RRR: ರಾಮ್ ಚರಣ್ ಜೊತೆ ಆ ದೃಶ್ಯ ಚಿತ್ರೀಕರಿಸುವಾಗ ಭಯವಾಗಿತ್ತು: ರಾಜಮೌಳಿ
RRR ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾದ ದೃಶ್ಯ ವೈಭವದ ಬಗ್ಗೆ, ರಾಜಮೌಳಿ ಸೃಷ್ಟಿಸಿರುವ ಅದ್ಭುತ ಸನ್ನಿವೇಶಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಪ್ರೇಕ್ಷಕ ವಾವ್ ಎನ್ನುವಂಥಹಾ ಹಲವು ದೃಶ್ಯಗಳು ಸಿನಿಮಾದಲ್ಲಿವೆ. ಅದರಲ್ಲಿಯೂ ಸಿನಿಮಾದ ಇಬ್ಬರು ನಾಯಕರ ಎಂಟ್ರಿ ದೃಶ್ಯಗಳಂತೂ ಅತ್ಯದ್ಭುತವಾಗಿದೆ. ಇಂಟ್ರೊಡಕ್ಷನ್ ಸೀನ್ ನಲ್ಲಿ ಜೂ ಎನ್‌ಟಿಆರ್ ಹುಲಿಯೊಂದಿಗೆ ಸೆಣೆಸಿದರೆ, ರಾಮ್ ಚರಣ್ ಸಾವಿರಾರು ಜನರೊಂದಿಗೆ ಫೈಟ್ ಮಾಡುತ್ತಾರೆ.
ಕಮರ್ಶಿಯಲ್ ಸಿನಿಮಾದ 'ಮಾಸ್ಟರ್' ಎನಿಸಿಕೊಂಡಿರುವ ರಾಜಮೌಳಿಗೆ ಈ ಸಿನಿಮಾದ ಚಿತ್ರೀಕರಣ ಬಹಳ ಫನ್ ಆಗಿತ್ತಂತೆ ಆದರೆ ರಾಮ್ ಚರಣ್ ಅವರ ಎಂಟ್ರಿ ದೃಶ್ಯದ ಚಿತ್ರೀಕರಣ ಮಾಡಬೇಕಾದರೆ ಬಹಳ ಭಯವಾಗಿತ್ತಂತೆ. ಆ ದೃಶ್ಯ ತೆಗೆಯುವುದು ಸುಲಭವಾಗಿರಲಿಲ್ಲ ಎಂಬುದನ್ನು ಸಹ ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ರಾಮ್ ಚರಣ್ ಇಂಟ್ರೊಡಕ್ಷನ್ ಸೀನ್ ಹೀಗಿದೆ
ರಾಮ್ ಚರಣ್ ಇಂಟ್ರೊಡಕ್ಷನ್ ಸೀನ್ ಹೀಗಿದೆ, ಲಕ್ಷಾಂತರ ಮಂದಿ ಒಂದು ಪೊಲೀಸ್ ಸ್ಟೇಶನ್ ಸುತ್ತ ಸೇರಿ ಪ್ರತಿಭಟಿಸುತ್ತಿರುತ್ತಾರೆ. ಅದರಲ್ಲಿ ಒಬ್ಬಾತ ಹೊಡೆದ ಕಲ್ಲು ಬ್ರಿಟೀಷ್ ಅಧಿಕಾರಿಯೊಬ್ಬನ ಫೋಟೊಕ್ಕೆ ತಗುಲಿ ಅದು ಕೆಳಗೆ ಬಿದ್ದು ಒಡೆಯುತ್ತದೆ. ಆಗ ಬ್ರಿಟೀಷ್ ಅಧಿಕಾರಿಯೊಬ್ಬ ಆ ಕಲ್ಲು ಹೊಡೆದವನನ್ನು ಬಂಧಿಸಿ ಎನ್ನುತ್ತಾನೆ. ಲಕ್ಷಾಂತರ ಜನ ತಮ್ಮತ್ತ ನುಗ್ಗಲು ಯತ್ನಿಸುತ್ತಿರುವ ಹೊತ್ತಿನಲ್ಲಿ ಆ ಒಬ್ಬನನ್ನು ಬಂಧಿಸಲು ರಾಮ್ ಚರಣ್ ಆ ದೊಡ್ಡ ಜನಸಾಗರದ ಒಳಕ್ಕೆ ಧುಮುಕುತ್ತಾರೆ. ಸಾವಿರಾರು ಜನರೊಂದಿಗೆ ಗುದ್ದಾಡಿ ಕೊನೆಗೂ ಆ ಒಬ್ಬನನ್ನು ಎಳೆದು ತರುತ್ತಾರೆ. ಈ ದೃಶ್ಯ ಬಲು ರೋಚಕವಾಗಿದೆ.

