ನಾಗರೀಕ ಪ್ರಜ್ಞೆ ಮರೆತ ಅಭಿಮಾನಿಗಳು ; 2 ವರ್ಷದ ಮಗಳ ಜೊತೆ ದೊಂಬಿಯಲ್ಲಿ ನಡುಗಿ ಹೋದ ರಾಮ್ ಚರಣ್-ವ್ಯಾಪಕ ಆಕ್ರೋಶ
ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ.
ಬಾಡಿಗಾರ್ಡ್‌ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುವ ಪ್ರಯತ್ನವನ್ನು ಮಾಡಿದರೂ ಕೂಡ ಪ್ರಯೋಜನವಾಗುತ್ತಿಲ್ಲ. ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂತೆ ಜನ ಮುತ್ತಿಕೊಳ್ಳುತ್ತಾರೆ. ಅಭಿಮಾನದ ಹುಚ್ಚಿನಲ್ಲಿ ನಾಗರೀಕ ಪ್ರಜ್ಞೆಯನ್ನು ಮರೆಯುತ್ತಾರೆ. ಇದಕ್ಕೆ ರಾಮ್ ಚರಣ್ ಅನುಭವಿಸಿದ ನರಕಯಾತನೆ ಸದ್ಯದ ಉದಾಹರಣೆ.

ಹೌದು, ರಾಮ್ ಚರಣ್ ತೇಜಾ ಅವರ ಪತ್ನಿ ಉಪಾಸನಾ ನಿನ್ನೆ (ಜನವರಿ 30 ) ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಹಿನ್ನೆಲೆ ಸಂಭ್ರಮದ ಅಲೆಯಲ್ಲಿರುವ ರಾಮ್ ಚರಣ್ ತಮ್ಮ ಎರಡು ವರ್ಷದ ಮಗಳು ಕ್ಲಿನ್ ಕಾರಾಳನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದರು.
ಆದರೆ.. ಅದ್ಹೇಗೋ ರಾಮ್ ಚರಣ್ ಆಸ್ಪತ್ರೆಗೆ ಬರುವ ವಿಷಯ ಅವರ ಅಭಿಮಾನಿಗಳಿಗೆ ತಿಳಿಯಿತು. ತಂದೆಯಾಗಿದ್ದು ರಾಮ್ ಚರಣ್ ಅವರಾದರೂ ತಮ್ಮ ಮನೆಯಲ್ಲಿಯೇ ಸಂಭ್ರಮದ ವಾತಾವರಣ ಮನೆ ಮಾಡಿದೆ ಎಂಬಂತೆ ಆಸ್ಪತ್ರೆಗೆ ಅಭಿಮಾನಿಗಳೆಲ್ಲರೂ ದಾಂಗುಡಿ ಇಟ್ಟರು.
ಎರಡು ವರ್ಷದ ತಮ್ಮ ಮಗಳನ್ನು ಎತ್ತಿಕೊಂಡು ರಾಮ್ ಚರಣ್ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಕಿರಚಾಡುತ್ತಾ ಅಭಿಮಾನಿಗಳು ರಾಮ್ ಚರಣ್ ಮೇಲೆ ಮುಗಿ ಬಿದ್ದರು. ನೂರಾರು ಮೊಬೈಲ್ ಕ್ಯಾಮರಾ ಫ್ಲಾಶ್‌ಗಳಿಂದ.. ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಕಂಗಾಲಾದ ರಾಮ್ ಚರಣ್ ಒಬ್ಬ ತಂದೆಯಾಗಿ ಆ ಗುಂಪಿನಿಂದ ತಮ್ಮ ಮಗಳನ್ನು ಪಾರು ಮಾಡಲು ಹರಸಾಹಸ ಪಟ್ಟರು.
