ಮರು ಬಿಡುಗಡೆಯಲ್ಲಿ ಆರ್‌ಆರ್‌ಆರ್ ಕಲೆಕ್ಷನ್ ಅನ್ನೇ ಹಿಂದಿಕ್ಕಿದ ರಾಮ್ ಚರಣ್ ನಟನೆಯ 13 ವರ್ಷದ ಹಳೇ ಚಿತ್ರ!
ಸದ್ಯ ಟಾಲಿವುಡ್ ಚಿತ್ರರಂಗದಲ್ಲಿ ಈ ಹಿಂದೆ ತೆರೆಕಂಡು ಬಿಗ್ಗೆಸ್ಟ್ ಸೂಪರ್ ಹಿಟ್ ಆಗಿದ್ದ ಚಿತ್ರಗಳ ಮರುಬಿಡುಗಡೆ ಮಾಡುವ ಟ್ರೆಂಡ್ ಶುರುವಾಗಿದೆ. ನಟರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿನಯದ ಹಿಂದಿನ ಸೂಪರ್ ಹಿಟ್ ಚಿತ್ರಗಳನ್ನು ಕೆಲ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಿ ಸಂಭ್ರಮಿಸಲಾಗುತ್ತಿತ್ತು.
ಈ ಟ್ರೆಂಡ್ ಇದೀಗ ದೊಡ್ಡ ಮಟ್ಟಕ್ಕೆ ತಲುಪಿದ್ದು, ನೂತನ ಚಿತ್ರ ಬಿಡುಗಡೆಯಾಗುವ ಮಟ್ಟಿಗೆ ಇನ್ನೂರಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರಗಳ ಮರುಬಿಡುಗಡೆ ಮಾಡಲಾಗುತ್ತಿದೆ. ಕಳೆದ ವರ್ಷ ಮಹೇಶ್ ಬಾಬು ಅಭಿನಯದ ಪೋಕಿರಿ, ಚಿರಂಜೀವಿ ಅಭಿನಯದ ಘರಾನಾ ಮೊಗಡು, ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಹಾಗೂ ನಂದಮೂರಿ ಬಾಲಕೃಷ್ಣ ಅಭಿನಯದ ಚನ್ನಕೇಶವರೆಡ್ಡಿ ಚಿತ್ರಗಳ ಅಪ್ ಡೇಟೆಡ್ ವರ್ಷನ್ ಮರು ಬಿಡುಗಡೆಯಾಗಿದ್ದವು.

ಹೀಗೆ ಮರುಬಿಡುಗಡೆಗೊಂಡ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ ಕಾರಣ ವಿತರಕರು ಮತ್ತಷ್ಟು ಚಿತ್ರಗಳನ್ನು ಮರುಬಿಡುಗಡೆ ಮಾಡಲು ತಯಾರಾಗಿದ್ದಾರೆ. ಈ ಪೈಕಿ ಕೆಲ ಚಿತ್ರಗಳ ಮರುಬಿಡುಗಡೆ ಒಳ್ಳೆಯ ಕಲೆಕ್ಷನ್ ತಂದುಕೊಟ್ಟರೆ, ಕೆಲ ಚಿತ್ರಗಳು ಮಕ್ಕಾಡೆ ಮಲಗಿದವು. ಹೌದು, ಜೂನಿಯರ್ ಎನ್‌ಟಿಆರ್ ನಟನೆಯ ಆಂಧ್ರವಾಲಾ ಹಾಗೂ ನಿತಿನ್ ನಟನೆಯ ಇಷ್ಕ್ ಚಿತ್ರಗಳ ಮರುಬಿಡುಗಡೆಗೆ ಜನ ಒಳ್ಳೆ ರೀತಿ ಸ್ಪಂದಿಸಿಲ್ಲ. ಆದರೆ 13 ವರ್ಷಗಳ ಹಿಂದೆ ಬಿಡುಗಡೆಯಾಗಿ ಹೀನಾಯ ಸೋಲು ಕಂಡಿದ್ದ ರಾಮ್ ಚರಣ್ ನಟನೆಯ ಆರೆಂಜ್ ಚಿತ್ರದ ರಿ ರಿಲೀಸ್‌ಗೆ ಮಾತ್ರ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೌದು, 2010ರಲ್ಲಿ ಬಿಡುಗಡೆಗೊಂಡಿದ್ದ ರಾಮ್ ಚರಣ್ ನಟನೆಯ ಆರೆಂಜ್ ಸಿನಿಮಾವನ್ನು ಮಾರ್ಚ್ 25ರಂದು ಮರು ಬಿಡುಗಡೆ ಮಾಡಲಾಗಿದೆ. ಈ ಚಿತ್ರ 3 ದಿನಗಳಲ್ಲಿ 2.12 ಕೋಟಿ ರೂಪಾಯಿ ಗಳಿಕೆ ಮಾಡಿ ಅಬ್ಬರಿಸಿತ್ತು. ಇದೀಗ ಹತ್ತು ದಿನಗಳಲ್ಲಿ 3.32 ಕೋಟಿ ಗಳಿಕೆ ಮಾಡುವ ಮೂಲಕ ಪವನ್ ಕಲ್ಯಾಣ್ ನಟನೆಯ ಚಿತ್ರ ಜಲ್ಸಾದ ಮರು ಬಿಡುಗಡೆ ಕಲೆಕ್ಷನ್ ಅನ್ನು ಆರೆಂಜ್ ಚಿತ್ರ ಹಿಂದಿಕ್ಕಿದೆ. ಇನ್ನು ಕಳೆದ ತಿಂಗಳು ಆರ್ ಆರ್ ಆರ್ ಚಿತ್ರ ಕೂಡ ಮರುಬಿಡುಗಡೆಯಾಗಿತ್ತು. ಆದರೆ ಆರ್ಆರ್ಆರ್‌ಗಿಂತ ಹೆಚ್ಚಿನ ಗಳಿಕೆಯನ್ನು ಆರೆಂಜ್ ಚಿತ್ರ ಮಾಡಿದೆ.

