'RRR- 2' ಚಿತ್ರಕ್ಕೆ ನನ್ನ ಮಗ ರಾಜಮೌಳಿ ಆಕ್ಷನ್ ಕಟ್ ಹೇಳೋದು ಡೌಟ್": ವಿಜಯೇಂದ್ರ ಪ್ರಸಾದ್ ಶಾಕಿಂಗ್ ಹೇಳಿಕೆ
ರಾಜಮೌಳಿ ಮುಂದಿನ ಸಿನಿಮಾಗಳ ಬಗ್ಗೆ ತಂದೆ ವಿಜಯೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಖ್ಯಾತ ಸಿನಿಮಾ ಕಥೆಗಾರ ಮಗನ ಮುಂದಿನ ಸಿನಿಮಾಗಳ ಲೈನಪ್ ವಿವರಿಸಿದ್ದಾರೆ. 'RRR'-2 ಚಿತ್ರಕ್ಕೆ ಜಕ್ಕಣ್ಣ ಆಕ್ಷನ್ ಕಟ್ ಹೇಳಲ್ಲ ಎಂದುಬಿಟ್ಟಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದರು. ವಿಜಯೇಂದ್ರ ಪ್ರಸಾದ್ ಈ ರೀತಿ ಹೇಳುವುದಕ್ಕೂ ಕಾರಣವಿದೆ.
'RRR' ಸೂಪರ್ ಹಿಟ್ ನಂತರ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ರಾಜಮೌಳಿ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಕಥೆ, ಚಿತ್ರಕಥೆ ಸಿದ್ಧವಾಗಿದೆ. ಇತ್ತೀಚೆಗೆ ಫ್ಯಾಮಿಲಿ ಸಮೇತ ತೂತುಕುಡಿಗೆ ಪ್ರವಾಸ ಹೋಗಿದ್ದ ಜಕ್ಕಣ್ಣ ವಾಪಸ್ ಆಗಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ದೇಶ ವಿದೇಶದ ಕಲಾವಿದರು, ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

ಹಾಲಿವುಡ್ ಇಂಡಿಯಾನಾ ಜೋನ್ಸ್ ಸರಣಿ ರೀತಿಯಲ್ಲಿ ಮುಂದಿನ ಸಿನಿಮಾ ಕಟ್ಟಿಕೊಡಲು ರಾಜಮೌಳಿ ಮುಂದಾಗಿದ್ದಾರೆ. ಆಫ್ರಿಕಾದ ಕಾಡುಗಳಲ್ಲಿ ನಡೆಯವ ಆಕ್ಷನ್ ಅಡ್ವೆಂಚರಸ್ ಸಿನಿಮಾ ಇದು ಎನ್ನಲಾಗ್ತಿದೆ. ರಾಮಾಯಣದ ಹನುಮಂತನ ಪಾತ್ರದಿಂದ ಪ್ರೇರಣೆಗೊಂದು ಚಿತ್ರದಲ್ಲಿ ನಾಯಕನ ಪಾತ್ರ ರೂಪಿಸಲಾಗುತ್ತಿದೆ ಎನ್ನವ ಮಾತುಗಳು ಕೇಳಿಬರ್ತಿದೆ. ಇನ್ನು ಕಥೆಯನ್ನು ಮುಂದುವರೆಸಲು ಅವಕಾಶ ಇರುವಂತೆ ವಿಜಯೇಂದ್ರ ಪ್ರಸಾದ್ ಒಪನ್ ಕ್ಲೈಮ್ಯಾಕ್ಸ್ ಡಿಸೈನ್ ಮಾಡಿದ್ದಾರೆ.
ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ನಟನೆಯ 'RRR' ಚಿತ್ರ ಕಳೆದ ವರ್ಷ ರಿಲೀಸ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಹಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇನ್ನು ಈ ಸಿನಿಮಾ ಸೀಕ್ವೆಲ್ ಮಾಡುವ ಬಗ್ಗೆ ಈಗಾಗಲೇ ರಾಜಮೌಳಿ, ವಿಜಯೇಂದ್ರ ಪ್ರಸಾದ್ ಮಾತನಾಡುತ್ತಾ ಬರ್ತಿದ್ದಾರೆ. ಇನ್ನು ಮತ್ತೊಮ್ಮೆ 'RRR'-2 ಬಗ್ಗೆ ವಿಜಯೇಂದ್ರ ಪ್ರಸಾದ್ ಮಾತನಾಡಿ ಕುತೂಹಲ ಹುಟ್ಟು ಹಾಕಿದ್ದಾರೆ. ಸೀಕ್ವೆಲ್‌ಗೆ ರಾಜಮೌಳಿ ಆಕ್ಷನ್ ಕಟ್ ಹೇಳುವುದು ಅನುಮಾನ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ವಿಜಯೇಂದ್ರ ಪ್ರಸಾದ್ ಮಾತನಾಡಿ ಮಹೇಶ್ ಬಾಬು ಸಿನಿಮಾ ನಂತರ ರಾಜಮೌಳಿ 'ಮಹಾಭಾರತ' ಚಿತ್ರಕ್ಕೆ ಕೈ ಹಾಕಲಿದ್ದಾರೆ. "ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ ನಟನೆಯ 'RRR' ಚಿತ್ರದ ಸೀಕ್ವೆಲ್‌ಗೆ ನಾವು ಪ್ಲ್ಯಾನ್ ಮಾಡುತ್ತಿದ್ದೇವೆ. ಆ ಸಿನಿಮಾದಲ್ಲೂ ಇವರಿಬ್ಬರು ನಟಿಸುತ್ತಾರೆ. ಹಾಲಿವುಡ್ ಲೆವೆಲ್‌ನಲ್ಲಿ ಆ ಸಿನಿಮಾ ತಯಾರಾಗಲಿದೆ. ಹಾಲಿವುಡ್ ನಿರ್ಮಾಪಕರೊಬ್ಬರ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ. ಅಂದಹಾಗೆ ಈ ಚಿತ್ರವನ್ನು ಎಸ್. ಎಸ್ ರಾಜಮೌಳಿ ಅಥವಾ ಅವರ ಮೇಲ್ವಿಚಾರಣೆಯಲ್ಲಿ ಬೇರೆ ಯಾರಾದರೂ ನಿರ್ದೇಶನ ಮಾಡುತ್ತಾರೆ" ಎಂದಿದ್ದಾರೆ.
"ಮಹೇಶ್ ಬಾಬು ಸಿನಿಮಾ ನಂತರ ಮೌಳಿ ತಮ್ಮ ಕನಸಿನ ಮಹಾಭಾರತ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ" ಎಂದು ವಿಜಯೇಂದ್ರ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಮಹಾಭಾರತ ಸಿನಿಮಾ ಮುಗಿಯೋಕೆ ಎಷ್ಟು ವರ್ಷ ಬೇಕು ಎನ್ನುವ ಅಂದಾಜಿಲ್ಲ. ಹಾಗಾಗಿ 'RRR'-2 ಚಿತ್ರಕ್ಕೆ ರಾಜಮೌಳಿ ಆಕ್ಷನ್ ಕಟ್ ಹೇಳಲ್ಲ ಎಂದು ಪರೋಕ್ಷವಾಗಿ ವಿಜಯೇಂದ್ರ ಪ್ರಸಾದ್ ಸುಳಿವು ಕೊಟ್ಟಿದ್ದಾರೆ. 'RRR' ಸೀಕ್ವೆಲ್ ಬರುತ್ತೆ ಎಂದಾಗಲೇ ಅಭಿಮಾನಿಗಳು ಥ್ರಿಲ್ಲಾಗಿದ್ದರು. ರಾಜಮೌಳಿ ನಿರ್ದೇಶನ ಮಾಡಲ್ಲ ಅನ್ನೋದು ಕೆಲವರಿಗೆ ಬೇಸರ ತಂದಿದೆ.
ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದ 'RRR' ಸಿನಿಮಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ಗೆದ್ದಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸೀಕ್ವೆಲ್ ಬಗ್ಗೆ ಮೊದಲು ಚಿತ್ರತಂಡ ಆಲೋಚಿಸಿರಲಿಲ್ಲ. ಆದರೆ ಸಿನಿಮಾ ಸಕ್ಸಸ್ ನಂತರ ಒಂದು ಸಣ್ಣ ಎಳೆ ಹೊಳೆಯಿತು. ಅದು ಬಹಳ ಚೆನ್ನಾಗಿದೆ. ಅದನ್ನು ಕಂಡಿತ ಸೀಕ್ವೆಲ್ ಮಾಡಬಹುದು ಎಂದು ಅನ್ನಿಸಿ ಆ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ.


Click it and Unblock the Notifications











