ರಾಜಮೌಳಿ ನೇತೃತ್ವದ ನಿಯೋಗದಿಂದ ಸಚಿವರ ಭೇಟಿ
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ, ಬಿಗ್ ಬಜೆಟ್ ಸಿನಿಮಾ 'ಆರ್‌ಆರ್‌ಆರ್' ಬಿಡುಗಡೆಗೆ ಒಂದು ತಿಂಗಳಷ್ಟೆ ಬಾಕಿ ಇದೆ. ಸಿನಿಮಾದ ಆಫ್‌ಲೈನ್ ಪ್ರಚಾರ ಕಾರ್ಯ ಇನ್ನೂ ಆರಂಭವಾಗಿಲ್ಲ. ಆದರೆ ತಮ್ಮ ಸಿನಿಮಾದ ಪ್ರಚಾರ ಕಾರ್ಯ ಬದಿಗೊತ್ತಿ ಬರೆಯದ್ದೇ ಮುಖ್ಯವಾದ ಕಾರ್ಯಕ್ಕಿಳಿದಿದ್ದಾರೆ ರಾಜಮೌಳಿ.
ತೆಲುಗು ಸಿನಿಮಾದ ಟಾಪ್ ನಿರ್ದೇಶಕರ ನಿಯೋಗವೊಂದನ್ನು ರಚಿಸಿ ಅದರ ನೇತೃತ್ವ ವಹಿಸಿದ್ದ ರಾಜಮೌಳಿ ನಿಯೋಗವನ್ನು ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಅವರನ್ನು ಭೇಟಿಯಾಗಿದ್ದಾರೆ.
ಇದೀಗ ದೇಶದೆಲ್ಲೆಡೆ ಕೊರೊನಾ ಮೂರನೇ ಅಲೆಯ ಆತಂಕ ಹರಡುತ್ತಿದೆ. ಓಮಿಕ್ರಾನ್ ತಳಿಯು ಈಗಾಗಲೇ ಭಾರತ ಪ್ರವೇಶಿಸಿದೆ. ಹಾಗಾಗಿ ಉದ್ಯಮಿಗಳು ಅದರಲ್ಲಿಯೂ ಸಿನಿಮಾ ಮಂದಿ ತೀವ್ರ ಆತಂಕಿತರಾಗಿದ್ದಾರೆ. ಮತ್ತೆ ಚಿತ್ರಮಂದಿರ ಬಂದ್ ಆದರೆ ಅವರೆಲ್ಲ ದೊಡ್ಡ ಸಮಸ್ಯೆ ಎದುರಿಸಲಿದ್ದಾರೆ. ಹಾಗಾಗಿ ಅದೇ ವಿಷಯವಾಗಿ ಚರ್ಚೆ ನಡೆಸಲು ರಾಜಮೌಳಿ ಇಂದು ನಿಯೋಗದೊಂದಿಗೆ ಸಚಿವರನ್ನು ಭೇಟಿಯಾಗಿದ್ದರು.

ಚಿತ್ರಮಂದಿರವನ್ನು ಬಂದ್ ಮಾಡಿದರೆ ಅಥವಾ 50% ಆಕ್ಯುಪೇಷನ್ ನಿಯಮ ಹೇರಿದರೆ ಬಿಡುಗಡೆ ಆಗಲಿರುವ ದೊಡ್ಡ ಸಿನಿಮಾಗಳಿಗೆ ತೀವ್ರ ಪೆಟ್ಟಾಗಲಿದೆ. ಹಾಗಾಗಿ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಪಡೆಯಲು ರಾಜಮೌಳಿ ನಿಯೋಗವನ್ನು ಕರೆದೊಯ್ದಿದ್ದರು.
ಸಭೆಯ ಬಳಿಕ ಮಾತನಾಡಿರುವ ಸಚಿವ ತಲಸಾನಿ ಶ್ರೀನಿವಾಸ ಯಾದವ್, ''ಚಿತ್ರಮಂದಿರಗಳನ್ನು ಬಂದ್ ಮಾಡುತ್ತೇವೆ ಅಥವಾ 50% ಆಕ್ಯುಪೆನ್ಸಿ ನಿಯಮ ಹೇರುತ್ತೇವೆ ಎನ್ನುವುದು ಸುಳ್ಳು. ಪ್ರೇಕ್ಷಕರು ಈ ಮೊದಲಿನಂತೆಯೇ ಸಿನಿಮಾಗಳನ್ನು ವೀಕ್ಷಿಸಬಹುದು'' ಎಂದಿದ್ದಾರೆ.
''ಹೊಸ ಕೊರೊನಾ ತಳಿಯನ್ನು ಎದುರಿಸಲು ಸರ್ಕಾರವು ಸಜ್ಜಾಗಿದೆ. ಪ್ರಜೆಗಳು ನಿಶ್ಚಿಂತೆಯಿಂದ ಇರಬಹುದು. ಆದರೆ ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಸಿನಿಮಾ ನೋಡಬೇಕು'' ಎಂದಿದ್ದಾರೆ.

