ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಟಿ ರಕುಲ್ ಪ್ರೀತ್ ಸಿಂಗ್
ನಾಲ್ಕು ವರ್ಷಗಳ ಹಳೆಯ ಡ್ರಗ್ಸ್ ಪ್ರಕರಣ ಸಂಬಂಧ ನಟಿ ರಕುಲ್ ಪ್ರೀತ್ ಸಿಂಗ್ ಇಂದು (ಸೆಪ್ಟಂಬರ್ 03) ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಹೈದರಾಬಾದ್ ನ ಇಡಿ (ಜಾರಿ ನಿರ್ದೇಶನಾಲಯ) ಕಚೇರಿಗೆ ಆಗಮಿಸಿದ ರಕುಲ್ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ತೆಲುಗಿನ ಕೆಲವು ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಅದರಂತೆ ಇಂದು (ಸೆಪ್ಟಂಬರ್ 03) ರಕುಲ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಈಗಾಗಲೇ ನಿರ್ದೇಶಕ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಕೌರ್ ಇಬ್ಬರು ವಿಚಾರಣೆ ಎದುರಿಸಿದ್ದಾರೆ. ಇಂದು ರಕುಲ್ ಸರದಿ.
ನಾಲ್ಕು ವರ್ಷಗಳ ಹಿಂದೆ 2017ರಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗವನ್ನು ತಲ್ಲಣಗೊಳಿಸಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ಪುರಿ ಜಗನ್ನಾಥ್, ಚಾರ್ಮಿ ಕೌರ್, ಮುಮೈತ್ ಖಾನ್ ಸೇರಿದಂತೆ ಒಟ್ಟು 13 ಜನರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಸಮನ್ಸ್ ಜಾರಿ ಮಾಡಿತ್ತು.

ಆಗಸ್ಟ್ 31ರಂದು ಪುರಿ ಜಗನ್ನಾಥ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ಪುರಿ ಜಗನ್ನಾಥ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಸುಮಾರು ಹತ್ತು ಗಂಟೆಗಳ ಕಾಲ ಇಡಿ ಅಧಿಕಾರಿಗಳಿಂದ ಪ್ರಶ್ನೆಗಳನ್ನು ಎದುರಿಸಿದರು. ಸೆಪ್ಟಂಬರ್ 2ರಂದು ನಟಿ, ನಿರ್ಮಾಪಕಿ ಚಾರ್ಮಿ ಕೌರ್ ಇಡಿ ಅಧಿಕಾರಿಗಳ ಮುಂದಿ ಹಾಜರಾಗಿದ್ದರು. ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಇನ್ನು ರಾಣಾ ದಗ್ಗುಬಾಟಿ, ಮುಮೈತ್ ಖಾನ್, ರವಿತೇಜ ಸೇರಿದಂತೆ ಅನೇಕ ಮಂದಿಯ ವಿಚಾರಣೆ ಬಾಕಿ ಇದೆ. 2017ರ ಡ್ರಗ್ಸ್ ಪ್ರಕರಣ ಸಂಬಂಧ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಟಾಲಿವುಡ್‌ನ 12 ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆಯೂ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿತ್ತು. ಮನಿ ಲಾಂಡರಿಂಗ್ ಸಂಬಂಧಿಸಿದಂತೆ ಈಗ 13 ಸೆಲೆಬ್ರಿಟಿಗಳನ್ನು ಪ್ರಶ್ನೆ ಮಾಡಲಾಗುತ್ತಿದೆ.
ಅಂದಹಾಗೆ ನಟಿ ರಕುಲ್ ಪ್ರೀತ್ ಸಿಂಗ್ ಕಳೆದ ವರ್ಷ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣದ ವೇಳೆ ಎನ್ ಸಿ ಬಿ ವಿಚಾರಣೆ ಎದುರಿಸಿದ್ದರು. ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿದಂತೆ ಡ್ರಗ್ಸ್ ತನಿಖೆ ವೇಳೆ ರಕುಲ್ ಹೆಸರು ಕೇಳಿಬಂದಿದ್ದು, ಮುಂಬೈ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
ನಟಿ ರಕುಲ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾಗಳ ಜೊತಗೆ ರಕುಲ್ ಹಿಂದಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ತಮಿಳಿನ ಎರಡು ಸಿನಿಮಾದ ಜೊತೆಗೆ ಹಿಂದಿಯಲ್ಲಿ ಥ್ಯಾಂಕ್ ಗಾಡ್, ಮೇ ಡೇ, ಡಾಕ್ಟರ್ ಜಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಸೆಪ್ಟಂಬರ್ 2ರಂದು ವಿಚಾರಣೆ ಎದುರಿಸಿದ ಚಾರ್ಮಿ ಕೌರ್ ಬಳಿಕ ಮಾಧ್ಯಮದ ಜೊತೆ ಮಾತನಾಡಿ, ''ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರು ಮತ್ತೆ ಯಾವಾಗ ಕರೆದರೂ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವ ಕಾರಣ ಹೆಚ್ಚಿಗೆ ಏನೂ ಹೇಳಲಾಗುವುದಿಲ್ಲ'' ಎಂದು ಹೇಳಿದ್ದರು.


Click it and Unblock the Notifications











