'ವಾರಣಾಸಿ' ಬಳಿಕ ಆ ಹೀರೊ ಜೊತೆ ಎಸ್. ಎಸ್ ರಾಜಮೌಳಿ ಮುಂದಿನ ಸಿನಿಮಾ?
ಸ್ಟಾರ್ ನಿರ್ದೇಶಕರು ಯಾರ ಜೊತೆ ಸಿನಿಮಾ ಮಾಡ್ತಾರೆ ಎನ್ನುವುದು ಬಹಳ ನಿರೀಕ್ಷೆ ಹುಟ್ಟಾಕುತ್ತದೆ. ಮದಗಜಗಳು ಜೊತೆಯಾದರೆ ಸಹಜವಾಗಿಯೇ ಕುತೂಹಲ ಮೂಡುತ್ತದೆ. ಅದೇ ಕಾರಣಕ್ಕೆ ಸ್ಟಾರ್ ನಟ ಹಾಗೂ ಸ್ಟಾರ್ ನಿರ್ದೇಶಕರ ಕಾಂಬಿನೇಷನ್ ಬಗ್ಗೆ ಹೈಪ್ ಕ್ರಿಯೇಟ್ ಆಗುತ್ತದೆ. ಸದ್ಯ ರಾಜಮೌಳಿ 'ವಾರಣಾಸಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಮುಂದಿನ ಸಿನಿಮಾ ಹೀರೊ ಯಾರು ಎನ್ನುವ ಚರ್ಚೆ ಶುರುವಾಗಿದೆ.
ಖ್ಯಾತ ನಿರ್ದೇಶಕ ರಾಜಮೌಳಿ ಪ್ರಾಜೆಕ್ಟ್‌ಗಳ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಒಂದಕ್ಕಿಂತ ಒಂದು ಅದ್ಭುತ ಚಿತ್ರಗಳನ್ನು ಜಕ್ಕಣ್ಣ ಕಟ್ಟಿಕೊಟ್ಟಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ರೇಂಜ್ ಬದಲಾಗಿದೆ. ಮಲ್ಟಿಸ್ಟಾರರ್ 'RRR' ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿತ್ತು. ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ಕಾಂಬಿನೇಷನ್‌ನಲ್ಲಿ ಮಾಡಿದ ಮಲ್ಟಿಸ್ಟಾರರ್ ಸಿನಿಮಾ ಕಮಾಲ್ ಮಾಡಿತ್ತು. ಈಗ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ವಾರಣಾಸಿ' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ತೆರೆಗೆ ಬರಲಿದೆ.

'ವಾರಣಾಸಿ' ಬಳಿಕ ಮತ್ತೆ ರಾಮ್‌ಚರಣ್ ಜೊತೆ ಜಕ್ಕಣ್ಣ ಸಿನಿಮಾ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. 'ಮಗಧೀರ' ಹಾಗೂ 'RRR' ಬಳಿಕ 3ನೇ ಬಾರಿ ಇಬ್ಬರೂ ಕೈ ಜೋಡಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ನಿರ್ದೇಶಕ ರಾಜಮೌಳಿ ತೆರೆಮೇಲೆ ದೊಡ್ಡ ದೊಡ್ಡ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ಶ್ರಮಿಸುತ್ತಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತೆರೆಮೇಲೆ ಜಾದೂ ಮಾಡುವ ಪ್ರಯತ್ನ ಮಾಡುತ್ತಾರೆ.
'RRR' ಸಿನಿಮಾ ಮೂಲಕ ಹಾಲಿವುಡ್ ಅಂಗಳದಲ್ಲಿ ಕೂಡ ಜಕ್ಕಣ್ಣ ಖದರ್ ತೋರಿಸಿದ್ದಾರೆ. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಮೆಚ್ಚಿದ್ದರು. ಹಾಗಾಗಿ ಹಾಲಿವುಡ್ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು 'ವಾರಣಾಸಿ' ಚಿತ್ರ ಕಟ್ಟಿಕೊಡುತ್ತಿದ್ದಾರೆ. 1000 ಕೋಟಿ ರೂ. ಬಜೆಟ್‌ನಲ್ಲಿ ಐಮ್ಯಾಕ್ಸ್ ಫಾರ್ಮೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡ ತಾರಾಗಣದಲ್ಲಿದ್ದಾರೆ.

