120 ಕೋಟಿ ರೂ. ಬಜೆಟ್‌ನಲ್ಲಿ 'ಬಾಹುಬಲಿ'- 3 ಸಿದ್ಧ; ಬ್ರೇಕಿಂಗ್ ನ್ಯೂಸ್ ಕೊಟ್ಟ ರಾಜಮೌಳಿ!
ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ನಟನೆಯ 'ಬಾಹುಬಲಿ' ಸಿನಿಮಾವನ್ನು ಸಿನಿರಸಿಕರು ಮರೆಯೋಕೆ ಸಾಧ್ಯವಿಲ್ಲ. ದಶಕದ ಹಿಂದೆ ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬಂದಿತ್ತು. ಚಿತ್ರದ ಮತ್ತೊಂದು ಭಾಗ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ರಾಜಮೌಳಿ ಮಾತನಾಡಿದ್ದಾರೆ.
'ಬಾಹುಬಲಿ' ಸರಣಿ ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಿ 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಈ ವಾರ ಬಿಡುಗಡೆ ಮಾಡ್ತಿದ್ದಾರೆ. ಎರಡೂ ಸಿನಿಮಾಗಳನ್ನು ಒಂದಾಗಿಸಿ 3 ಗಂಟೆ 40 ನಿಮಿಷಕ್ಕೆ ಇಳಿಸಿದ್ದಾರೆ. ಈ ಚಿತ್ರದ ಜೊತೆಗೆ ಪಾರ್ಟ್- 3 ಬಗ್ಗೆ ಮಾಹಿತಿ ಸಿಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಪ್ರಭಾಸ್, ರಾಜಮೌಳಿ ಎಲ್ಲರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ 'ಬಾಹುಬಲಿ'- 3 ಕಷ್ಟ ಕಷ್ಟ ಎನ್ನುವಂತಾಗಿದೆ.

ಶುಕ್ರವಾರ ತೆರೆಮೇಲೆ 'ಬಾಹುಬಲಿ' ಕಥೆಯ ಮುಂದುವರೆದ ಭಾಗದ ಟೀಸರ್ ಬಿಡುಗಡೆ ಮಾಡ್ತೀವಿ ಎಂದು ಜಕ್ಕಣ್ಣ ಹೇಳಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. 'ಬಾಹುಬಲಿ' ಪ್ರಪಂಚದ ಕಥೆಯನ್ನು ಮುಂದುವರೆಸಿ ಸಿನಿಮಾ ಮಾಡಿರುವುದು ನಿಜ. ಆದರೆ ಅದು 3ಡಿ ಆನಿಮೇಷನ್ ಸಿನಿಮಾ. ಬಾಹುಬಲಿ ಕಥೆಯನ್ನು ಆನಿಮೇಷನ್ ರೂಪದಲ್ಲಿ ಮುಂದುವರೆಸುವುದಾಗಿ ಬಹಳ ಹಿಂದೆಯೇ ಜಕ್ಕಣ್ಣ ಹೇಳಿದ್ದಾರೆ. ಇತ್ತೀಚೆಗೆ 'ಬಾಹುಬಲಿ: ದಿ ಕ್ರೌನ್ ಆಫ್ ಬ್ಲಡ್' 2ಡಿ ಆನಿಮೇಷನ್ ಸೀರಿಸ್ ಸಹ ಬಂದಿತ್ತು.
