'ಧುರಂಧರ್' ಬಗ್ಗೆ ಸುಳ್ಳು ಹೇಳಿ ತಗ್ಲಾಕಿಕೊಂಡ ರಾಮ್‌ಚರಣ್; ವಿಡಿಯೋ ಫುಲ್ ವೈರಲ್
ಆದಿತ್ಯಧರ್ ನಿರ್ದೇಶನದ 'ಧುರಂಧರ್' ಸರಣಿ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ ತಾರೆಯರು ಕೂಡ ಚಿತ್ರತಂಡದ ಪ್ರಯತ್ನಕ್ಕೆ ಬಹುಪರಾಕ್ ಎಂದಿದ್ದರು. ಆದರೆ ತೆಲುಗು ನಟ ರಾಮ್‌ಚರಣ್ ಮಾತ್ರ ಸುಳ್ಳು ಹೇಳಿ ತಗ್ಲಾಕಿಕೊಂಡಿದ್ದಾರೆ ಎಂದು ಚರ್ಚೆ ನಡೀತಿದೆ.
ಮಾರ್ಚ್ 18ಕ್ಕೆ 'ಧುರಂಧರ್-2' ಸಿನಿಾ ತೆರೆಗೆ ಬಂದಿತ್ತು. ಕಳೆದ ವಾರ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ದೊಡ್ಡದಾಗಿ ಸಿನಿಮಾ ಪ್ರೇಕ್ಷಕರನ್ನು ತಲುಪಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದವರು ಕೂಡ ಮತ್ತೆ ಓಟಿಟಿಯಲ್ಲಿ ನೋಡುತ್ತಿದ್ದಾರೆ. ಕಳೆದ ವಾರ ನಾನು ಓಟಿಟಿಯಲ್ಲಿ ಸಿನಿಮಾ ನೋಡಿದೆ. ಅದ್ಭುತ ಸಿನಿಮಾ ಎಂದು ರಾಮ್‌ಚರಣ್ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಕೆಲವರು ಕೇಳುತ್ತಿದ್ದಾರೆ.

ಕಳೆದ ವಾರ ಓಟಿಟಿಯಲ್ಲಿ 'ಧುರಂಧರ್' ಸಿನಿಮಾ ನೋಡ್ದೆ ಎಂದು ರಾಮ್‌ಚರಣ್ ಹೇಳುವುದು ಸರಿ. ಆದರೆ ಮಾರ್ಚ್ 18ರಂದು ಸಿನಿಮಾ ಬಿಡುಗಡೆಯಾಗಿತ್ತು. ಮಾರ್ಚ್ 20ರಂದು ಟ್ವೀಟ್ ಮಾಡಿ ಸಿನಿಮಾ ಅದ್ಭುತ ಎಂದು ಇದೇ ರಾಮ್‌ಚರಣ್ ಕೊಂಡಾಡಿದ್ದರು. ಅಂದ್ರೆ ಆಗ ಸಿನಿಮಾ ನೋಡದೇ ಸುಮ್ಮನೆ ಟ್ವೀಟ್ ಮಾಡಿದ್ರಾ? ಸುಳ್ಳು ಹೇಳಿದ್ರಾ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗ್ತಿದೆ.
