ಚರಣ್‌ದು ಸೈಡ್ ರೋಲ್ ಎಂದ ಮೌಳಿ, ತಾರಕ್‌ದು ಸೈಡ್ ರೋಲ್ ಎಂದ ತಂದೆ; ಮತ್ತೆ RRR ಹಗ್ಗಜಗ್ಗಾಟ!
ರಾಜಮೌಳಿ ನಿರ್ದೇಶನದ 'RRR' ಸಿನಿಮಾ 2 ವರ್ಷಗಳ ಹಿಂದೆ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ ಈ ಮಲ್ಟಿಸ್ಟಾರರ್ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಲಿವುಡ್ ಸ್ಟಾರ್ಸ್, ಫಿಲ್ಮ್ಸ್ ಕೂಡ ಸಿನಿಮಾ ಮೆಚ್ಚಿಕೊಂಡಿದ್ದರು.
ಜೇಮ್ಸ್ ಕ್ಯಾಮರೂನ್ ಸೇರಿದಂತೆ ದಿಗ್ಗಜರಲ್ಲಾ ರಾಜಮೌಳಿ ಪ್ರತಿಭೆಗೆ ಬಹುಪರಾಕ್ ಎಂದಿದ್ದರು. ದೇಶ ವಿದೇಶಗಳಲ್ಲಿ 'RRR' ಸಿನಿಮಾ ತೆರೆಕಂಡು ಸಂಚಲನ ಸೃಷ್ಟಿಸಿತ್ತು. ಇಬ್ಬರು ಸ್ನೇಹಿತರ ಕುರಿತು ಚಿತ್ರವನ್ನು ಬಹಳ ರೋಚಕವಾಗಿ ಜಕ್ಕಣ್ಣ ಕಟ್ಟಿಕೊಟ್ಟಿದ್ದರು. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕ ಕಥೆಯನ್ನು ಹೆಣೆದು ಚಿತ್ರವನ್ನು ತೆರೆಗೆ ತರಲಾಗಿತ್ತು. ಡಿವಿವಿ ದಾನಯ್ಯ ಚಿತ್ರವನ್ನು ನಿರ್ಮಿಸಿದ್ದರು.

ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮುರಂ ಭೀಮ್ ಪಾತ್ರಗಳಲ್ಲಿ ಚರಣ್ ಹಾಗೂ ತಾರಕ್ ನಟಿಸಿದ್ದರು. ಆಂಧ್ರದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿತ್ತು. ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯನ್ನು ಮೌಳಿ ತೆರೆಗೆ ತಂದಿದ್ದರು. ಹಾಲಿವುಡ್ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಥ್ರಿಲ್ ಕೊಡುವಂತೆ ಸಿನಿಮಾ ತಿದ್ದಿ ತೀಡಿದ್ದರು.
ಮಲ್ಟಿಸ್ಟಾರರ್ ಸಿನಿಮಾ ಆಗಿದ್ದರೂ ಕ್ಲೈಮ್ಯಾಕ್ಸ್ ವೇಳೆಗೆ ರಾಮ್‌ಚರಣ್ ಪಾತ್ರಕ್ಕೆ ಹೆಚ್ಚು ಮಹತ್ವ ಬಂದುಬಿಟ್ಟಿತ್ತು. ರಾಮರಾಜು ಆಗಿ ಚರಣ್ ಮೋಡಿ ಮಾಡಿದ್ದರು. ಇದೇ ಕಾರಣಕ್ಕೆ ತಾರಕ್ ಮಾಡಿದ್ದ ಭೀಮ್ ಪಾತ್ರ ಕೊಂಚ ಚಿಕ್ಕದು ಎನಿಸಿಬಿಟ್ಟಿತ್ತು. ಆದರೆ ಮೊದಲಿನಿಂದಲೂ ರಾಜಮೌಳಿ ಇಬ್ಬರ ಪಾತ್ರಗಳನ್ನು ಒಂದೇ ರೀತಿ ತೆರೆಗೆ ತರಲು ಪ್ರಯತ್ನಿಸಿದ್ದರು. ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದರು.
