನ್ಮದ ಕತೆಯನ್ನೂ ಹೊಂದಿರಬಹುದೇ ಎಂಬ ಅನುಮಾನವನ್ನು ಸಹ ಟೀಸರ್ ಹುಟ್ಟಿಸಿದೆ. ಟೀಸರ್‌ನ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ.

ರಾಧಾಕೃಷ್ಣ ಕುಮಾರ್ ನಿರ್ದೇಶನ
ರಾಧೆ-ಶ್ಯಾಂ ಸಿನಿಮಾವನ್ನು ರಾಧಾಕೃಷ್ಣ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾವನ್ನು ಯುವಿ ಕ್ರಿಯೇಶನ್ಸ್ ವತಿಯಿಂದ ನಿರ್ಮಿಸಲಾಗಿದೆ. ಭೂಷಣ್ ಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ನೀಡಿದ್ದಾರೆ.
Recommended Video

ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಣ
ರಾಧೆ-ಶ್ಯಾಂ ಸಿನಿಮಾವನ್ನು ವಿದೇಶಗಳ ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಪ್ರೇಮಕಥಾ ಚಿತ್ರ ಇದಾಗಿರಲಿದ್ದು, ಪ್ರಭಾಸ್ ಅಭಿಮಾನಿಗಳಿಗಾಗಿ ಆಕ್ಷನ್ ಸಹ ಇರಲಿದೆ. ರಾಧೆ-ಶ್ಯಾಂ ನಂತರ ಆದಿಪುರುಷ್ ಹಾಗೂ ದೀಪಿಕಾ ಪಡುಕೋಣೆ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್.


Click it and Unblock the Notifications











