SSMB29: ಮಹೇಶ್ ಬಾಬು- ಮೌಳಿ ಸಿನಿಮಾ ಕಥೆ ರಿವೀಲ್!; ಅಭಿಮಾನಿಗಳಿಗೆ ನಿರಾಸೆ
ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸಬೇಕಿರುವ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'RRR' ಸಿನಿಮಾ ಬಂದೋಗಿ 2 ವರ್ಷ ಕಳೆದರೂ ಹೊಸ ಸಿನಿಮಾ ಅಪ್‌ಡೇಟ್ ಕೊಡದೇ ರಾಜಮೌಳಿ ಸತಾಯಿಸುತ್ತಿದ್ದಾರೆ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ.
ಈ ವರ್ಷ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರುತ್ತದೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಆಗಲಿಲ್ಲ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಮೌಳಿ ಅಂಡ್ ಟೀಮ್ ಬ್ಯುಸಿಯಾಗಿದೆ. ಮತ್ತೊಂದು ಕಡೆ ಮಹೇಶ್ ಬಾಬು ಪಾತ್ರಕ್ಕಾಗಿ ಭರ್ಜರಿ ಕರಸತ್ತು ನಡೆಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣಕ್ಕಾಗಿ ಸೆಟ್ ಹಾಕುವ ಕೆಲಸಗಳು ಆರಂಭವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಬಹಳ ಹಿಂದೆಯೇ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಜಕ್ಕಣ್ಣ ಸಿನಿಮಾ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ತಡವಾಗಿತ್ತು. ಕೊನೆಗೂ ಇದೀಗ ಆ ಪ್ರಯತ್ನ ನಡೀತಿದೆ. ಮಹೇಶ್ ಬಾಬು ಕೂಡ ಬೇರೆ ಸಿನಿಮಾಗಳನ್ನು ಪಕ್ಕಕ್ಕಿಟ್ಟು ರಾಜಮೌಳಿ ನಿರ್ದೇಶನದಲ್ಲಿ ನಟಿಸಲು ಕಾಯುವಂತಾಗಿದೆ. ಇನ್ನು ಹೆಸರಿಡದ ಚಿತ್ರವನ್ನು ಸದ್ಯಕ್ಕೆ SSMB29 ಎನ್ನಲಾಗ್ತಿದೆ. ಇದು ಮಹೇಶ್ ಬಾಬು ನಟನೆಯ 29 ಸಿನಿಮಾ.
'RRR' ಬಳಿಕ ರಾಜಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಲಿವುಡ್ ಸ್ಟುಡಿಯೋ ಜೊತೆ ಕೈ ಜೋಡಿಸಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಕಟ್ಟಿಕೊಡುವ ಲೆಕ್ಕಾಚಾರದಲ್ಲಿದ್ದಾರೆ. ದೇಶ ವಿದೇಶಗಳಲ್ಲಿ ಸಿನಿಮಾ ಕಥೆ ಸಾಗಲಿದೆ. ನೂರಾರು ಕೋಟಿ ಬಜೆಟ್‌ನಲ್ಲಿ ಸಿನಿಮಾ ಕಟ್ಟಿಕೊಡುವ ಲೆಕ್ಕಾಚಾರ ನಡೀತಿದೆ. ಸಿನಿಮಾ ಯಾವ ಶುರುವಾಗುತ್ತದೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

ದಸರಾ ಹಬ್ಬದ ಸಂಭ್ರಮದಲ್ಲಿ SSMB29 ಸಿನಿಮಾ ಲಾಂಚ್ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾಹಿತಿ ನೀಡುತ್ತಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು ಸಿನಿಮಾ ಕಥೆ ಏನು? ಎನ್ನುವ ಬಗ್ಗೆಯೂ ಭಾರೀ ಚರ್ಚೆ ಶುರುವಾಗಿದೆ.
