ಪವನ್ ಕಲ್ಯಾಣ್, ಮಹೇಶ್ ಬಾಬು ಬಗ್ಗೆ ರಾಜಮೌಳಿ ಟ್ವೀಟ್: ಪ್ರಭಾಸ್‌ಗೆ ಪರೋಕ್ಷ ಟಾಂಗ್?
ಬಹುನಿರೀಕ್ಷಿತ ಸಿನಿಮಾ 'ಆರ್ಆರ್ಆರ್' ನ ಬಿಡುಗಡೆ ಕಾರ್ಯದಲ್ಲಿ ನಿರ್ದೇಶಕ ರಾಜಮೌಳಿ ಬ್ಯುಸಿಯಾಗಿದ್ದಾರೆ. ಭಾರತದಾದ್ಯಂತ ಸಿನಿಮಾದ ಪ್ರಚಾರ ಮಾಡಲಾಗುತ್ತಿದ್ದು, ಚಿತ್ರತಂಡದ ಜೊತೆಗೆ ಎಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ.
ತೆಲುಗು ಚಿತ್ರರಂಗದಲ್ಲಿ 'ಆರ್ಆರ್ಆರ್' ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡಗುಡೆಗೆ ಸಾಲುಗಟ್ಟಿ ನಿಂತಿವೆ. ಇದು 'ಆರ್ಆರ್ಆರ್' ತಂಡಕ್ಕೆ ಆತಂಕ ತಂದಿತ್ತು. ಆಂಧ್ರದಲ್ಲಿ ಟಿಕೆಟ್ ದರಗಳನ್ನು ತೀವ್ರವಾಗಿ ಇಳಿಸಿದ್ದು, ಇದೇ ಸಮಯದಲ್ಲಿ ತಮ್ಮ ಸಿನಿಮಾಕ್ಕೆ ಸ್ಪರ್ಧೆ ಎದುರಾದರೆ ನಿರೀಕ್ಷಿತ ಮಟ್ಟದ ಲಾಭವನ್ನು ಸಿನಿಮಾ ಗಳಿಸುವುದಿಲ್ಲವೆಂಬ ಆತಂಕ ರಾಜಮೌಳಿಯವರದ್ದು.
'ಆರ್ಆರ್ಆರ್' ಸಿನಿಮಾ ಬಿಡುಗಡೆ ಸಮಯಕ್ಕೆ ಇನ್ನೂ ಮೂರು ದೊಡ್ಡ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ತಯಾರಾಗಿ, ದಿನಾಂಕ ಘೋಷಣೆಯನ್ನೂ ಮಾಡಿದ್ದವು. ಆದರೆ ರಾಜಮೌಳಿಯ ಮನವಿಯಿಂದಾಗಿ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ. ಈ ಬಗ್ಗೆ ನಟ ರಾಜಮೌಳಿ ಟ್ವೀಟ್ ಮಾಡಿ ಸಿನಿಮಾ ಮುಂದಕ್ಕೆ ಹಾಕಿಕೊಂಡ ನಟ, ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಹೇಳಿದ್ದಾರೆ. ಹೀಗೆ ಬಹಿರಂಗವಾಗಿ ಟ್ವೀಟ್ ಮಾಡುವ ಹಿಂದೆ ಪ್ರಭಾಸ್‌ಗೆ ಟಾಂಗ್ ನೀಡುವ ಉದ್ದೇಶವೂ ರಾಜಮೌಳಿಗೆ ಇದ್ದಂತಿದೆ.
'ಆರ್ಆರ್ಆರ್' ಸಿನಿಮಾ ಜನವರಿ 07 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸುವ ಮುನ್ನವೇ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾವು ಜನವರಿ 12 ಕ್ಕೆ ಬಿಡಗುಡೆ ಆಗುವುದಾಗಿ ಘೋಷಿಸಿ ಆಗಿತ್ತು. ಆದರೆ ಇದೀಗ 'ಸರ್ಕಾರು ವಾರಿ ಪಾಠ' ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ.

ಮಹೇಶ್ ಬಾಬುಗೆ ರಾಜಮೌಳಿ ವಿಶೇಷ ಧನ್ಯವಾದ
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ಎಸ್ ರಾಜಮೌಳಿ, ''ಸಂಕ್ರಾಂತಿ ಸಿನಿಮಾ ಬಿಡುಗಡೆ ರೇಸ್‌ನಿಂದ ಹಿಂದೆ ಸರಿದ ಮಹೇಶ್ ಬಾಬುಗೆ ಧನ್ಯವಾದ. ಅವರ 'ಸರ್ಕಾರು ವಾರಿ ಪಾಠ' ಸಂಕ್ರಾಂತಿಗೆ ಹೇಳಿ ಮಾಡಿಸಿದ ಸಿನಿಮಾ ಆಗಿತ್ತು. ಆದರೆ ಸಿನಿಮಾಗಳ ಮಧ್ಯೆ ಅನಾರೋಗ್ಯಕರ ಸ್ಪರ್ಧೆ ತಪ್ಪಿಸಲು ಮಹೇಶ್ ಬಾಬು ತಮ್ಮ ಸಿನಿಮಾವನ್ನು ಹಿಂದೆತೆಗೆದುಕೊಂಡಿದ್ದಾರೆ. ಅದಕ್ಕಾಗಿ ನಾನು ನನ್ನ ಹೀರೋ ಮಹೇಶ್ ಬಾಬುಗೆ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ಹೇಳುತ್ತೇನೆ'' ಎಂದರು. ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಹೇಶ್ ಬಾಬು, ''ನೀವು ಮಾಡುವ ಸಿನಿಮಾಗಳಿಗೆ ಎಲ್ಲರ ಪ್ರೀತಿ, ಗೌರವ ಸಿಗಬೇಕು. ನಾನು ಸಹ 'ಆರ್ಆರ್ಆರ್'ಗಾಗಿ ಕಾಯುತ್ತಿದ್ದೇನೆ'' ಎಂದಿದ್ದಾರೆ.

