ರಾಮ್‌ಚರಣ್ ನಟನೆಯ ಅಟ್ಟರ್ ಫ್ಲಾಪ್ ಸಿನಿಮಾ ರೀ ರಿಲೀಸ್: ಎಲ್ಲಾ 'RRR' ಸಕ್ಸಸ್ ಮಹಿಮೆ
ಇತ್ತೀಚೆಗೆ ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ತೆರೆಗೆ ತರುವ ಟ್ರೆಂಡ್ ಟಾಲಿವುಡ್‌ನಲ್ಲಿ ನಡೀತಿದೆ. 'ಪೋಕಿರಿ', 'ಜಲ್ಸಾ', 'ಗ್ಯಾಂಗ್ ಲೀಡರ್', 'ಚೆನ್ನಕೇಶವ ರೆಡ್ಡಿ' ಸೇರಿದಂತೆ ಹಲವು ಸಿನಿಮಾಗಳು ಮತ್ತೆ ಪ್ರೇಕ್ಷಕರ ಮುಂದ ಬಂದು ಸದ್ದು ಮಾಡಿದ್ದವು. ಇದೀಗ ರಾಮ್‌ಚರಣ್ ನಟನೆಯ ಫ್ಲಾಪ್ ಸಿನಿಮಾವೊಂದನ್ನು ರಿಲೀಸ್ ಮಾಡಲಾಗುತ್ತಿದೆ. ಇದು ಕೆಲವರಿಗೆ ಅಚ್ಚರಿ ತಂದಿದೆ.
ಸಾಮಾನ್ಯವಾಗಿ ಹಿಟ್ ಸಿನಿಮಾಗಳು ರೀ ರಿಲೀಸ್ ಆದರೆ ಮತ್ತೆ ಅಭಿಮಾನಿಗಳು ನೋಡಲು ಇಷ್ಟಪಡುತ್ತಾರೆ. ಆದರೆ ರಾಮ್‌ಚರಣ್ ನಟನೆಯ ಫ್ಲಾಪ್ ಸಿನಿಮಾವನ್ನು ಅವರ ಹುಟ್ಟುಹಬ್ಬಕ್ಕೆ ತೆರೆಗೆ ತರಲಾಗುತ್ತಿದೆ. ಈ ವಿಚಾರವನ್ನು ಸ್ವತಃ ಚಿತ್ರದ ನಿರ್ಮಾಪಕ ನಾಗಬಾಬು ಘೋಷಿಸಿದ್ದಾರೆ. ಇದೇ ಸಿನಿಮಾದಿಂದ ಸಾಕಷ್ಟು ನಷ್ಟ ಮಾಡಿಕೊಂಡಿದ್ದಾಗಿ ಈ ಹಿಂದೆ ನಾಗಬಾಬು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಅಂದಹಾಗೆ ಈ ಸಿನಿಮಾ ರೀ- ರಿಲೀಸ್‌ನಿಂದ ಬರುವ ಹಣವನ್ನು ಸಹೋದರನ ಜನಸೇನಾ ಪಕ್ಷಕ್ಕೆ ನೀಡುವುದಾಗಿ ನಾಗಬಾಬು ತಿಳಿಸಿದ್ದಾರೆ.