'ಪೆದ್ದಿ' ಸಕ್ಸಸ್ ಸಂಭ್ರಮದಲ್ಲಿ ರಾಮ್‌ಚರಣ್ ತೇಲುತ್ತಿದ್ದಾರೆ. ಇತ್ತೀಚೆಗೆ Republic Summit ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ 'ಪೆದ್ದಿ' ಗೆಲುವಿನ ಜೊತೆಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ರಾಷ್ಟ್ರೀಯತೆ ವಿಚಾರ ಹೆಚ್ಚಾಗುತ್ತಿದೆ ಎನ್ನುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ. "ಕಳೆದ ವಾರ ನಾನು ಓಟಿಟಿಯಲ್ಲಿ 'ಧುರಂಧರ್' ಸಿನಿಮಾ ನೋಡ್ದೆ. ಬಹಳ ಅದ್ಭುತ ಸಿನಿಮಾ. ಇಂತಹ ಸಿನಿಮಾಗಳು ಮತ್ತಷ್ಟು ಬರಬೇಕು. ದೇಶ ಮೊದಲು. ಸಿನಿಮಾ ಅಷ್ಟು ಕೋಟಿ ಕಲೆಕ್ಷನ್ ಮಾಡಿದೆ ಅಂದ್ರೆ ಜನ ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಅರ್ಥ" ಎಂದು ಚಿರು ಪುತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಚರಣ್ ಹೇಳಿಕೆ ವೈರಲ್ ಆಗ್ತಿದ್ದಂತೆ ಅಂದು ಅವರು ಮಾಡಿದ್ದ ಟ್ವೀಟ್ ಅನ್ನು ಕೆಲವರು ಓದುತ್ತಿದ್ದಾರೆ. "ಧುರಂಧರ್-2 ಬಹಳ ರಾ, ಗ್ರಿಪ್ಪಿಂಗ್ ಹಾಗೂ ಇಂಪ್ಯಾಕ್ಟ್‌ಫುಲ್ ಸಿನಿಮಾ..ಆದಿತ್ಯಾಧರ್ ಎಲ್ಲಾ ಎಮೋಷನ್ ಅನ್ನು ಒಟ್ಟಿಗೆ ಬಹಳ ಚೆನ್ನಾಗಿ ತೆರೆಗೆ ತಂದಿದ್ದಾರೆ. ಅವರ ಶ್ರಮ ಮೆಚ್ಚಲೇಬೇಕು. ರಣ್ವೀರ್ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ. ಆ ಇಂಟೆನ್ಸ್ ಸಿನಿಮಾ ಉದ್ದಕ್ಕೂ ಸೆಳೆಯುತ್ತದೆ. ಮಾಧವನ್ ಸರ್, ಸಂಜಯ್ ದತ್ ಸರ್, ಅರ್ಜುನ್ ರಾಮ್‌ಪಾಲ್ ಸರ್, ಸಾರಾ ಅರ್ಜುನ್ ಎಲ್ಲರ ನಟನೆ ಸೊಗಸಾಗಿದೆ. ಶಾಶ್ವತ್ ಸಚ್ದೇವ್ ಸಂಗೀತ ಚಿತ್ರಕ್ಕೆ ಬಲ ತುಂಬಿದೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದರು.
ಅಲ್ಲ ಕಳೆದ ವಾರ ಓಟಿಟಿಯಲ್ಲಿ ಸಿನಿಮಾ ನೋಡಿದ್ರೆ, 3 ತಿಂಗಳ ಹಿಂದೆ ರಿವ್ಯೂ ಕೊಡೊಕೆ ಹೇಗೆ ಸಾಧ್ಯ. ಅಂದ್ರೆ ಅವತ್ತು ಟ್ವೀಟ್ ಮಾಡಿದ್ದು ಸುಳ್ಳಾ? ಸಿನಿಮಾ ನೋಡದೇ ಅಭಿನಂದನೆ ತಿಳಿಸಿ ಪೋಸ್ಟ್ ಮಾಡಿದ್ರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನು ಯಾಕೆ ಇಷ್ಟು ದೊಡ್ಡ ವಿವಾದ ಮಾಡ್ತೀರಾ? ರಾಮ್‌ಚರಣ್ ಕಳೆದ ವಾರ ಓಟಿಟಿಯಲ್ಲಿ ಸಿನಿಮಾ ನೋಡ್ದೆ ಎಂದು ಹೇಳಿದ್ದಾರೆ. 3 ತಿಂಗಳ ಹಿಂದೆ ಚಿತ್ರಮಂದಿರದಲ್ಲಿ ನೋಡಲಿಲ್ಲ ಎಂದು ಹೇಳಿಲ್ಲ ಅಲ್ಲವೇ? ಓಟಿಟಿಗೆ ಬಂದಮೇಲೆ ಮತ್ತೊಮ್ಮೆ ಸಿನಿಮಾ ನೋಡಿರಬಹುದು. ಅದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ ಅನ್ನಿಸುತ್ತೆ. ಇದನ್ನು ಟ್ರೋಲ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ.


Click it and Unblock the Notifications