2022ರಲ್ಲಿ ಅತಿದೊಡ್ಡ ನಷ್ಟ ಕಂಡ 5 ಚಿತ್ರಗಳು; 125 ಕೋಟಿ ಲಾಸ್ ಮಾಡಿತ್ತು ಸ್ಟಾರ್ ನಟನ ದೊಡ್ಡ ಚಿತ್ರ!
2022 ಸಿನಿಮಾ ಕ್ಷೇತ್ರಕ್ಕೆ ಕಮ್ ಬ್ಯಾಕ್ ವರ್ಷ, ಗೋಲ್ಡನ್ ಇಯರ್ ಎಂದೆಲ್ಲಾ ಕರೆಯಲಾಗುತ್ತಿದೆ. ಹೌದು, ಕಳೆದೆರಡು ವರ್ಷಗಳಲ್ಲಿ ಕೊರೊನಾ ಲಾಕ್ ಡೌನ್‌ಗೆನಲುಗಿ ತೀವ್ರ ಹಿನ್ನಡೆ ಅನುಭವಿಸಿದ್ದ ಸಿನಿಮಾ ಇಂಡಸ್ಟ್ರಿಗಳು 2022ರಲ್ಲಿ ಯಾವುದೇ ಲಾಕ್ ಡೌನ್ ಭಯವಿಲ್ಲದೇ ಚಿತ್ರಗಳನ್ನು ಬಿಡುಗಡೆಗೊಳಿಸಿದವು. ಈ ಪೈಕಿ ಬಹುತೇಕ ಚಿತ್ರಗಳು ಹಿಟ್ ಆದವು. 2022ರಲ್ಲಿ ಭಾರತದ ಒಟ್ಟು ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದವು. ಈ ಪೈಕಿ ದಕ್ಷಿಣ ಭಾರತದ ಚಿತ್ರಗಳೇ ಹೆಚ್ಚು.
ಇನ್ನು ಈ ವರ್ಷದಲ್ಲಿ ಬಾಲಿವುಡ್ ಚಿತ್ರರಂಗವನ್ನು ದಕ್ಷಿಣ ಭಾರತದ ಚಿತ್ರರಂಗಗಳು ಮೀರಿಸಿ ಮುನ್ನುಗಿದವು. 1250 ಕೋಟಿ ಕಲೆಕ್ಷನ್ ಮಾಡಿದ ಕೆಜಿಎಫ್ ಚಾಪ್ಟರ್ ವರ್ಷದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡರೆ, 1200 ಕೋಟಿ ಬಾಚಿದ ಆರ್ ಆರ್ ಆರ್ ವರ್ಷದಲ್ಲಿ ಅತಿಹೆಚ್ಚು ಗಳಿಸಿದ ಎರಡನೇ ಚಿತ್ರ ಎನಿಸಿಕೊಂಡಿತು. ಇನ್ನು ಆರ್ ಆರ್ ಆರ್ ಮಾತ್ರವಲ್ಲದೇ ತೆಲುಗಿನ ಹಲವಾರು ಚಿತ್ರಗಳು ಈ ವರ್ಷ ಒಳ್ಳೆಯ ಕಲೆಕ್ಷನ್ ಮಾಡಿ ಅಬ್ಬರಿಸಿದವು.
ಸ್ಟಾರ್ ನಟ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ, ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಗೆದ್ದವು. ಇವುಗಳ ಜತೆಗೆ ಕಾರ್ತಿಕೇಯ 2, ಸೀತಾ ರಾಮಮ್ ರೀತಿಯ ಚಿತ್ರಗಳೂ ಸಹ ನೂರು ಕೋಟಿ ಕ್ಲಬ್ ಸೇರಿದವು. ಇನ್ನುಳಿದಂತೆ ಒಕೆ ಒಕ ಜೀವಿತಂ, ಮೇಜರ್, ಹಿಟ್ 2, ಬಿಂಬಿಸಾರ, ಮಸೂದ ಹಾಗೂ ಧಮಾಕಾ ರೀತಿಯ ಚಿತ್ರಗಳೂ ಸಹ ಗೆದ್ದು ಒಳ್ಳೆಯ ಲಾಭ ಗಳಿಸಿದವು. ಹೀಗೆ 2022ರಲ್ಲಿ ತೆಲುಗಿನ ಹಲವಾರು ಚಿತ್ರಗಳು ಲಾಭ ಗಳಿಸಿದ್ದರೆ, ಇನ್ನೂ ಹಲವು ಚಿತ್ರಗಳು ದೊಡ್ಡ ನಷ್ಟ ಕಂಡು ಮುಖಭಂಗಕ್ಕೊಳಗಾಗಿವೆ. ಹಾಗಾದರೆ 2022ರಲ್ಲಿ ಅತಿಹೆಚ್ಚು ನಷ್ಟ ಅನುಭವಿಸಿದ 5 ತೆಲುಗು ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ರಾಧೆ ಶ್ಯಾಮ್
ಸುಮಾರು 300 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಚಿತ್ರ ರಾಧೆ ಶ್ಯಾಮ್ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು. ಚಿತ್ರ ನೋಡಿದ ಪ್ರೇಕ್ಷಕರು ಅಷ್ಟಕ್ಕಷ್ಟೇ ಎಂದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರಮಂದಿರಗಳತ್ತ ಬರಲಿಲ್ಲ. ಪರಿಣಾಮ ಚಿತ್ರ ಹೀನಾಯ ನಷ್ಟ ಕಂಡಿತು. ಸಾಹೋ ಚಿತ್ರವನ್ನು ರಕ್ಷಿಸಿದ್ದ ಪ್ರಭಾಸ್ ಸ್ಟಾರ್‌ಡಂ ಈ ಚಿತ್ರವನ್ನು ರಕ್ಷಿಸಲು ಆಗಲಿಲ್ಲ. ನಿರ್ಮಾಪಕರು ಸೇಫ್ ಆಗಲು 210 ಕೋಟಿ ಗಳಿಸಬೇಕಿದ್ದ ರಾಧೆ ಶ್ಯಾಮ್ 84.15 ಕೋಟಿ ಶೇರ್ ಕೋಟಿ ಶೇರ್ ಕಲೆಕ್ಷನ್ ಮಾಡಿತು. ಈ ಮೂಲಕ ಚಿತ್ರ 125.85 ಕೋಟಿ ನಷ್ಟ ಅನುಭವಿಸಿತು.

