ರಾಜಮೌಳಿ, ಮಹೇಶ್ ಬಾಬು ಜೋಡಿಯ 'ವಾರಣಾಸಿ' ಸಿನಿಮಾ ಶೂಟಿಂಗ್ ಸೆಟ್ ಫೋಟೊ, ವಿಡಿಯೋ ಲೀಕ್
'ವಾರಣಾಸಿ' ಸಿನಿಮಾ ಬಿಡುಗಡೆಗೆ ಇನ್ನೊಂದು ವರ್ಷ ಬಾಕಿಯಿದೆ. ಚಿತ್ರದ ಚಿತ್ರೀಕರಣದ ಭರದಿಂದ ಸಾಗುತ್ತಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಇತ್ತೀಚೆಗೆ ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ಚಿತ್ರತಂಡ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
'RRR' ಬಳಿಕ ಘಟಾನುಘಟಿ ಕಲಾವಿದರು, ತಂತ್ರಜ್ಞರ ತಂಡ ಕಟ್ಟಿಕೊಂಡು ರಾಜಮೌಳಿ ತಮ್ಮ ಮತ್ತೊಂದು ಕನಸನ್ನು ತೆರೆಗೆ ತರಲು ಮುಂದಾಗಿದ್ದಾರೆ. ಜಕ್ಕಣ್ಣ ಸಿನಿಮಾ ಅಂದ್ರೆ ಅದ್ಧೂರಿತನ, ಹುಬ್ಬೇರಿಸುವ ಲೋಕೇಶನ್‌ಗಳು, ಭಾರಿ ಸೆಟ್‌ಗಳು ಇರಲೇಬೇಕು. ಸದ್ಯ ಚಿತ್ರದ ಸೆಟ್‌ಗಳ ಫೋಟೊ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಾರಣಾಸಿಯ ಅದ್ಧೂರಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗ್ತಿದೆ.

ವಾರಣಾಸಿ ಸೆಟ್ ಹಾಕುವ ಮುನ್ನ ಅದರ ಸಣ್ಣ ಪ್ರತಿಕೃತಿಯನ್ನು (Miniature) ಅನ್ನು ಮಾಡಲಾಗಿದೆ. ಜೊತೆಗೆ ವಾರಣಾಸಿ ಬೀದಿಗಳು, ಘಾಟ್ ಹೀಗೆ ಚಿತ್ರಕ್ಕಾಗಿ ಹಾಕಿರುವ ಸೆಟ್ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಹಾಲಿವುಡ್ ಮಾಧ್ಯಮದವರಿಗೆ ಸೆಟ್‌ನಲ್ಲೇ ಸಂದರ್ಶನ ನೀಡಿದ್ದರು. ಆಗ ಹಾಲಿವುಡ್ ಮಾಧ್ಯಮದವರು ಸೆರೆ ಹಿಡಿದ ಫೋಟೊ, ವಿಡಿಯೋ ಇದು ಎನ್ನಲಾಗ್ತಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ರಾಜಮೌಳಿ ವಿಷನ್ ನೋಡಿ ಬೆರಗಾಗಿದ್ದಾರೆ.
ನಿರ್ದೇಶಕ ರಾಜಮೌಳಿ ತಮ್ಮ ಸಿನಿಮಾಗಳ ಬಗ್ಗೆ ಬಹಳ ಕುತೂಹಲ ಕಾಯ್ದುಕೊಳ್ಳುತ್ತಾರೆ. ಚಿತ್ರತಂಡ ಅಧಿಕೃತವಾಗಿ ಪೋಸ್ಟರ್, ಟೀಸರ್ ರಿಲೀಸ್ ಮಾಡುವ ಮುನ್ನ ಸೆಟ್‌ನಿಂದ ಯಾವುದೇ ಫೋಟೊ, ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳುತ್ತಾರೆ. ಆದರೆ ಹಾಲಿವುಡ್ ಮಾಧ್ಯಮದವರಿಗೆ ಇದೆಲ್ಲಾ ಕ್ಲಿಕ್ಕಿಸಲು ಯಾಕೆ ಬಿಟ್ಟರು ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಾರಣಾಸಿಯಲ್ಲಿ ಕೂಡ ಚಿತ್ರದ ಚಿತ್ರೀಕರಣ ನಡೆಯಲಿದೆ. ಆದರೆ ಸಾಕಷ್ಟು ಸನ್ನಿವೇಶಗಳನ್ನು ಸೆಟ್‌ನಲ್ಲೇ ಸೆರೆ ಹಿಡಿಯಲು ತೀರ್ಮಾನಿಸಿದ್ದಾರೆ.
