ತೆಲುಗಿನಲ್ಲೂ ಗೆದ್ದುಬಿಟ್ರು ಮನು-ಪ್ರಿಯಾ: 2ನೇ ದಿನ ಮತ್ತಷ್ಟು ಶೋಗಳು ಹೆಚ್ಚಳ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ತೆಲುಗಿಗೂ ಡಬ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೇಮಂತ್ ರಾವ್ ನಿರ್ದೇಶನದ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಚಿತ್ರವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಈ ವಾರ ತೆಲುಗು ಪ್ರೇಕ್ಷಕರ ಮುಂದೆ ಸಿನಿಮಾ ಹೋಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
'ಸಪ್ತ ಸಾಗರಾಲು ದಾಟಿ' ಟೈಟಲ್‌ನಲ್ಲಿ ಸಿನಿಮಾ ಆಂಧ್ರ ಹಾಗೂ ತೆಲಂಗಾಣದಲ್ಲಿ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ಹೈಪ್ ಕ್ರಿಯೇಟ್ ಆಗಿದ್ದ ಕಾರಣ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬಹುತೇಕರಿಗೆ ಸಿನಿಮಾ ಇಷ್ಟವಾಗಿದೆ. ಮನು- ಪ್ರಿಯಾ ಪ್ರೇಮಕತೆಗೆ ಫಿದಾ ಆಗೋಗಿದ್ದಾರೆ. ಮೊದಲ ದಿನ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ 2ನೇ ದಿನ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ.

ಕಳೆದೊಂದು ವಾರದಿಂದ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಹೇಮಂತ್ ರಾವ್ ಹೈದರಾಬಾದ್‌ನಲ್ಲೇ ಬೀಡುಬಿಟ್ಟಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಮೊದಲ ಭಾಗ ನೋಡಿ ಮೆಚ್ಚಿಕೊಂಡ ಪ್ರೇಕ್ಷಕರು 2ನೇ ಭಾಗ ಬೇಗ ರಿಲೀಸ್ ಮಾಡಿ ಎಂದು ಕೇಳುತ್ತಿದ್ದಾರೆ. ರುಕ್ಮಿಣಿ ಅಭಿನಯವನ್ನು ಕೊಂಡಾಡುತ್ತಿದ್ದಾರೆ. ಈ ಹಿಂದೆ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆ ಬಳಿಕ 'ಸಪ್ತ ಸಾಗರಾಲು ದಾಟಿ' ಸದ್ದು ಮಾಡ್ತಿದೆ.
ನಿರ್ದೇಶಕ ಹೇಮಂತ್ ರಾವ್ ಟ್ವೀಟ್ ಮಾಡಿ 'ಸಪ್ತ ಸಾಗರಾಲು ದಾಟಿ' ಮೊದಲ ದಿನ ಬ್ರೇಕ್‌ಈವನ್ ಆಗಿದೆ. 2ನೇ ದಿನ ಆಂಧ್ರದಲ್ಲಿ 10, ತೆಲಂಗಾಣದಲ್ಲಿ 16 ಶೋಗಳು ಸೇರಿಸಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನು ಸಿನಿಮಾ ನೋಡಿದ ತೆಲುಗು ಪ್ರೇಕ್ಷಕರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರಿವ್ಯೂ ಬರೆದುಕೊಳ್ಳುತ್ತಿದ್ದಾರೆ. ಸಿನಿಮಾ ನಿಧಾನವಾಗಿ ತೆಲುಗು ಪ್ರೇಕ್ಷಕರನ್ನು ಆಕ್ರಮಿಸಿಕೊಳ್ತಿದೆ.
ಸೆಪ್ಟೆಂಬರ್ 1ಕ್ಕೆ ಕರ್ನಾಟಕದಲ್ಲಿ ರಿಲೀಸ್ ಆಗಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗಾಗಲೇ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿದೆ. ಇದೀಗ ತೆಲುಗಿನಲ್ಲೂ ಸದ್ದು ಮಾಡ್ತಿದೆ. ಮುಂದೆ ತಮಿಳು, ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ.

ಅಕ್ಟೋಬರ್ 19ಕ್ಕೆ ಚಿತ್ರದ 2ನೇ ಭಾಗ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಮೊದಲ ಭಾಗ ಓಟಿಟಿಗೆ ಬರುತ್ತಾ ಎನ್ನುವ ಚರ್ಚೆ ನಡೀತಿದೆ. ಹೇಮಂತ್ ರಾವ್ ಬರವಣಿಗೆ, ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಕೆಮೆಸ್ಟ್ರಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.
ರಕ್ಷಿತ್, ರುಕ್ಮಿಣಿ ಜೊತೆಗೆ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್‌ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲ್‌ಕೃಷ್ಣ ದೇಶಪಾಂಡೆ ಚಿತ್ರದ ತಾರಾಗಣದಲ್ಲಿದ್ದಾರೆ. ಚರಣ್ ರಾಜ್ ಮ್ಯೂಸಿಕ್, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ತೆಲುಗು ಪ್ರೇಕ್ಷಕರು ಚಿತ್ರದ ಛಾಯಾಗ್ರಹಣ, ಸಂಗೀತ ಮೆಚ್ಚಿ ಮಾತನಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರವನ್ನು ತೆಲುಗಿನಲ್ಲಿ ವಿತರಣೆ ಮಾಡಿದೆ.


Click it and Unblock the Notifications