ರಾಜಮೌಳಿ ಜೊತೆಗೆ ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್, ನಿರ್ಮಾಪಕ ದಿಲ್ ರಾಜು, ಸುನಿಲ್ ನಾರಂಗ್, ಡಿವಿವಿ ದಯಾನಂದ್, ಸೂರ್ಯದೇವರ ನಾಗವಂಸಿ ಇನ್ನೂ ಕೆಲವರು ಸಚಿವರೊಂದಿಗೆ ಸಭೆ ನಡೆಸಿದರು.
ತೆಲುಗು ಚಿತ್ರರಂಗ ಈಗಾಗಲೇ ತೀವ್ರ ಒತ್ತಡದಲ್ಲಿದೆ. ಚಿತ್ರಮಂದಿರಗಳ ಟಿಕೆಟ್ ದರ ಏರಿಕೆ ವಿಷಯ ರಾಜಕೀಯ ತಿರುವು ಪಡೆದುಕೊಂಡಿದೆ. ತೆಲಂಗಾಣ ಹೈಕೋರ್ಟ್ ಆದೇಶದಂತೆ ತೆಲಂಗಾಣ ರಾಜ್ಯದಲ್ಲಿ ಟಿಕೆಟ್ ದರಗಳನ್ನು 50 ರುಪಾಯಿ ಏರಿಸಲು ಅವಕಾಶ ಸಿಕ್ಕಿದೆಯಾದರೂ ಆಂಧ್ರಪ್ರದೇಶದಲ್ಲಿ ಟಿಕೆಟ್ ಏರಿಕೆಗೆ ಅವಕಾಶ ದೊರೆತಿಲ್ಲ ಹಾಗಾಗಿ ನಿರ್ಮಾಪಕರು ಆತಂಕಕ್ಕೆ ಈಡಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹಲವು ಸ್ಟಾರ್ ನಟರ ಭಾರಿ ಬಜೆಟ್ ಸಿನಿಮಾಗಳು ತೆರೆಗೆ ಬರಲು ತಯಾರಾಗಿ ನಿಂತಿವೆ. ಜೂ ಎನ್‌ಟಿಆರ್, ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿ, ರಾಜಮೌಳಿ ನಿರ್ದೇಶಿಸಿರುವ 'ಆರ್‌ಆರ್‌ಆರ್', ಚಿರಂಜೀವಿ, ರಾಮ್ ಚರಣ್ ತೇಜ ನಟಿಸಿರುವ 'ಆಚಾರ್ಯ', ಪವನ್ ಕಲ್ಯಾಣ್ ನಟಿಸಿರುವ 'ಭೀಮ್ಲ ನಾಯಕ್', ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್', ಅಲ್ಲು ಅರ್ಜುನ್ ನಟನೆಯ 'ಪುಷ್ಪ', ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ದಿನಾಂಕಗಳನ್ನು ಸಹ ಘೋಷಿಸಿಕೊಂಡಿವೆ. ಆದರೆ ಈಗ ಹಠಾತ್ತನೆ ಸರ್ಕಾರ ಚಿತ್ರಮಂದಿರಗಳನ್ನು ಬಂದ್ ಮಾಡಿದರೆ ನಿರ್ಮಾಪಕರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ.


Click it and Unblock the Notifications