ಪವನ್ ಕಲ್ಯಾಣ್‌ಗೆ ರಾಜಮೌಳಿ ಧನ್ಯವಾದ
ಮುಂದಿನ ಟ್ವೀಟ್‌ನಲ್ಲಿ ಪವನ್ ಕಲ್ಯಾಣ್ ಅನ್ನು ಹೊಗಳಿರುವ ರಾಜಮೌಳಿ, ''ಚಿನ್ನಬಾಬು ಹಾಗೂ ಪವನ್ ಕಲ್ಯಾಣ್ ಅವರು ತಮ್ಮ ಸಿನಿಮಾವನ್ನು ಹಿಂದೆ ತೆಗೆದುಕೊಂಡಿರುವುದಕ್ಕೆ ನನಗೆ ಹೃದಯಪೂರ್ವಕ ಧನ್ಯವಾದ. ಅವರ ತಂಡಕ್ಕೆ ಶುಭಾಶಯ ಕೋರುತ್ತೇನೆ'' ಎಂದಿದ್ದಾರೆ. ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ 'ಭೀಮ್ಲ ನಾಯಕ್' ಸಿನಿಮಾವನ್ನು ಜನವರಿ 12 ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು, ಇದೀಗ ಚಿತ್ರತಂಡವು ಸಿನಿಮಾ ಬಿಡುಗಡೆ ಮುಂದೂಡಿದ್ದು, ಇದೀಗ ಸಿನಿಮಾವು ಫೆಬ್ರವರಿ 25 ಕ್ಕೆ ಬಿಡುಗಡೆ ಆಗಲಿದೆ.

ದಿಲ್‌ರಾಜುಗೆ ರಾಜಮೌಳಿ ಧನ್ಯವಾದ
ಜನಪ್ರಿಯ ನಿರ್ಮಾಪಕ ದಿಲ್ ರಾಜು ಅವರಿಗೂ ಧನ್ಯವಾದ ಹೇಳಿರುವ ರಾಜಮೌಳಿ, ''ದಿಲ್ ರಾಜು ಮತ್ತು 'ಎಫ್3' ಸಿನಿಮಾ ತಂಡಕ್ಕೆ ಧನ್ಯವಾದಗಳು. ಅವರೂ ಸಹ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡಿದ್ದಾರೆ'' ಎಂದಿದ್ದಾರೆ ರಾಜಮೌಳಿ. ವೆಂಕಟೇಶ್, ವರುಣ್ ತೇಜ್ ನಟನೆ 'ಎಫ್ 3' ಸಿನಿಮಾ ಸಹ ಸಂಕ್ರಾಂತಿಗೆ ಬಿಡುಗಡೆ ಆಗುವುದರಲ್ಲಿತ್ತು. ಆದರೆ ಅದೂ ಸಹ ಸಂಕ್ರಾಂತಿ ರೇಸ್‌ನಿಂದ ಹಿಂದೆ ಸರಿದು, 'ಆರ್ಆರ್ಆರ್' ಸಿನಿಮಾಕ್ಕೆ ಜಾಗ ಮಾಡಿಕೊಟ್ಟಿದೆ.

ಪ್ರಭಾಸ್-ರಾಜಮೌಳಿ ಮಧ್ಯೆ ಮುನಿಸು
ಆದರೆ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಸಂಕ್ರಾಂತಿ ಬಿಡುಗಡೆಯಿಂದ ಹಿಂದೆ ಸರಿದಿಲ್ಲ. ಸ್ವತಃ ರಾಜಮೌಳಿಯೇ ಪ್ರಭಾಸ್ ಅನ್ನು ತಮ್ಮ ಸಿನಿಮಾವನ್ನು ಹಿಂದೆ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರೂ ಪ್ರಭಾಸ್ ಸಿನಿಮಾವನ್ನು ಹಿಂತೆಗೆದುಕೊಂಡಿಲ್ಲ. ಹಾಗಾಗಿ ರಾಜಮೌಳಿ ಪ್ರಭಾಸ್ ಮೇಲೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಾಲೇಜು ಕಾರ್ಯಕ್ರಮದಲ್ಲಿ ಪ್ರಭಾಸ್ ಬಗ್ಗೆ ಕೇಳಲಾದ ಪ್ರಶ್ನೆಯನ್ನು ಬೇಕೆಂದೆ ನಿರ್ಲಕ್ಷ್ಯ ಮಾಡಿದ್ದರು ರಾಜಮೌಳಿ, ಆ ನಂತರ ಮತ್ತೊಮ್ಮೆ ಪ್ರಶ್ನೆ ಕೇಳಿದಾಗ, 'ಪ್ರಭಾಸ್ ಜೊತೆ ಸದ್ಯಕ್ಕೆ ಸಿನಿಮಾ ಮಾಡುವ ಪರಿಸ್ಥಿತಿ ಇಲ್ಲ'' ಎಂದು ಚುಟುಕಾಗಿ ಉತ್ತರಿಸಿದ್ದರು.


Click it and Unblock the Notifications