ಸದ್ಯ 'ಬಾಹುಬಲಿ: ದಿ ಎಟರ್ನಲ್ ವಾರ್' ಹೆಸರಿನಲ್ಲಿ ಆನಿಮೇಷನ್ ಸಿನಿಮಾ ನಿರ್ಮಾಣವಾಗಿದೆ. 120 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಸಿದ್ಧವಾಗಿದ್ದು ಅದರ ಟೀಸರ್ ಶುಕ್ರವಾರ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತೇವೆ ಎಂದು ಜಕ್ಕಣ್ಣ ಹೇಳಿದ್ದಾರೆ. 'ಬಾಹುಬಲಿ ದಿ ಅಲ್ಟಿಮೇಟ್' ಟೈಟಲ್‌ನಲ್ಲಿ ಮುಂದೊಂದು ದಿನ ಪಾರ್ಟ್- 3 ಕೂಡ ಮಾಡುವ ಸಾಧ್ಯತೆಯಿದೆ ಎಂದು ಮೌಳಿ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
'ಬಾಹುಬಲಿ' ಕಥೆಯಲ್ಲಿ ಎಲ್ಲಾ ಪಾತ್ರಗಳಿಗೂ ಮಹತ್ವ ಇದೆ. ಪ್ರತಿ ಪಾತ್ರವನ್ನು ವಿಸ್ತರಿಸುತ್ತಾ ಹೋದರೆ ಸಾಕಷ್ಟು ಕಥೆಗಳನ್ನು ಹೇಳಬಹುದು. ಅದೇ ರೀತಿ ಮುಂದಿನ ದಿನಗಳಲ್ಲಿ ಅಂತಹ ಆನಿಮೇಷನ್ ಸಿನಿಮಾ ಮಾಡಲು ಜಕ್ಕಣ್ಣ ತೀರ್ಮಾನಿಸಿದ್ದಾರೆ. 'ಮಹಾವತಾರ್ ನರಸಿಂಹ' ಸಿನಿಮಾ ಗೆಲುವಿನ ಬಳಿಕ ಭಾರತದಲ್ಲಿ ಆನಿಮೇಷನ್ ಸಿನಿಮಾಗಳ ಬಗ್ಗೆ ಕ್ರೇಜ್ ಶುರುವಾಗಿದೆ. 120 ಕೋಟಿ ಬಜೆಟ್‌ನಲ್ಲಿ 'ಬಾಹುಬಲಿ ದಿ ಎಟರ್ನಲ್ ವಾರ್' ಸಿನಿಮಾ ಮಾಡಿರುವುದು ನಿರೀಕ್ಷೆ ಮೂಡಿಸಿದೆ.
ಸಂದರ್ಶನದ ನಡುವೆ ಪ್ರಭಾಸ್ ಹಾಗೂ ರಾಣಾಗೆ ಲ್ಯಾಪ್‌ಟಾಪ್‌ನಲ್ಲಿ ರಾಜಮೌಳಿ ಚಿತ್ರದ ಟೀಸರ್ ತೋರಿಸಿದ್ದಾರೆ. ಇಬ್ಬರೂ ನೋಡಿ ಥ್ರಿಲ್ಲಾಗಿದ್ದಾರೆ. ತೆರೆಮೇಲೆ ಸಿನಿಮಾ ಇನ್ನು ಅದ್ಭುತ ಅನುಭವ ನೀಡುತ್ತದೆ ಎಂದು ಜಕ್ಕಣ್ಣ ಹೇಳಿದ್ದಾರೆ. ಬಾಹುಬಲಿ ಕಥೆಯನ್ನು ಮುಂದುವರಿಸಿರುವ ರೀತಿಯೇ ಬಹಳ ರೋಚಕವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಪ್ರೇಕ್ಷಕರು ಖಂಡಿತ ಇದನ್ನು ಎಂಜಾಯ್ ಮಾಡ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಮಹೇಶ್ ಬಾಬು ನಟನೆಯ ಚಿತ್ರಕ್ಕೆ ರಾಜಮೌಳಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಮತ್ತೊಂದು ಕಡೆ 'ದಿ ರಾಜಾಸಾಬ್', 'ಫೌಜಿ' ಹಾಗೂ 'ಸ್ಪಿರಿಟ್' ಚಿತ್ರಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಮುಂದೆ 'ಸಲಾರ್- 2' ಚಿತ್ರದಲ್ಲಿ ಕೂಡ ನಟಿಸಬೇಕಿದೆ. ಇದೆಲ್ಲದರ ನಡುವೆ ಸದ್ಯಕ್ಕೆ 'ಬಾಹುಬಲಿ- 3' ಸಿನಿಮಾ ಸಾಧ್ಯವಿಲ್ಲ ಎನ್ನಲಾಗ್ತಿದೆ.


Click it and Unblock the Notifications