ಟೈಮ್ ಟ್ರಾವಲ್, ಗ್ಲೋಬ್ ಟ್ರಾಟರ್ ಕಥೆಯನ್ನು ರಾಜಮೌಳಿ ಈ ಚಿತ್ರದಲ್ಲಿ ಹೇಳುತ್ತಿದ್ದಾರೆ. ತ್ರೇತಾಯುಗದಿಂದ ಕಲಿಯುಗದವರೆಗೆ ಸಿನಿಮಾ ಕಥೆ ಸಾಗಿ ಬರಲಿದೆ. ಅದೇ ರೀತಿ ವಾರಣಾಸಿಯಿಂದ ಅಂಟಾರ್ಟಿಕಾ ಖಂಡದವರೆಗೆ ನಾಯಕನ ಜರ್ನಿ ಸಾಗಲಿದೆ. ಅದನ್ನೆಲ್ಲಾ ಬಹಳ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. 1000 ಕೋಟಿ ರೂ. ಬಜೆಟ್‌ನಲ್ಲಿ 'ವಾರಣಾಸಿ' ಸಿನಿಮಾ ಸಿನಿಮಾ ನಿರ್ಮಾಣವಾಗ್ತಿದೆ. ತೆಲುಗು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗ್ತಿದೆ. ಈ ಬಾರಿ ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಸಿನಿಮಾ ಕಟ್ಟಿಕೊಡಲಾಗ್ತಿದೆ.
ಚಿತ್ರದಲ್ಲಿ ರುದ್ರ ಎಂಬ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಜೊತೆಗೆ ರಾಮಾಯಣದ ಕಥೆ ಕೂಡ ಇರಲಿದ್ದು, ಶ್ರೀರಾಮನ ವೇಷದಲ್ಲಿ ಕೂಡ ದರ್ಶನ ಕೊಡುತ್ತಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹಾಗೂ ಎಸ್. ಎಸ್ ಕಂಚಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದೇವ ಕಟ್ಟಾ ಸಂಭಾಷಣೆ ಚಿತ್ರಕ್ಕಿದೆ. ಇನ್ನು ಎಂ. ಎಂ ಕೀರವಾಣಿ ಸಂಗೀತ, ಪಿ. ಎಸ್ ವಿನೋದ್ ಛಾಯಾಗ್ರಹಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕೆ. ಎಲ್ ನಾರಾಯಣ ಹಾಗೂ ಎಸ್. ಎಸ್. ಕಾರ್ತಿಕೇಯ 'ವಾರಣಾಸಿ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಮ್ಮ ಇತಿಹಾಸದ ಜೊತೆ ಪೌರಾಣಿಕ ಅಂಶಗಳನ್ನು ಸೇರಿಸಿ ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಒರಿಸ್ಸಾದಲ್ಲಿ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ ಬಳಿಕ ಹೈದರಾಬಾದ್ ಹಾಗೂ ಆಫ್ರೀಕಾದಲ್ಲಿ ಶೂಟಿಂಗ್ ಮಾಡಿ ವಾಪಸ್ ಬಂದಿದೆ. ಜಕ್ಕಣ್ಣ ಹಾಗೂ ಮಹೇಶ್ ಬಾಬು ಕಾಂಬೋ ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