'RRR' ಚಿತ್ರದಲ್ಲಿ ಯಾರು ಚೆನ್ನಾಗಿ ನಟಿಸಿದ್ದಾರೆ? ಎನ್ನುವ ಪ್ರಶ್ನೆಗೆ ಬಂದಾಗ ಇಬ್ಬರೂ ಎನ್ನುವ ಉತ್ತರ ಬರುತ್ತಿದೆ. ಆದರೆ ಚರಣ್ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಸಿಕ್ಕಿ ಹೀರೋ ರೀತಿ ಕಾಣುತ್ತಾರೆ ಎನ್ನುವ ವಾದ ಕೆಲವರದ್ದು. ಆದರೆ ಇದನ್ನು ಒಪ್ಪಲು ಚಿತ್ರತಂಡ ಸಿದ್ಧವಿಲ್ಲ. ಕಥೆ ಬರೆದ ವಿಜಯೇಂದ್ರ ಪ್ರಸಾದ್, ನಿರ್ದೇಶಕ ರಾಜಮೌಳಿ ಎಲ್ಲರೂ ಈ ಮಾತನ್ನು ಅಲ್ಲಗಳೆಯುತ್ತಾರೆ. ಆದರೆ ಅಭಿಮಾನಿಗಳು ಮಾತ್ರ ಇದೇ ವಿಚಾರವಾಗಿ ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಸುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ವಿಜಯೇಂದ್ರ ಪ್ರಸಾದ್ ಮಾತನಾಡುತ್ತಾ ಒಂದರ್ಥದಲ್ಲಿ ತಾರಕ್‌ದು ಸಪೋರ್ಟಿಂಗ್ ರೋಲ್ ಎನ್ನುವಂತೆ ಮಾತನಾಡಿದ್ದಾರೆ. ಇದು ತಾರಕ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. "ಒಂದು ಪಾತ್ರವನ್ನು ಚಿಕ್ಕದಾಗಿ ತೋರಿಸುವುದು ಅಥವಾ ದೊಡ್ಡದಾಗಿ ನಾವು ತೋರಿಸಬೇಕು ಎಂದುಕೊಳ್ಳಲ್ಲ. ಬರೆಯುವಾಗ ನಮಗೆ 2 ಪಾತ್ರಗಳು ಒಂದೇ ಎನಿಸಿತು. ಆದರೆ ರಾಮ್‌ಚರಣ್ ಪಾತ್ರಕ್ಕೆ ಸಾಕಷ್ಟು ವೇರಿಯೇಷನ್ಸ್ ಇದೆ, ಎನ್‌ಟಿಆರ್ ಪಾತ್ರಕ್ಕೆ ಮುಗ್ಧತೆ, ಒಳ್ಳೆತನ ಅಷ್ಟೆ ಇದೆ. ಆದರೆ ಎನ್‌ಟಿಆರ್ ಮಾಡಿದ್ದ ಪಾತ್ರ ಕಷ್ಟ. ಕಥೆಯನ್ನು ಮುಂದೆ ತೆಗೆದುಕೊಂಡು ಹೋಗಲು ಆ ಪಾತ್ರ ಸಪೋರ್ಟಿಂಗ್ ಆಗಿ ಇರುತ್ತದೆ" ಎಂದಿದ್ದಾರೆ.
ವಿಜಯೇಂದ್ರ ಪ್ರಸಾದ್ ಹೇಳಿಕೆ ತಾರಕ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇನ್ನು ಬಹಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುವ ರಾಜಮೌಳಿ "ಒಂದು ವೇಳೆ ಕೊಮುರಂ ಭೀಮುಡೋ ಹಾಡು ಇರುವಲ್ಲಿಗೆ ನಾನು ಕಥೆ ನಿಲ್ಲಿಸಿದ್ದರೆ, ಚರಣ್ ಪಾತ್ರ ಕೇವರ ಸಪೋರ್ಟಿಂಗ್ ಪಾತ್ರದಂತೆ ಕಾಣುತ್ತದೆ" ಎಂದಿದ್ದರು. ವಿಜಯೇಂದ್ರ ಪ್ರಸಾದ್ ಹೇಳಿಕೆ ಬೆನ್ನಲೇ ಜಕ್ಕಣ್ಣ ಈ ಹಳೇ ವಿಡಿಯೋವನ್ನು ತಾರಕ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.


Click it and Unblock the Notifications