ದಾರಿ ಬಿಡಿ ಎಂದು ತಮ್ಮ ಅಭಿಮಾನಿಗಳಲ್ಲಿ ರಾಮ್ ಚರಣ್ ಪದೇ ಪದೇ ವಿನಂತಿ ಮಾಡಿಕೊಂಡರು ಕೂಡ ಇವರ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಾಯಕನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ಕೂಡ ಕೊಡಲಿಲ್ಲ. ಸುತ್ತ ಮುತ್ತ ಬಾಡಿಗಾರ್ಡ್‌ಗಳಿದ್ದರೂ ಕೂಡ ಪ್ರಯೋಜನವಾಗಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ರಾಮ್ ಚರಣ್ ಕೊನೆಗೆ ಕಿರುಚಾಡಿದರು. ರಾಮ್ ಚರಣ್ ಅವರ ಮುಖದಲ್ಲಿ ಕೋಪ..ಆತಂಕ.. ಅಸಮಾಧಾನ.. ಎದ್ದು ಕಾಣುತ್ತಿತ್ತು.
ಸದ್ಯ ರಾಮ್ ಚರಣ್ ಆಸ್ಪತ್ರೆ ಬಳಿ ತಮ್ಮ ಮಗಳ ಜೊತೆ ಪರದಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜನಸಾಮಾನ್ಯರಲ್ಲಿ ಆಕ್ರೋಶವನ್ನು ಹೆಚ್ಚಿಸಿವೆ. ಹಲವರು ನಾಗರೀಕ ಪ್ರಜ್ಞೆ ಮರೆತ ಈ ಅಭಿಮಾನಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ನಾಗರಿಕ ಪ್ರಜ್ಞೆ ಮತ್ತು ಅಂಧಾಭಿಮಾನದ ಕುರಿತು ಚರ್ಚೆ ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳಿಗೂ ವ್ಯೆಯಕ್ತಿಕ ಬದುಕು ಇರುತ್ತೆ, ಅವರಲ್ಲಿಯೂ ಕೂಡ ಭಾವನೆಗಳಿರುತ್ತವೆ, ಯಾಕೆ ಅವರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡುತ್ತೀರಾ ಎಂದು ಹಲವರು ರಾಮ್ ಚರಣ್ ಅವರ ಅಭಿಮಾನಿಗಳನ್ನು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಅಭಿಮಾನ ಇರಬೇಕು ಹುಚ್ಚು ಅಭಿಮಾನ ಇರಬಾರದು ಎನ್ನುತ್ತಿರುವ ಹಲವರು ಕೊನೆ ಪಕ್ಷ ಆ ಎರಡು ವರ್ಷದ ಮಗಳಿಗೆ ಉಸಿರುಗಟ್ಟಿದಂತಾಗುತ್ತೆ ಎನ್ನುವ ಪರಿಜ್ಞಾನ ಕೂಡ ಇಲ್ಲದಂತಾಯ್ತಲ್ಲ ಎಂದು ಕೂಡ ಹಲವರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಇನ್ನುಳಿದಂತೆ ಡಿಸೆಂಬರ್ 2011 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಾಮ್ ಚರಣ್ ಮತ್ತು ಉಪಾಸನಾ ಜೂನ್ 212ರಲ್ಲಿ ಮದುವೆಯಾದರು.2023ರಲ್ಲಿ ತಮ್ಮ ಮೊದಲ ಮಗಳನ್ನು ಬರಮಾಡಿಕೊಂಡಿದ್ದ ರಾಮ್ ಚರಣ್ ಮತ್ತು ಉಪಾಸನಾ ಇದೀಗ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಮ್ಮ ಸಂಭ್ರಮವನ್ನು ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ರಾಮ್ ಚರಣ್ ನಮಗೆ ಅವಳಿ ಮಕ್ಕಳು ಜನಿಸಿದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಈಗ ನನಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾನೆ ಎಂದು ಹೇಳಿದ್ದರು. ಇದನ್ನು ಆಶೀರ್ವಾದವೆಂದು ಭಾವಿಸುತ್ತೇವೆ. ನಮ್ಮ ಜೀವನದಲ್ಲಿ ಮಹಿಳೆಯರೇ ಪ್ರಮುಖ ಶಕ್ತಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.


Click it and Unblock the Notifications











