'ಬಾಹುಬಲಿ: ದಿ ಎಪಿಕ್' ಚಿತ್ರದಲ್ಲಿ ರಾಜಮೌಳಿ ಹೊಸದಾಗಿ ಸೇರಿಸಿರುವ ದೃಶ್ಯ ಇಲ್ಲಿದೆ ನೋಡಿ
ಎರಡು ಭಾಗಗಳಾಗಿ ಬಂದಿದ್ದ 'ಬಾಹುಬಲಿ' ಕಥೆಯನ್ನು ಒಂದು ಮಾಡಿ ಒಂದೇ ಚಿತ್ರದಲ್ಲಿ ರಾಜಮೌಳಿ ಕಟ್ಟಿಕೊಟ್ಟಿದ್ದಾರೆ. 'ಬಾಹುಬಲಿ: ದಿ ಎಪಿಕ್' ಹೆಸರಿನಲ್ಲಿ ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡ್ತಿದೆ. ಮತ್ತೆ ತೆರೆಮೇಲೆ ಬಾಹುಬಲಿ ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎರಡು ಸಿನಿಮಾಗಳನ್ನು ಸೇರಿಸಿ ಐದೂವರೆ ಗಂಟೆ ಫುಟೇಜ್ ಅನ್ನು ಎಡಿಟ್ ಮಾಡಿ 3 ಗಂಟೆ 40 ನಿಮಿಷಕ್ಕೆ ಇಳಿಸಲಾಗಿದೆ. ಅದಕ್ಕಾಗಿ ಕೆಲ ಸನ್ನಿವೇಶಗಳು, ಹಾಡುಗಳಿಗೆ ಕತ್ತರಿ ಬಿದ್ದಿದೆ. ಆದರೆ ಹೊಸದಾಗಿ ಸಣ್ಣದೊಂದು ದೃಶ್ಯವನ್ನು ಸೇರಿಸಲಾಗಿದೆ. ಆ ದೃಶ್ಯ ತೆರೆಮೇಲೆ ಬಂದಾಗ ಅಭಿಮಾನಿಗಳ ಸಂಭ್ರಮ ಹೆಚ್ಚಾಗುತ್ತಿದೆ.

ಅಷ್ಟು ದೊಡ್ಡ ಫುಟೇಜ್ ಅನ್ನು ಟ್ರಿಮ್ ಮಾಡಿ ಕಮ್ಮಿ ಮಾಡಲು ರಾಜಮೌಳಿ ಬಹಳ ಸರ್ಕಸ್ ಮಾಡಿದ್ದಾರೆ. 5 ವರ್ಷಗಳ ಹಿಂದೆಯೇ ಈ ಪ್ರಯತ್ನ ಮಾಡಿದ್ದೆ. ಒಂದಷ್ಟು ದೃಶ್ಯಗಳನ್ನು ಟ್ರಿಮ್ ಮಾಡಿ ನೋಡಿದ್ದೆವು. ಆದರೆ ಸರಿ ಹೋಗಲಿಲ್ಲ. ಬರೀ ದೃಶ್ಯಗಳನ್ನು ಟ್ರಿಮ್ ಮಾಡಿದ್ದಕ್ಕೆ ಎಲ್ಲವೂ ಅಯೋಮಯವಾಗಿ ಕಂಡಿತ್ತು. ಕೊನೆಗೆ ಸನ್ನಿವೇಶಗಳನ್ನೇ ತೆಗೆದು ಹಾಕಿ ಎಡಿಟ್ ಮಾಡಿದಾಗ ಇದು ಸಾಧ್ಯವಾಯಿತು ಎಂದು ಸ್ವತಃ ರಾಜಮೌಳಿ ಸಂದರ್ಶನದಲ್ಲಿ ಹೇಳಿದ್ದಾರೆ.
ನಿಜ ಹೇಳಬೇಕು ಅಂದರೆ 'ಬಾಹುಬಲಿ' ಚಿತ್ರದಿಂದ ಕೈಬಿಟ್ಟಿರುವ ಸಾಕಷ್ಟು ದೃಶ್ಯಗಳಿವೆ. ಒಟ್ಟು ಫುಟೇಜ್ 6 ಗಂಟೆಗೂ ಅಧಿಕ ಇರುವ ಸಾಧ್ಯತೆಯಿದೆ. ನಟ ಸತ್ಯದೇವ್ ಕೂಡ ಚಿತ್ರದಲ್ಲಿ ನಟಿಸಿದ್ದರು. ಆದರೆ ನನ್ನ ದೃಶ್ಯಗಳನ್ನು ಎಡಿಟಿಂಗ್ ವೇಳೆ ತೆಗೆದು ಹಾಕಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದರು. ಹೀಗೆ ಹಲವು ಸನ್ನಿವೇಶಗಳಿವೆ. ಆದರೆ 'ಬಾಹುಬಲಿ: ದಿ ಎಪಿಕ್' ಚಿತ್ರವನ್ನು 3 ಮುಕ್ಕಾಲು ಗಂಟೆಗೆ ಇಳಿಸಲು ಜಕ್ಕಣ್ಣ ಬಹಳ ತಲೆ ಕೆಡಿಸಿಕೊಂಡಿದ್ದರು. ಅಂತಾದ್ರಲ್ಲಿ ಹೊಸ ದೃಶ್ಯಗಳನ್ನು ಸೇರ್ಪಡೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಆದರೂ ಈ ಸಣ್ಣ ದೃಶ್ಯ ಸೇರಿಸಿದ್ದಾರೆ.
ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ಬಲ್ಲಾಳದೇವ ಪ್ರತಿಮೆ ನಿಲ್ಲಿಸುವ ಸನ್ನಿವೇಶ ಅದು. ಬಿದ್ದು ಹೋಗುತ್ತಿದ್ದ ಪ್ರತಿಮೆಯನ್ನು ಎತ್ತಿ ನಿಲ್ಲಿಸಲು ಶಿವುಡು(ಮಹೇಂದ್ರ ಬಾಹುಬಲಿ) ಸಹಾಯ ಮಾಡುತ್ತಾನೆ. ಬಾಹುಬಲಿ ಬಾಹುಬಲಿ ಎಂಬ ಜೈಕಾರ ಮುಗಿಲು ಮುಟ್ಟುತ್ತದೆ ಬಾಹುಬಲಿ ಮತ್ತೆ ಬಂದ ಎಂದು ಕೇಳಿ ಜನರೆಲ್ಲಾ ಸಂಭ್ರಮಿಸುತ್ತಾರೆ. ಅದಕ್ಕೂ ಮುನ್ನ ಶಿವುಡು ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಪ್ರವೇಶಿಸುವ ಸನ್ನಿವೇಶದಲ್ಲಿ ಒಂದು ದೃಶ್ಯ ಇತ್ತು.
ಬಿಜ್ಜಲದೇವ(ನಾಸರ್) ಮಾತನಾಡಿ ಬಾಹುಬಲಿ ಮತ್ತೆ ಬರಲು ಸಾಧ್ಯವೇ ಇಲ್ಲ, ನಾವೇ ಅವನನ್ನು ಸಾಯಿಸಿದ್ದೇವೆ ಎಂದು ಹೇಳುತ್ತಿದ್ದಂತೆ ಶಿವುಡು ಕುದುರೆ ಏರಿ ಬರುವ ಸನ್ನಿವೇಶ ಅದು. ಇದೀಗ ಆ ದೃಶ್ಯವನ್ನು ತೆರೆಮೇಲೆ ನೋಡಬಹುದು. ಕೆಲವರು ಆ ದೃಶ್ಯವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರೀ-ರಿಲೀಸ್ ಸಿನಿಮಾಗಳ ವಿಚಾರದಲ್ಲಿ 'ಬಾಹುಬಲಿ: ದಿ ಎಪಿಕ್' ಸಿನಿಮಾ ಹೊಸ ದಾಖಲೆ ಬರೆಯುವ ಸುಳಿವು ಸಿಕ್ತಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 10 ವರ್ಷಗಳ ಹಿಂದೆ ಎರಡು ಭಾಗಗಳಾಗಿ ಸಿನಿಮಾ ನೋಡಿದ್ದರೂ ಟಿವಿ, ಓಟಿಟಿ, ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದರೂ ಮತ್ತೆ ತೆರೆಮೇಲೆ ಆ ದೃಶ್ಯವೈಭವ ಕಣ್ತುಂಬಿಕೊಳ್ಳಲು ಸಿನಿರಸಿಕರು ಮುಗಿಬಿದ್ದಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಮೊದಲ ದಿನ 1 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ.
ಅಡ್ವಾನ್ಸ್ ಬುಕ್ಕಿಂಗ್ ಆರಂಭದ 24 ಗಂಟೆಗಳಲ್ಲಿ 64 ಸಾವಿರ ಟಿಕೆಟ್ ಬುಕ್ ಆಗಿ ದಾಖಲೆ ಬರೆದಿತ್ತು. ಹಲವು ಸಿನಿಮಾಗಳು ರೀ-ರಿಲೀಸ್ ಆಗಿದ್ದರೂ ಈ ಮಟ್ಟಿಗಿನ ಕ್ರೇಜ್ ಯಾವುದೇ ಚಿತ್ರಕ್ಕೆ ಇರಲಿಲ್ಲ. ಮುಂದೆ ಸಿನಿಮಾ ಹೇಗೆಲ್ಲಾ ಸದ್ದು ಮಾಡುತ್ತದೆ ಕಾದು ನೋಡಬೇಕು.


Click it and Unblock the Notifications











