ಜೋಡಿಯಾಗಿ ನಟಿಸಿದ್ದ ಚೆಲುವೆ ಜೊತೆಗೆ ಐಟಂ ಸಾಂಗ್‌ನಲ್ಲಿ 'ಪೆದ್ದಿ' ರಾಮ್‌ಚರಣ್ ಸ್ಟೆಪ್ಸ್
ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಬುಚ್ಚಿಬಾಬು ನಿರ್ದೇಶನದ ಈ ಪೀರಿಯಡ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದ ಸ್ಪೆಷಲ್ ಸಾಂಗ್ ಬಗ್ಗೆ ಭಾರೀ ಚರ್ಚೆ ನಡೀತಿದೆ. ಎಲ್ಲಾ ಊಹಾಪೋಹಕ್ಕೆ ಈಗ ತೆರೆ ಬಿದ್ದಿದೆ ಎಂದು ವರದಿಯಾಗಿದೆ.
ತೆಲುಗು ಕಮರ್ಷಿಯಲ್ ಸಿನಿಮಾಗಳಲ್ಲಿ ಬಿಂದಾಸ್ ಡ್ಯಾನ್ಸಿಂಗ್ ನಂಬರ್ ಬೇಕು ಎಂದು ತೆಲುಗು ಪ್ರೇಕ್ಷಕರು ಬಯಸುತ್ತಾರೆ. ಇದು ಚಿತ್ರದ ಗೆಲುವಿಗೂ ಪ್ಲಸ್ ಆಗುತ್ತದೆ ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಅದೇ ಕಾರಣಕ್ಕೆ ಇಂತಹ ಸಾಂಗ್ಸ್ ಡಿಸೈನ್ ಮಾಡ್ತಾರೆ. ಎ. ಆರ್ ರಹಮಾನ್ 'ಪೆದ್ದಿ' ಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ. ಈಗಾಗಲೇ 2 ಸಾಂಗ್ ಹಿಟ್ ಆಗಿದೆ. ಇನ್ನಿಳಿದ ಸಾಂಗ್ಸ್ ಬಗ್ಗೆ ನಿರೀಕ್ಷೆಯಿದ. ಡ್ಯಾನ್ಸ್ ನಂಬರ್‌ಗಳಿಗೆ ಟ್ಯೂನ್ ಹಾಕುವುದರಲ್ಲಿ ರಹಮಾನ್ ಸಿದ್ಧಹಸ್ತರು. ಇದೀಗ ರಾಮ್‌ಚರಣ್ ಚಿತ್ರಕ್ಕಾಗಿ ಅಂಥದ್ದೇ ಸಾಂಗ್ ಕಂಪೋಸ್ ಮಾಡಿದ್ದು ಚಿತ್ರೀಕರಣ ನಡೀತಿದೆ ಎನ್ನಲಾಗ್ತಿದೆ.

'ಪೆದ್ದಿ' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಮೃಣಾಲ್ ಠಾಕೂರ್ ಹೆಜ್ಜೆ ಹಾಕ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಬಳಿಕ ಸಂಯುಕ್ತಾ ಮೆನನ್ ಹೆಸರು ಕೇಳಿಬಂದಿತ್ತು. ಮಾನಸಾ ವಾರಣಾಸಿ ಎಂಬ ಮತ್ತೊಂದು ಚೆಲುವೆ ಹೆಸರು ಚರ್ಚೆಗೆ ಬಂದಿತ್ತು. ಅಂತಿಮವಾಗಿ ಶ್ರುತಿ ಹಾಸನ್ ಚಿತ್ರದ ಹಾಡಿಗೆ ಕುಣಿಯುತ್ತಿದ್ದಾರೆ ಎನ್ನಲಾಗ್ತಿದೆ. ಸದ್ದಿಲ್ಲದೇ ಚಿತ್ರೀಕರಣ ಕೂಡ ಆರಂಭಿಸಿದ್ದಾರೆ ಎಂದು ಚರ್ಚೆ ನಡೀತಿದೆ.
ಮಹೇಶ್ ಬಾಬು ನಟನೆಯ 'ಆಗಡು' ಚಿತ್ರದಲ್ಲಿ ಶ್ರುತಿ ಹಾಸನ್ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ಸಿಕ್ಕಾಪಟ್ಟೆ ಬಿಂದಾಸ್ ಆಗಿ ಕುಣಿದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. 'ತೆವರ್' ಎಂಬ ತಮಿಳು ಚಿತ್ರದ ಹಾಡಿಗೂ ಕುಣಿದಿದ್ದರು. ಇದೀಗ 'ಪೆದ್ದಿ' ರಾಮ್‌ಚರಣ್ ಜೊತೆ ಡ್ಯಾನ್ಸ್ ಮಾಡುತ್ತಿದ್ದಾರೆ. 'ಎವಡು' ಎಂಬ ಚಿತ್ರದಲ್ಲಿ ಇಬ್ಬರೂ ನಾಯಕ-ನಾಯಕಿ ಆಗಿ ನಟಿಸಿದ್ದರು.

