ಮಂಗಳೂರಲ್ಲಿ ಶೂಟಿಂಗ್.. ಬೆಂಗಳೂರಲ್ಲಿ ಶಿವರಾತ್ರಿ: ಚಿನ್ನದಂಥ ಅಣ್ಣನಿಗೆ ತಲೈವಾ ಚಿನ್ನದ ಅಭಿಷೇಕ!
'ಜೈಲರ್' ಸಿನಿಮಾ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಮಡದಿ, ಮಗಳ ಜೊತೆ ಶಿವರಾತ್ರಿ ಹಬ್ಬವನ್ನು ಕೂಡ ತಲೈವಾ ಬೆಂಗಳೂರಿನಲ್ಲೇ ಆಚರಿಸಿದ್ದಾರೆ.
ಶಿವರಾತ್ರಿ ಹಬ್ಬದ ನಂತರ ಸಹೋದರ ಸತ್ಯ ನಾರಾಯಣ ಗಾಯಕ್‌ವಾಡ್ ಹುಟ್ಟುಹಬ್ಬ ಆಚರಣೆಯಲ್ಲಿ ರಜನಿಕಾಂತ್ ಭಾಗಿ ಆಗಿದ್ದರು. ತಲೈವಾ ಸಹೋದರ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ. ಆಗಾಗ ರಜಿನಿಕಾಂತ್ ಅಣ್ಣನ ಮನೆಗೆ ಭೇಟಿ ಕೊಡುತ್ತಿರುತ್ತಾರೆ. ಕಳೆದ ವಾರವಷ್ಟೇ ಸೂಪರ್ ಸ್ಟಾರ್ ಕರ್ನಾಟಕಕ್ಕೆ ಬಂದಿದ್ದರು. ಮಂಗಳೂರಿನ ಪಿಳಿಕುಳದ ಗುತ್ತಿನ ಮನೆಯಲ್ಲಿ 2 ದಿನಗಳ ಕಾಲ 'ಜೈಲರ್' ಸಿನಿಮಾ ಚಿತ್ರೀಕರಣ ನಡೆದಿತ್ತು. ನಟ ಶಿವರಾಜ್‌ಕುಮಾರ್ ಕೂಡ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಮಂಗಳೂರಿನಿಂದ ರಜನಿಕಾಂತ್ ನೇರವಾಗಿ ಚೆನ್ನೈಗೆ ಹೋಗುತ್ತಾರೆ ಎಂದು ಭಾವಿಸಿದ್ದರು. ಆದರೆ ತಲೈವಾ ಬೆಂಗಳೂರಿಗೆ ಬಂದಿದ್ದಾರೆ. ಚಿಕ್ಕಬಳ್ಳಾಪುರಕ್ಕೂ ಭೇಟಿ ನೀಡಿದ್ದಾರೆ. ಕೊನೆಗೆ ಸಹೋದರನ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿ ಆಗಿದ್ದಾರೆ.
ಅಣ್ಣನಿಗೆ ಕನಕಾಭಿಷೇಕ
ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿನಲ್ಲಿ ಅಣ್ಣನ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿ ಆಗಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ನನ್ನ ಸಹೋದರ ಸತ್ಯನಾರಾಯಣ ರಾವ್ ಗಾಯಕವಾಡ್ ಅವರ 80ನೇ ವರ್ಷದ ಹುಟ್ಟುಹಬ್ಬ ಹಾಗೂ ಅವರ ಮಗ ರಾಮಕೃಷ್ಣ ಅವರ 60ನೇ ಹುಟ್ಟುಹಬ್ಬವನ್ನು ನನ್ನ ಕುಟುಂಬದೊಂದಿಗೆ ಒಂದೇ ದಿನ ಆಚರಿಸಿದ್ದು ಬಹಳ ಸಂತಸ ತಂದಿದೆ. ಇಂದು ನಾನು ಏನೇ ಆಗಿದ್ದರು ಅದಕ್ಕೆ ಕಾರಣ ನನ್ನ ಅಣ್ಣ. ಈ ಚಿನ್ನದ ಹೃದಯಕ್ಕೆ ಚಿನ್ನದ ಅಭಿಷೇಕ ಮಾಡಿ ಧನ್ಯನಾಗಿದ್ದೇನೆ. ದೇವರಿಗೆ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.

ಆರ್ಟ್ ಆಫ್ ಲಿವಿಂಗ್‌ನಲ್ಲಿ ಶಿವರಾತ್ರಿ
ಕಳೆದೆರಡು ವಾರಗಳಿಂದ ರಜನಿಕಾಂತ್ ಕರ್ನಾಟಕದಲ್ಲಿ ಇದ್ದಾರೆ. ಶಿವರಾತ್ರಿ ಹಬ್ಬಕ್ಕೆ ಫ್ಯಾಮಿಲಿ ಸಮೇತ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಧ್ಯಾನ ಮಂದಿರಕ್ಕೆ ಭೇಟಿ ನೀಡಿದ್ದರು. ಪತ್ನಿ ಲತಾ ಹಾಗೂ ಪುತ್ರಿ ಐಶ್ವರ್ಯ ರಜನಿಕಾಂತ್ ಕೂಡ ಸಾಥ್ ನೀಡಿದ್ದರು. ರಜನಿಕಾಂತ್ ಹಾಗೂ ಲತಾ ದಂಪತಿ ಧ್ಯಾನ ಮಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಚಿಕ್ಕಬಳ್ಳಾಪುರದ ಇಶಾ ಕೇಂದ್ರಕ್ಕೆ ಭೇಟಿ
ಮಂಗಳೂರಿನಿಂದ ಸೂಪರ್ ಸ್ಟಾರ್ ರಜನಿಕಾಂತ್ ಚಿಕ್ಕಾಬಳ್ಳಾಪುರಕ್ಕೆ ತೆರಳಿದ್ದರು. ಚಿಕ್ಕಬಳ್ಳಾಪುರದ ಅಗಲಗುರ್ಕಿ ಸಮೀಪದಲ್ಲಿ ಹೊಸದಾಗಿ ಇಶಾ ಧ್ಯಾನ ಕೇಂದ್ರ ಆರಂಭವಾಗಿದೆ. ಪೊಲೀಸರಿಗೂ ಯಾವುದೇ ಮಾಹಿತಿ ನೀಡದೇ ರಜನಿಕಾಂತ್ ನೇರವಾಗಿ ಅಲ್ಲಿಗ ತೆರಳಿ ಆದಿಯೋಗಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಸಹೋದರ ಸತ್ಯ ನಾರಾಯಣ ಕೂಡ ಜೊತೆಗಿದ್ದರು. ಆ ದಿನ ಸಾವಿರಾರು ಭಕ್ತರ ಜೊತೆ ರಜನಿಕಾಂತ್ ಕುಟುಂಬ ಸಮೇತರಾಗಿ ಆದಿ ಯೋಗಿಗೆ ನಮಿಸಿದ್ದರು.

'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಬ್ಯುಸಿ
ರಾಜಕೀಯರಂಗಕ್ಕೆ ಕಾಲಿಡುವುದಾಗಿ ಹೇಳಿ ನಿರ್ಧಾರ ಬದಲಿಸಿದ್ದ ರಜನಿಕಾಂತ್ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಬಣ್ಣ ಹಚ್ಚಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ. ರಮ್ಯಾಕೃಷ್ಣ, ತಮನ್ನಾ, ಜಾಕಿಶ್ರಾಫ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಏಪ್ರಿಲ್ 14ಕ್ಕೆ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ.


Click it and Unblock the Notifications