ರಾಜಮೌಳಿಗೆ ಬಹಳ ಭಯವಾಗಿತ್ತಂತೆ!
ಈ ದೃಶ್ಯದ ಚಿತ್ರೀಕರಣ ಮಾಡಬೇಕಾದರೆ ರಾಜಮೌಳಿಗೆ ಬಹಳ ಭಯವಾಗಿತ್ತಂತೆ. ದೃಶ್ಯ ತೆಗೆಯಲು ಮೂರು ತಿಂಗಳ ಕಾಲ ತಯಾರಿ ಮಾಡಿಕೊಳ್ಳಲಾಯಿತಂತೆ. ಕೊನೆಗೆ ಆ ಒಂದು ದೃಶ್ಯಕ್ಕೆ ಸತತ ಹದಿನೈದು ದಿನ ಚಿತ್ರೀಕರಣ ಮಾಡಬೇಕಾಯಿತಂತೆ. ರಾಮ್ ಚರಣ್ ಸುತ್ತ ಸುಮಾರು 300-400 ಮಂದಿ ತರಬೇತಿ ಪಡೆದ ಫೈಟರ್ಸ್‌ಗಳು, ಅವರ ಸುತ್ತ ತರಬೇತಿ ಪಡೆದ ಕ್ಯಾರೆಕ್ಟರ್ ನಟರು, ಅವರ ಹಿಂದೆ ತರಬೇತಿ ಪಡೆಯದ ನಟರನ್ನು ಇಟ್ಟು ಈ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.

ಆಕ್ಷನ್ ಹೇಳುತ್ತಿದ್ದಂತೆ ಸಾವಿರ ಜನ ನುಗ್ಗುತ್ತಿದ್ದರು!
ದೃಶ್ಯದ ಚಿತ್ರೀಕರಣದ ವೇಳೆ ಆಕ್ಷನ್ ಹೇಳುತ್ತಿದ್ದಂತೆ ಸಾವಿರಾರು ಜನ ನುಗ್ಗುತ್ತಿದ್ದರಂತೆ. ಅವರ ಮಧ್ಯೆ ರಾಮ್ ಚರಣ್, ಕೂಗಾಟ ಕಿರುಚಾಟಗಳ ನಡುವೆ ದೊಡ್ಡದಾಗಿ ಧೂಳು ಸಹ ಏಳುತ್ತಿತ್ತಂತೆ. ಕೆಲವು ಭಾರಿಯಂತೂ ಜನ ಮುಗಿಬಿದ್ದಾಗ ರಾಮ್ ಚರಣ್ ಕಾಣಿಸುತ್ತಲೇ ಇರುತ್ತಿರಲಿಲ್ಲವಂತೆ, ಆಗೆಲ್ಲ ರಾಜಮೌಳಿಗೆ ಬಹಳ ಭಯವಾಗುತ್ತಿತ್ತಂತೆ ರಾಮ್ ಚರಣ್ ಗೆ ಏನಾದರೂ ಆಗಿಬಿಡುತ್ತದೆ ಎಂದು. ಬಹಳ ಭಯದಲ್ಲಿಯೇ ಆ ದೃಶ್ಯವನ್ನು ಚಿತ್ರೀಕರಣ ಮಾಡಿದ್ದಾಗಿ ರಾಜಮೌಳಿ ಹೇಳಿಕೊಂಡಿದ್ದಾರೆ.
Recommended Video


ಸೊಲೊಮನ್ ರಾಜ್ ಕಂಪೋಸ್ ಮಾಡಿದ ಫೈಟ್
ಆ ದೃಶ್ಯಕ್ಕೆ ಆಕ್ಷನ್ ಕಂಪೋಸ್ ಮಾಡಲು ಮೊದಲಿಗೆ ಹಾಲಿವುಡ್‌ನ ಫೈಟ್ ಕಂಪೋಸರ್ ಅನ್ನು ಕರೆಸಲಾಗಿತ್ತು. ಆತ ಕೆಲವು ನಟರನ್ನು ಬಳಸಿ ಮೊದಲಿಗೆ ಡಮ್ಮಿ ಒಂದನ್ನು ಶೂಟ್ ಮಾಡಿದ್ದ. ಆದರೆ ಅದು ರಾಜಮೌಳಿಗೆ ಇಷ್ಟವಾಗಲಿಲ್ಲ. ಕೊನೆಗೆ ಸೊಲೊಮನ್ ರಾಜ್ ಅನ್ನು ಫೈಟ್ ದೃಶ್ಯ ಕಂಪೋಸ್ ಮಾಡಲು ಕೇಳಲಾಯ್ತು. ಅವರು ಫೈಟ್ ಕಂಪೋಸ್ ಮಾಡಿ ಒಂದು ಡಮ್ಮಿ ವಿಡಿಯೋ ತಂದು ಕೊಟ್ಟರು. ಬಳಿಕ ಸತತ ಮೂರು ತಿಂಗಳುಗಳ ಕಾಲ ಆ ದೃಶ್ಯಕ್ಕೆ ತಯಾರಿ ನಡೆಸಿ ನಂತರ ದೃಶ್ಯ ಮಾಡಲಾಯ್ತು.


Click it and Unblock the Notifications