13 ವರ್ಷಗಳ ಹಿಂದೆ ರಾಮ್‌ಚರಣ್ ನಟನೆಯ 'ಆರೆಂಜ್' ಸಿನಿಮಾ ತೆರೆಕಂಡು ಫ್ಲಾಪ್ ಆಗಿತ್ತು. ಭಾಸ್ಕರ್ ಆಕ್ಷನ್ ಕಟ್ ಹೇಳಿದ್ದ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟ್ರೈನರ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿತ್ತು. 'ಮಗಧೀರ' ಬ್ಲಾಕ್‌ಬಸ್ಟರ್ ಹಿಟ್ ಬೆನ್ನಲ್ಲೇ ಬಂದಿದ್ದ ಸಿನಿಮಾ ಮಕಾಡೆ ಮಲಗಿತ್ತು. ಚಿತ್ರದಲ್ಲಿ ಜೆನಿಲಿಯಾ ನಾಯಕಿಯಾಗಿ ಮಿಂಚಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೋತರು ಕೆಲ ಪ್ರೇಕ್ಷಕರು ಅದ್ಭುತ ಸಿನಿಮಾ ಎಂದರು. ಕಲ್ಟ್ ಕ್ಲಾಸಿಕ್ ಸಿನಿಮಾ ಎಂದು ಕೊಂಡಾಡುತ್ತಲೇ ಇರುತ್ತಾರೆ. ಸರಿಯಾದ ಸಮಯದಲ್ಲಿ ರಿಲೀಸ್ ಮಾಡದಿದ್ದಕ್ಕೆ ಸೋತಿದೆ. ರೀ ರಿಲೀಸ್ ಮಾಡಿ ಮಾಡಿ ಎಂದು ಕೇಳುತ್ತಿದ್ದರು.
ಮಾರ್ಚ್ 27ರಂದು ರಾಮ್‌ಚರಣ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 'RRR' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಚರಣ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ 'ನಾಟು ನಾಟು' ಸಾಂಗ್ ಆಸ್ಕರ್ ಪ್ರಶಸ್ತಿ ಗೆದ್ದಿತ್ತು. ಎಲ್ಲೆಲ್ಲೂ ಈಗ ರಾಮ್‌ಚರಣ್ ಹವಾ ಜೋರಾಗಿದೆ. ಇದೇ ಸಮಯದಲ್ಲಿ 'ಆರೆಂಜ್' ಸಿನಿಮಾ ರಿಲೀಸ್ ಮಾಡಿದರೆ ಸಕ್ಸಸ್ ಗ್ಯಾರೆಂಟಿ ಎನ್ನುವ ಲೆಕ್ಕಾಚಾರ ನಡೀತಿದೆ. ಹ್ಯಾರಿಸ್ ಜಯರಾಜ್ ಮ್ಯೂಸಿಕ್‌ನಲ್ಲಿ ಬಂದಿದ್ದ 'ಆರೆಂಜ್' ಸಿನಿಮಾ ಆಲ್ಬಮ್ ಹಿಟ್ ಆಗಿತ್ತು. ಇವತ್ತಿಗೂ ಆ ಸಾಂಗ್ ಸಿನಿರಸಿಕರು ಮರೆತ್ತಿಲ್ಲ. ಮೊದಲಿಗೆ 'ಮಗಧೀರ' ಚಿತ್ರವನ್ನು ಚರಣ್ ಹುಟ್ಟುಹಬ್ಬಕ್ಕೆ ರೀ ರಿಲೀಸ್ ಮಾಡುವುದಾಗಿ ಹೇಳಲಾಗಿತ್ತು. ಆದರೆ 'ಮಗಧೀರ' ಬದಲು 'ಆರೆಂಜ್' ಸಿನಿಮಾ ತೆರೆಗೆ ತರಲಾಗುತ್ತಿದೆ.

ಬಹುತೇಕ ಸಿನಿಮಾ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣಗೊಂಡಿತ್ತು. ಅವತ್ತಿನ ಕಾಲಕ್ಕೆ ಬರೋಬ್ಬರಿ 46 ಕೋಟಿ ಬಜೆಟ್‌ನಲ್ಲಿ 'ಆರೆಂಜ್' ಸಿನಿಮಾ ನಿರ್ಮಾಣ ಆಗಿತ್ತು. ಆದರೆ 20 ಕೋಟಿ ರೂ. ಶೇರ್ ತಂದುಕೊಟ್ಟಿತ್ತು. 25 ಕೋಟಿ ರೂ. ನಷ್ಟ ಅನುಭವಿಸುವಂತಾಗಿತ್ತು. ಆಗ ತಾನೇ 'ಬೊಮ್ಮರಿಲ್ಲು' ರೀತಿಯ ಹಿಟ್ ಕೊಟ್ಟಿದ್ದ ನಿರ್ದೇಶಕ ಭಾಸ್ಕರ್, 'ಮಗಧೀರ'ನಾಗಿ ಗೆದ್ದಿದ್ದ ಚರಣ್ ಸೇರಿದರೆ ಬಾಕ್ಸಾಫೀಸ್ ಧೂಳಿಪಟ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದ್ದ ನಾಗಬಾಬು ಸಿನಿಮಾ ಸೋಲಿನಿಂದ ಖಿನ್ನತೆಗೆ ಒಳಗಾಗುವಂತಾಗಿತ್ತು. ಅಲ್ಲಿಂದ ಮುಂದೆ ಬಹಳ ದಿನಗಳ ಕಾಲ ಮೆಗಾ ಬ್ರದರ್ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲಿಲ್ಲ.
ಒಟ್ನಲ್ಲಿ ರಾಮ್‌ಚರಣ್ ಹುಟ್ಟುಹಬ್ಬಕ್ಕೆ 'ಆರೆಂಜ್' ಸಿನಿಮಾ ರೀ ರಿಲೀಸ್ ಆಗುತ್ತಿರುವುದು ಮೆಗಾ ಫ್ಯಾನ್ಸ್‌ಗೆ ಸಂತಸ ತಂದಿದೆ. ಜೊತೆಗೆ ಶಂಕರ್ ನಿರ್ದೇಶನದಲ್ಲಿ ನಟಿಸುತ್ತಿರುವ ಸಿನಿಮಾ ಟೈಟಲ್ ಟೀಸರ್ ಕೂಡ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ 'CEO' ಎನ್ನುವ ಟೈಟಲ್ ಫೈನಲ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಬಾರಿ ಮೆಗಾ ಪವರ್ ಸ್ಟಾರ್ ಬರ್ತ್‌ಡೇ ಸಖರ್ ಗ್ರ್ಯಾಂಡ್ ಆಗಿ ಇರಲಿದೆ.


Click it and Unblock the Notifications