ಈಗಾಗಲೇ ಸೆಟ್ ಹಾಕಿ ಸಾಂಗ್ ಶೂಟ್ ಮಾಡುವ ತಯಾರಿ ಆರಂಭವಾಗಿದೆ. ರಾಮ್‌ಚರಣ್ ಜೊತೆ ಕಮಲ್ ಪುತ್ರಿ ಶ್ರುತಿ ಡ್ಯಾನ್ಸ್ ಮಾಡುವುದು ಬಹುತೇಕ ಖಚಿತ ಎಂದು ಫಿಲ್ಮ್ ನಗರ್‌ನಲ್ಲಿ ಸುದ್ದಿ ಆಗ್ತಿದೆ. ರಾಮ್‌ಚರಣ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಒಂದು ಗೆಲುವು ಅನಿವಾರ್ಯ ಎನ್ನುವಂತಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರವೇ 'ಪೆದ್ದಿ' ತೆರೆಗೆ ಬರಬೇಕಿತ್ತು. ಶೂಟಿಂಗ್ ತಡವಾಗಿದ್ದರಿಂದ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಜೂನ್‌ನಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಬರೀ ಪೋಸ್ಟರ್ ಹಾಗೂ ಟೀಸರ್‌ಗಳಿಂದ ಸಿನಿಮಾ ಗಮನ ಸೆಳೆದಿದೆ.
80-90ರ ದಶಕದ ಹಳ್ಳಿ ಹಿನ್ನೆಲೆಯಲ್ಲಿ 'ಪೆದ್ದಿ' ಸಿನಿಮಾ ಕಥೆ ಕಟ್ಟಿಕೊಡಲಾಗ್ತಿದೆ. ಅವತ್ತಿನ ಕಾಲಕ್ಕೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದ ರಗಡ್ ಹೈದ ಪೆದ್ದಿ ಎಂಬುವವನು ಜೀವನ ಕಥೆ ಇದು. ಕ್ರಿಕೆಟ್ ಆಟ ಆತನ ಬಾಳಿನಲ್ಲಿ ಹೇಗೆಲ್ಲಾ ತಿರುವು ಕೊಡುತ್ತದೆ ಮುಂದೆ ಆತ ಕುಸ್ತಿ ಪೈಲ್ವಾನ್ ಆಗುವುದು ಹೇಗೆ? ಎನ್ನುವುದನ್ನು ಹೇಳಲಾಗ್ತಿದೆ. 'ಉಪ್ಪೆನ' ಬಳಿಕ ಬುಚ್ಚಿಬಾಬು ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ಹಾಗಾಗಿ 'ಪೆದ್ದಿ' ಚಿತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಕುಸ್ತಿ ಪೈಲ್ವಾನ್ ಪೆದ್ದಿ ಗುರುವಿನ ಪಾತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಜಗಪತಿ ಬಾಬು ಮಿಂಚಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಬಹಳ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ.


Click it and Unblock the Notifications