2. ಆಚಾರ್ಯ
2022ರಲ್ಲಿ ಮಕಾಡೆ ಮಲಗಿದ ಸ್ಟಾರ್ ನಟರ ಚಿತ್ರಗಳಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ಆಚಾರ್ಯ ಕೂಡ ಒಂದು. ಬೃಹತ್ ನಿರೀಕ್ಷೆ ಹುಟ್ಟುಹಾಕಿದ್ದ ಈ ಸಿನಿಮಾ ಸೋತಿತ್ತು. ತಂದೆ ಮಗನ ಸ್ಟಾರ್‌ಡಂ ಕೂಡ ಚಿತ್ರದ ಕೈ ಹಿಡಿಯಲಿಲ್ಲ. ಲಾಭ ಗಳಿಸಲು 140 ಕೋಟಿ ಸಂಪಾದಿಸಿಲೇಬೇಕಿದ್ದ ಈ ಚಿತ್ರ 45.20 ಕೋಟಿ ಶೇರ್ ಕಲೆಕ್ಷನ್ ಮಾಡಿತು. ಪರಿಣಾಮ 94.80 ಕೋಟಿ ನಷ್ಟವನ್ನು ಅನುಭವಿಸಿತು.

3.ಲೈಗರ್
ಬಿಡುಗಡೆಗೂ ಮೊದಲೇ ನಮ್ಮ ಚಿತ್ರ ಮತ್ತೊಂದು ಹಂತದಲ್ಲಿ ಇರುತ್ತೆ, ಇಡೀ ಇಂಡಿಯಾನ ಅಲ್ಲಾಡಿಸಿಬಿಡುತ್ತೆ ಎಂದು ಚಿತ್ರಮಂದಿರದ ಅಂಗಳಕ್ಕೆ ಬಂದ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಶನ್‌ನ ಲೈಗರ್ ಚಿತ್ರವನ್ನು ಸಿನಿ ಪ್ರೇಕ್ಷಕರು ತಳ್ಳಿ ಹಾಕಿದರು. ಅತಿ ಕಳಪೆ ವಿಮರ್ಶೆ ಪಡೆದುಕೊಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸೇಫ್ ಆಗಲು 90 ಕೋಟಿ ಬ್ರೇಕ್ ಈವೆನ್ ಕಲೆಕ್ಷನ್ ಮಾಡಬೇಕಿದ್ದ ಈ ಚಿತ್ರ 27.65 ಕೋಟಿ ಗಳಿಸಿತು. ಪರಿಣಾಮವಾಗಿ 62.35 ಕೋಟಿ ನಷ್ಟ ಅನುಭವಿಸಿತು.

4. ಗಾಡ್‌ಫಾದರ್
ಈ ಪಟ್ಟಿಯಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಮತ್ತೊಂದು ಚಿತ್ರ ಗಾಡ್‌ಫಾದರ್ ಕೂಡ ಸೇರಿಕೊಂಡಿದೆ. ನೂರು ಕೋಟಿ ಕ್ಲಬ್ ಸೇರಿದರೂ ಸಹ ಚಿತ್ರ ಲಾಭ ತಂದುಕೊಡುವಲ್ಲಿ ವಿಫಲವಾಗಿದೆ. ಮಲಯಾಳಂನ ರಿಮೇಕ್ ಚಿತ್ರವಾಗಿದ್ದ ಗಾಡ್‌ಫಾದರ್ 92 ಕೋಟಿ ಬ್ರೇಕ್ ಈವೆನ್ ಕಲೆಕ್ಷನ್ ಮಾಡಿದ್ದರೆ ಸೇಫ್ ಆಗುತ್ತಿತ್ತು. ಆದರೆ ಚಿತ್ರ ಕೇವಲ 54.65 ಕೋಟಿ ಶೇರ್ ಕಲೆಕ್ಷನ್ ಮಾಡಿ 37.35 ಕೋಟಿ ನಷ್ಟ ಕಂಡಿತು.

5. ದ ವಾರಿಯರ್
ಇನ್ನು ರಾಮ್ ಪೋತಿನೇನಿ ಹಾಗೂ ಕೃತಿ ಶೆಟ್ಟಿ ನಟನೆಯ ದ ವಾರಿಯರ್ ಕೂಡ ಕಳೆದ ವರ್ಷ ಮುಗ್ಗರಿಸಿದ ಚಿತ್ರಗಳಲ್ಲಿ ಒಂದು. 45 ಕೋಟಿ ಗಳಿಸಿದರೆ ಸೇಫ್ ಆಗಬಹುದಾಗಿದ್ದ ಈ ಚಿತ್ರ 20.45 ಶೇರ್ ಕಲೆಕ್ಷನ್ ಮಾಡಿತು. ಹೀಗಾಗಿ 24.55 ಕೋಟಿ ನಷ್ಟವನ್ನು ಕಂಡಿತು.


Click it and Unblock the Notifications