ಆರ್ ಆರ್ ಆರ್ ಚಿತ್ರ ಮರುಬಿಡುಗಡೆಯಾದಾಗ 1.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆರೆಂಜ್ 3.32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮರುಬಿಡುಗಡೆ ಕಲೆಕ್ಷನ್‌ನಲ್ಲಿ ಆರ್ಆರ್ಆರ್ ಚಿತ್ರವನ್ನೂ ಹಿಂದಿಕ್ಕಿದೆ. ಇನ್ನು ಮರುಬಿಡುಗಡೆಯಾದಾಗ ಅತಿಹೆಚ್ಚು ಗಳಿಕೆ ಮಾಡಿರುವ ಚಿತ್ರಗಳ ಪಟ್ಟಿಯಲ್ಲಿ ಆರೆಂಜ್ ಚಿತ್ರ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಈ ಪಟ್ಟಿಯಲ್ಲಿ ಯಾವ ತಂಡಗಳು ಯಾವ ಸ್ಥಾನ ಪಡೆದಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.. .
1. ಪವನ್ ಕಲ್ಯಾಣ್ ನಟನೆಯ ಖುಷಿ ಮರು ಬಿಡುಗಡೆಯಾದಾಗ 7.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
2. ರಾಮ್ ಚರಣ್ ನಟನೆಯ ಆರೆಂಜ್ 3.32 ಕೋಟಿ ರೂಪಾಯಿ ಎರಡನೇ ಸ್ಥಾನದಲ್ಲಿದೆ.
3. ಪವನ್ ಕಲ್ಯಾಣ್ ನಟನೆಯ ಜಲ್ಸಾ ಚಿತ್ರ ಮರುಬಿಡುಗಡೆಯಲ್ಲಿ 3.2 ಕೋಟಿ ಗಳಿಕೆ ಮಾಡಿದೆ. ಈ ಚಿತ್ರ ಮರು ಬಿಡುಗಡೆಯಾಗಿ ಕೇವಲ ಒಂದು ದಿನದ ಪ್ರದರ್ಶನಗಳನ್ನು ಮಾತ್ರ ಆಯೋಜಿಸಲಾಗಿತ್ತು.
4. ಮಹೇಶ್ ಬಾಬು ನಟನೆಯ ಒಕ್ಕಡು ಮರು ಬಿಡುಗಡೆಯಲ್ಲಿ 2.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ನಾಲ್ಕನೇ ಸ್ಥಾನದಲ್ಲಿದೆ.
5. ಮಹೇಶ್ ಬಾಬು ನಟನೆಯ ಪೊಕಿರಿ ಮರು ಬಿಡುಗಡೆಯಲ್ಲಿ 1.73 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರ ಮರು ಬಿಡುಗಡೆಯಾದಾಗ ಕೇವಲ ಒಂದು ದಿನದ ಪ್ರದರ್ಶನಗಳನ್ನು ಮಾತ್ರ ಆಯೋಜಿಸಲಾಗಿತ್ತು.


Click it and Unblock the Notifications