ಇದೊಂದು ಪೀರಿಯಡ್ ಡ್ರಾಮಾ ಸಿನಿಮಾ ಆಗಿರಲಿದ್ದು 18 ನೇ ಶತಮಾನದಲ್ಲಿ ಕಥೆ ನಡೆಯುತ್ತದೆ ಎನ್ನಲಾಗ್ತಿದೆ. ಚಿತ್ರದ ಬಹುತೇಕ ಕಥೆ ಕಾಡಿನಲ್ಲೇ ನಡೆಯುತ್ತಿದ್ದು, ಕಾನನದಲ್ಲಿ ಒಂದು ರೋಚಕ ಸಾಹಸಗಾಥೆ ಚಿತ್ರದಲ್ಲಿರುತ್ತೆ. ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಉಲ್ಲೇಖಗಳು ಕೂಡ ಚಿತ್ರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. 'ಇಂಡಿಯಾನ ಜೋನ್ಸ್' ಶೈಲಿಯ ಸಿನಿಮಾ ಇದಾಗಿರಲಿದೆ. ಸದ್ಯ ಪಾತ್ರಗಳ ಲುಕ್ಸ್ ಫೈನಲ್ ಮಾಡುವ ಕೆಲಸದಲ್ಲಿ ಜಕ್ಕಣ್ಣ ಬ್ಯುಸಿಯಾಗಿದ್ದಾರೆ.
ದಸರಾಗೆ SSMB29 ಸಿನಿಮಾ ಸೆಟ್ಟೇರಿದರೂ ಚಿತ್ರೀಕರಣ ಮುಂದಿವ ವರ್ಷ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ. 2027ರಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂದು ಕೇಳಿಬರುತ್ತಿರುವ ಮಾತುಗಳ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇನ್ನು 3 ವರ್ಷ ಕಾಯಬೇಕಾ? ಎಂದು ಹುಬ್ಬೇರಿಸುತ್ತಿದ್ದಾರೆ.
ರಾಜಮೌಳಿ ದೊಡ್ಡದಾಗಿ ಪ್ಲ್ಯಾನ್ ಮಾಡಿ ಸಿನಿಮಾ ಕಟ್ಟಿಕೊಡುತ್ತಾರೆ. ಅವರ ವಿಷನ್, ಮೇಕಿಂಗ್ ಸ್ಟೈಲ್, ನಿರೂಪಣೆ ಮಾಡುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಆದರೆ ಬಹಳ ನಿಧಾನವಾಗಿ ಸಿನಿಮಾ ಮಾಡ್ತಾರೆ. ಪ್ರತಿ ಚಿತ್ರಕ್ಕೂ ಎರಡ್ಮೂರು ವರ್ಷ ವ್ಯಯಿಸುತ್ತಾರೆ. ಅದರಲ್ಲೂ SSMB29 ಸಿನಿಮಾ ಆರಂಭಿಸಲು 3 ವರ್ಷ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಯಾವಾಗ ಸಿನಿಮಾ ತೆರೆಗೆ ಬರುತ್ತೋ ಎಂದು ತಲೆ ಕೆಡಿಸಿಕೊಳ್ಳುವಂತಾಗಿದೆ.
ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಡಾ.ಕೆ.ಎಲ್ ನಾರಾಯಣ ಚಿತ್ರಕ್ಕೆ ಹಣ ಹೂಡಲಿದ್ದಾರೆ. ವಿಜಯೇಂದ್ರ ಪ್ರಸಾದ್ ಕಥೆ ಚಿತ್ರಕ್ಕೆ ಇರಲಿದೆ. ಇನ್ನುಳಿದಂತೆ ಪಿ. ಎಸ್ ವಿನೋದ್ ಛಾಯಾಗ್ರಹಣ, ಎಂ. ಎಂ ಕೀರವಾಣಿ ಸಂಗೀತ ಈ ಚಿತ್ರಕ್ಕೆ ಇರುತ್ತದೆ ಎನ್ನುವ ಚರ್ಚೆ ನಡೀತಿದೆ. ವರ್ಕ್‌ಶಾಪ್ ನಡೆಸಿ ಕಲಾವಿದರಿಗೆ ತರಬೇತಿ ನೀಡಿ ಬಳಿಕ ಚಿತ್ರೀಕರಣ ಆರಂಭಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