ಒಂದು ಸಿನಿಮಾ ಮುಗಿಸುವವರೆಗೂ ಮತ್ತೊಂದು ಸಿನಿಮಾ ಬಗ್ಗೆ ಯೋಚಿಸುವುದಿಲ್ಲ ಎಂದು ರಾಜಮೌಳಿ ಸಾಕಷ್ಟು ಸಂದರ್ಭಗಳಲ್ಲಿ ಹೇಳಿದ್ದಾರೆ. ಇತ್ತೀಚೆಗೆ ಪತ್ನಿ ಜೊತೆ ಸೇರಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ವೀಕ್ಷಿಸಿದ್ದರು. ಆದರೆ ಬಳಿಕ ಪ್ರತಿಕ್ರಿಯಿಸಲಿಲ್ಲ. ರಾಮ್‌ಚರಣ್ ಹಾಗೂ ಸುಕುಮಾರನ್ ಕಾಂಬಿನೇಷನ್ ಸಿನಿಮಾ ಶುರುವಾಗಬೇಕಿದೆ. ಈ ನಡುವೆ ರಾಮ್‌ಚರಣ್ ಹಾಗೂ ರಾಜಮೌಳಿ ನಿಜಕ್ಕೂ ಒಟ್ಟಿಗೆ ಸಿನಿಮಾ ಮಾಡ್ತಾರಾ? ಎನ್ನುವ ಕುತೂಹಲ ಮೂಡಿದೆ. ಆದರೆ ಈ ಸುದ್ದಿ ನಿಜವಾಗಲಿ ಎಂದು ಮೆಗಾ ಫ್ಯಾನ್ಸ್ ಬಯಸುತ್ತಿದ್ದಾರೆ.
'ಪೆದ್ದಿ' ಚಿತ್ರಕ್ಕಾಗಿ ರಾಮ್‌ಚರಣ್ ಶ್ರಮ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ರಾಜಮೌಳಿ ಚಿತ್ರಗಳಲ್ಲಿ ನಟಿಸುವುದು ಕೂಡ ಅಷ್ಟು ಸುಲಭ ಅಲ್ಲ. ಜಕ್ಕಣ್ಣ ನಟರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಥೆ ಮಾಡುವುದು ಕಮ್ಮಿ. ತಮ್ಮ ಕಥೆಗೆ ಸೂಕ್ತ ಎನಿಸುವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿ ಪಾತ್ರದ ಬಗ್ಗೆ ಬಹಳ ಗಮನ ಹರಿಸುತ್ತಾರೆ. ಅದೇ ರೀತಿ ಜಕ್ಕಣ್ಣ ನಿರ್ದೇಶನದಲ್ಲಿ ಕೆಲಸ ಮಾಡಲು ಸ್ಟಾರ್ ನಟರು ಕಾಯುತ್ತಿದ್ದಾರೆ. ಎಲ್ಲರನ್ನು ಬಿಟ್ಟು ಮತ್ತೆ ರಾಜಮೌಳಿ ಹಾಗೂ ಚರಣ್ ಕಾಂಬೋ ರಿಪೀಟ್ ಆಗುತ್ತಾ ಕಾದು ನೋಡಬೇಕಿದೆ.
ಸದ್ಯ 'ಪೆದ್ದಿ' ಸಕ್ಸಸ್ ಸಂಭ್ರಮದಲ್ಲಿ ರಾಮ್‌ಚರಣ್ ತೇಲುತ್ತಿದ್ದಾರೆ. ವಿಶ್ವದಾದ್ಯಂತ ಈ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ 400 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಕರ್ನಾಟಕದಲ್ಲೇ 30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಮುಂದೆ ರಾಜಮೌಳಿ ಜೊತೆ ಚರಣ್ ಸಿನಿಮಾ ಮಾಡಿದ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ.


Click it and Unblock the Notifications