ಯಶ್ ಅಭಿಮಾನಿಗಳ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ ರಾಮ್ ಚರಣ್ ಫ್ಯಾನ್ಸ್ ..!
ಅಭಿಮಾನ ಅಂದರೆ ಏನು ? ತಮ್ಮ ನೆಚ್ಚಿನ ನಾಯಕ ಅಥವಾ ನಾಯಕಿಯ ಚಿತ್ರ ಬಿಡುಗಡೆಯಾದಾಗ ಚಿತ್ರಮಂದಿರದ ಮುಂದೆ ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟ್ ನಿರ್ಮಿಸುವುದು, ಥಿಯೇಟರ್ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು, ಅವರ ಹುಟ್ಟು ಹಬ್ಬವನ್ನು ತಮ್ಮದೇ ಹುಟ್ಟುಹಬ್ಬದಂತೆ ಆಚರಿಸುವುದು, ಜೈಕಾರ ಮೊಳಗಿಸುವುದು. ಬರೀ ಕನ್ನಡ ಮಾತ್ರವಲ್ಲ ಭಾರತದ ಬೇರೆ ಬೇರೆ ಭಾಗಗಳಲ್ಲಿ ತೀರಾ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಇದು.
ಆದರೆ ಈಗೀಗ ಈ ಅಭಿಮಾನ ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ. ಅಭಿಮಾನದ ಹೆಸರಿನಲ್ಲಿ ದಾಖಲೆಗಳನ್ನು ನಿರ್ಮಾಣ ಮಾಡುವುದು ಹಿಂದೆ ಮಾಡಲಾದ ದಾಖಲೆಗಳನ್ನು ಮುರಿಯುವುದು ಈಗ ಟ್ರೆಂಡ್ ಆಗಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಈಗ ರಾಮ್ ಚರಣ್ ತೇಜಾ ಅವರ ಅಭಿಮಾನಿಗಳು ತಮ್ಮ ಅಭಿಮಾನದ ಪ್ರದರ್ಶನ ಮಾಡಿದ್ದಾರೆ. ದಾಖಲೆಯನ್ನು ಬರೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ.

ಹೌದು. ಗೇಮ್ ಚೇಂಜರ್ ಎಂಬ ಚಿತ್ರದಲ್ಲಿ ರಾಮ್ ಚರಣ್ ತೇಜಾ ನಟಿಸಿರುವ ವಿಚಾರ ನಿಮಗೆ ಗೊತ್ತೇ ಇರಬೇಕು. ಇನ್ನೇನು ಈ ಜನವರಿಯಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಶಂಕರ್ ಈ ಚಿತ್ರವನ್ನು ನಿರ್ದೇಶಿಸಿರುವ ಹಿನ್ನೆಲೆ ಚಿತ್ರದ ಮೇಲೆ ಆರಂಭದಿಂದಲೂ ನಿರೀಕ್ಷೆ ಇದೆ. ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ವಿಶ್ವಾಸ ಕೂಡ ತೆಲುಗು ಚಿತ್ರರಂಗಕ್ಕಿದೆ. ರಾಮ್ ಚರಣ್ ತೇಜಾ ಅವರ ಅಭಿಮಾನಿಗಳಿಗೂ ಚಿತ್ರದ ಮೇಲೆ ಭರವಸೆ ಇದೆ. ಹೀಗಾಗಿಯೇ ಚಿತ್ರದ ಬಿಡುಗಡೆಗೆ ಮುನ್ನ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡುತ್ತಿರುವ ರಾಮ್ ಚರಣ್ ತೇಜಾ ಅವರ ಅಭಿಮಾನಿಗಳು ಈಗ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ. ಕಟೌಟ್‌ನಲ್ಲಿ ಇತಿಹಾಸವನ್ನು ನಿರ್ಮಿಸಿದ್ದಾರೆ.
ಹೌದು, ಹೆಚ್ಚೇನಿಲ್ಲ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅವರ 236 ಅಡಿ ಎತ್ತರದ ಕಟೌಟ್ ನಿಲ್ಲಿಸಿ ರಣಕೇಕೆ ಹಾಕಿದ್ದರು. 5700 ಕೆಜಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಸೂರ್ಯ ಅವರ ಅಭಿಮಾನಿಗಳು 215 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಬರೆದಿದ್ದರು. ಇನ್ನು ಕಳೆದ ವರ್ಷ ಪ್ರಭಾಸ್ ಅಭಿಮಾನಿಗಳು 230 ಅಡಿ ಕಟೌಟ್ ನಿಲ್ಲಿಸಿದ್ದು ಕೂಡ ದಾಖಲೆಯ ಪುಟಗಳಿಗೆ ಸೇರಿಕೊಂಡಿತ್ತು. ಇದೀಗ ರಾಮ್‌ಚರಣ್ ಅಭಿಮಾನಿಗಳು ಈ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ. ಜನವರಿ ಹತ್ತರಂದು ಗೇಮ್ ಚೇಂಜರ್ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆ 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್‌ನಲ್ಲಿ ರಾಮ್‌ಚರಣ್ ಕಟೌಟ್ ಎದ್ದು ನಿಂತಿದೆ. ಭಾರತದ ಅತೀ ದೊಡ್ಡ ಕಟೌಟ್ ಎನ್ನುವ ದಾಖಲೆಯನ್ನು ಬರೆದಿದೆ. ಇನ್ನುಳಿದಂತೆ 'ಗೇಮ್‌ಚೇಂಜರ್' ಸಿನಿಮಾ ಜನವರಿ 10ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಕೈರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಅಂಜಲಿ, ಸುನೀಲ್, ಎಸ್. ಜೆ ಸೂರ್ಯ, ಸಮುದ್ರ ಖನಿ, ನಾಸರ್, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ IAS ಆಫೀಸರ್ ರಾಮ್ ನಂದನ್ ಹಾಗೂ ಅವರ ತಂದೆ ಅಪ್ಪಣ್ಣ ಪಾತ್ರದಲ್ಲಿ ರಾಮ್‌ಚರಣ್ ಅಭಿನಯಿಸಿದ್ದಾರೆ.


Click it and Unblock the Notifications











